ಕೆಪಿಎಸ್‌ಸಿ ನೇಮಕಾತಿ ಹಗರಣದ ತನಿಖೆಗೆ ಎಸ್‌ಐಟಿ ರಚಿಸಿದ ಹೈಕೋರ್ಟ್‌: ತನಿಖಾ ವರದಿ ಸಲ್ಲಿಸಲು 100 ದಿನಗಳ ಗಡುವು

ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ನಿರಾಕರಿಸಿದ ನ್ಯಾಯಾಲಯ; ಸಿಐಡಿಯಲ್ಲಿಯೂ ಮುಂದುವರಿಸಲು ಒಲ್ಲದ ಪೀಠವು ಐವರು ಐಪಿಎಸ್‌ ಅಧಿಕಾರಿಗಳ ವಿಶೇಷ ತನಿಖಾ ದಳ ರಚಿಸಿ, ಹೊಣೆ ವಹಿಸಿದೆ.
Karnataka HC and KPSC
Karnataka HC and KPSC
Published on

ಕರ್ನಾಟಕ ಲೋಕಸೇವಾ ಆಯೋಗದಲ್ಲಿನ (ಕೆಪಿಎಸ್‌ಸಿ) ಪಶು ವೈದ್ಯಾಧಿಕಾರಿ ಹಾಗೂ ಇತರೆ ನೇಮಕಾತಿ ಹಗರಣಗಳ ಸಂಬಂಧ ಹೊಸದಾಗಿ ತನಿಖೆ ನಡೆಸಲು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ನೇತೃತ್ವದಲ್ಲಿ ಐವರು ಐಪಿಎಸ್‌ ಅಧಿಕಾರಿಗಳ ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ಸೋಮವಾರ ಹೈಕೋರ್ಟ್‌ ರಚಿಸುವ ಮೂಲಕ ಮಹತ್ವದ ಆದೇಶ ಹೊರಡಿಸಿದೆ.

ಅಲ್ಲದೇ, 100 ದಿನಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು ಎಂಬ ಗಡುವನ್ನೂ ಎಸ್‌ಐಟಿಗೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಿಧಿಸಿದ್ದು, ಪ್ರತಿ ೩೦ ದಿನಗಳಿಗೊಮ್ಮೆ ತನಿಖೆಯ ಪ್ರಗತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.

Justice M Nagaprasanna
Justice M Nagaprasanna

ಕೆಪಿಎಸ್‌ಸಿ ಹಗರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಬೇಕು ಎಂಬ ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತು ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘದ ಮನವಿ ಹಾಗೂ ಅಪರಾಧ ತನಿಖಾ ದಳ (ಸಿಐಡಿ) ತನಿಖೆ ನಡೆಸಲು ಸಮರ್ಥವಾಗಿರುವುದರಿಂದ ಅಲ್ಲಿಯೇ ತನಿಖೆ ಮುಂದುವರಿಸಲು ಅನುಮತಿಸಬೇಕು ಎಂಬ ರಾಜ್ಯ ಸರ್ಕಾರದ ವಾದವನ್ನು ಹೈಕೋರ್ಟ್‌ ಸಾರಸಗಟಾಗಿ ತಿರಸ್ಕರಿಸಿದೆ.

ಡಿಜಿಪಿ ಅಲೋಕ್‌ ಕುಮಾರ್‌, ರಾಜ್ಯದ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕಿಯಾಗಿರುವ ಐಜಿಪಿ ಡಾ. ದಿವ್ಯಾ ಗೋಪಿನಾಥ್‌, ಉಪ ಪೊಲೀಸ್‌ ಆಯುಕ್ತರಾದ ಅನೂಪ್‌ ಶೆಟ್ಟಿ ಮತ್ತು ಶಮಾ ಮಿಶ್ರಾ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ಕುಶಾಲ್‌ ಚೌಕ್ಸೆ ನೇತೃತ್ವದ ತಂಡಕ್ಕೆ ಸಿಐಡಿಯು ಇದುವರೆಗೆ ತಾನು ನಡೆಸಿರುವ ತನಿಖಾ ವರದಿ ಮತ್ತು ಸಂಗ್ರಹಿಸಿರುವ ಎಲ್ಲಾ ದಾಖಲೆಗಳನ್ನು ಒಂದು ವಾರದಲ್ಲಿ ಸಲ್ಲಿಸಬೇಕು. ವಿಧಾನಸೌಧ ಠಾಣೆಯಲ್ಲಿ ದಾಖಲಾಗಿರುವ ಎರಡೂ ಪ್ರಕರಣಗಳ ತನಿಖೆ ಮತ್ತು ಇವುಗಳ ತನಿಖೆಯ ಸಂದರ್ಭದಲ್ಲಿ ಹೊರಹೊಮ್ಮುವ ಎಲ್ಲಾ ವಿಚಾರಗಳ ಕುರಿತು ಎಸ್‌ಐಟಿಯು ವಿಸ್ತೃತವಾದ ತನಿಖೆ ನಡೆಸಬೇಕು ಎಂದು ಹೈಕೋರ್ಟ್‌ ನಿರ್ದೇಶಿಸಿದೆ.

IPS Alok Kumar
IPS Alok KumarTwitter

ಹಗರಣದ ಸಂಬಂಧ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡಿದು ಎಂದು ತಿಳಿದು ಬಂದಿದ್ದು, ಇ ಡಿ ಮತ್ತು ಎಸ್‌ಐಟಿಯು ಪರಸ್ಪರ ಸಹಕಾರ ಮತ್ತು ನೆರವಿನ ಮೂಲಕ ತನಿಖೆ ನಡೆಸಬೇಕು ಎಂದು ಎಸ್‌ಐಟಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಸಿಐಡಿ ಮತ್ತು ವ್ಯಾಪ್ತಿ ಹೊಂದಿರುವ ಪೊಲೀಸರು ಎಸ್‌ಐಟಿ ಕೋರುವ ಎಲ್ಲಾ ನೆರವು ಒದಗಿಸಬೇಕು. ಸರ್ಕಾರದ ಎಲ್ಲಾ ಇಲಾಖೆಗಳು, ತನಿಖಾ ಸಂಸ್ಥೆಗಳು, ಸಾರ್ವಜನಿಕ ಪ್ರಾಧಿಕಾರಗಳು ಮತ್ತು ಸಂಬಂಧಿತ ಅಧಿಕಾರಿಗಳು ಸಂಪೂರ್ಣವಾದ ಸಹಕಾರವನ್ನು ಎಸ್‌ಐಟಿಗೆ ನೀಡಬೇಕು. ತನಗೆ ಅಗತ್ಯವಾದ ವಿಧಿ ವಿಜ್ಞಾನ ಪ್ರಯೋಗಾಲಯದ ಸೌಲಭ್ಯ, ಸೈಬರ್‌, ಆರ್ಥಿಕ, ತಾಂತ್ರಿಕ ಮತ್ತು ಇತರೆ ವಿಶೇಷ ನೆರವು ಪಡೆಯಲು ಎಸ್‌ಐಟಿಯು ಸ್ವತಂತ್ರವಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಅರ್ಹತೆಯ ಮೇಲೆ ಈ ಆದೇಶದಲ್ಲಿ ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯದ ಪ್ರಭಾವಕ್ಕೆ ಒಳಗಾಗದೇ ಸ್ವತಂತ್ರ ಮತ್ತು ಪಾರದರ್ಶಕವಾಗಿ ಎಸ್‌ಐಟಿ ತನಿಖೆ ನಡೆಸಬೇಕು. ಯಾವುದೇ ಅಧಿಕಾರಿ ಅಥವಾ ಪ್ರಾಧಿಕಾರ ತನಿಖೆಯಲ್ಲಿ ಮೂಗುತೂರಿಸಬಾರದು ಮತ್ತು ಪ್ರಭಾವಿಸಲು ಯತ್ನಿಸಬಾರದು. ಈಗ ತಾನು ರಚಿಸಿರುವ ಎಸ್‌ಐಟಿಯನ್ನು ಪೊಲೀಸ್‌ ಠಾಣೆಯನ್ನಾಗಿಸಿ ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಆದೇಶದಲ್ಲಿನ ಅಭಿಪ್ರಾಯಗಳು ಅಗತ್ಯ, ಸ್ವಭಾವ ಮತ್ತು ತನಿಖಾ ಸಂಸ್ಥೆಗೆ ಸೀಮಿತವಾಗಿದ್ದು, ಇದು ಯಾವುದೇ ವ್ಯಕ್ತಿ ಅಪರಾಧಿ, ಮುಗ್ಧ ಅಥವಾ ಅಪರಾಧದ ಹೊಣೆಗಾರಿಕೆ ಎಂದು ಭಾವಿಸಕೂಡದರು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಇನ್ನು, ಪ್ರಕರಣ ರದ್ದತಿ ಕೋರಿ ಕೆಲವು ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಗಳನ್ನು ಎಸ್‌ಐಟಿ ಸಲ್ಲಿಸಲಿರುವ ವರದಿಯನ್ನು ಆಧರಿಸಿ ಪರಿಗಣಿಸಲಾಗುವುದು. ಹೀಗಾಗಿ, ಈ ಅರ್ಜಿಗಳು ಬಾಕಿ ಉಳಿಯಲಿವೆ ಎಂದು ಪೀಠ ನಿರ್ದೇಶಿಸಿದೆ.

"ಸಾವಿರಾರು ಯುವಕ-ಯುವತಿಯರು ತಮ್ಮ ಜೀವನದ ಅತ್ಯಂತ ಫಲವತ್ತಾದ ವರ್ಷಗಳನ್ನು ಈ ಪರೀಕ್ಷೆಗಳ ತಯಾರಿಯಲ್ಲಿ ಕಳೆದಿರುತ್ತಾರೆ. ಆದರೆ, ಕೆಪಿಎಸ್‌ಸಿ ನೇಮಕಾತಿ ಹಗರಣಗಳು ಕಳಂಕಿತ ಆಯ್ಕೆಯ ಮೂಲಕ ಹುದ್ದೆಗಳ ಅರ್ಹತೆಯನ್ನೇ ಕೆಡಿಸಿಬಿಡುತ್ತವೆ. ಸಾರ್ವಜನಿಕ ವಿಶ್ವಾಸ ಮತ್ತು ಭರವಸೆಯನ್ನೇ ನಾಶಮಾಡುತ್ತವೆ ಮತ್ತು ಅಂತಿಮವಾಗಿ ಪ್ರಜಾಪ್ರಭುತ್ವವನ್ನೇ ಗಾಯಗೊಳಿಸುತ್ತವೆ" ಎಂದು ಪೀಠ ಆದೇಶದಲ್ಲಿ ಬೇಸರಿಸಿದೆ.

"ಕೆಪಿಎಸ್‌ಸಿಗೆ ವಹಿಸಲಾಗಿರುವ ಅಧಿಕಾರವು ಸಾಮಾನ್ಯ ಆಡಳಿತಾತ್ಮಕ ಅಧಿಕಾರವಲ್ಲ. ಇದೊಂದು ಸಾಂವಿಧಾನಿಕ ನಂಬಿಕೆಯನ್ನು ಹೊಂದಿದ ಸಾರ್ವಜನಿಕ ಉದ್ಯೋಗ ನೀಡುವ ದ್ವಾರದ ಸಾಂವಿಧಾನಿಕ ಕಾವಲುಗಾರ. ಹಾಗಾಗಿ, ಸಾರ್ವಜನಿಕ ನೇಮಕಾತಿ ಕೇವಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕಸರತ್ತಲ್ಲ. ಪ್ರತಿಯೊಬ್ಬ ಆಕಾಂಕ್ಷಿಯ ನಂಬಿಕೆಯನ್ನು ಯಾರದೋ ಪ್ರಭಾವ, ಪಕ್ಷಪಾತ ಅಥವಾ ಭ್ರಷ್ಟಾಚಾರದ ಬಲಿಪೀಠದಲ್ಲಿ ತಂದು ನಿಲ್ಲಿಸಲು ಆಗದು" ಎಂದು ಪೀಠ ತೀರ್ಪಿನಲ್ಲಿ ವರ್ಣಿಸಿದೆ.

"ಹಗರಣವು ಸಂವಿಧಾನದ 14 ಮತ್ತು 16ನೇ ವಿಧಿಯ ಅಡಿಯಲ್ಲಿ ಕೊಡಮಾಡಲಾಗಿರುವ ಸಮಾನತೆಯ ಬೇರುಗಳನ್ನು ಅಲುಗಾಡಿಸಿದೆ ಮತ್ತು ಸಾರ್ವಜನಿಕ ಆಡಳಿತದ ಪಾವಿತ್ರ್ಯವನ್ನು ಕಳಂಕಗೊಳಿಸಿದೆ" ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದ್ದು, ಪ್ರಕರಣದ ವಿಚಾರಣೆಯನ್ನು 2027ರ ಜನವರಿ 5ಕ್ಕೆ ಮುಂದೂಡಿದೆ.

ಅರ್ಜಿದಾರರ ಪರವಾಗಿ ವಕೀಲರಾದ ವೆಂಕಟೇಶ್‌ ದಳವಾಯಿ, ಗಿರೀಶ್‌ ಭಾರದ್ವಾಜ್‌, ಪಿ ಬಿ ಅಜಿತ್‌, ರಜತ್‌, ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಮತ್ತು ಸಿಬಿಐ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ವಾದ ಮಂಡಿಸಿದ್ದರು.

[ತೀರ್ಪು ಓದಲು ಇಲ್ಲಿ ಕ್ಲಿಕ್ಕಿಸಿ]

Attachment
PDF
Raj Mohammed and others v. State of Karnataka
Preview
Kannada Bar & Bench
kannada.barandbench.com