ಕೆಪಿಟಿಸಿಎಲ್‌ ಸಹಾಯಕ ಎಂಜಿನಿಯರ್‌ ಹುದ್ದೆ ಬಡ್ತಿ: ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವುದಕ್ಕೆ ಹೈಕೋರ್ಟ್‌ ನಿರ್ಬಂಧ

ತಮ್ಮ ಆಕ್ಷೇಪಣೆ ಪರಿಗಣಿಸದೆ ಸಹಾಯಕ ಎಂಜಿನಿಯರ್ ಹುದ್ದೆಗೆ ಬಡ್ತಿ ಅಂತಿಮ ಪಟ್ಟಿ ಪ್ರಕಟಿಸುವ ಪ್ರಕ್ರಿಯೆಯನ್ನು ಕೆಪಿಟಿಸಿಎಲ್ ಮುಂದುವರಿಸಿದೆ ಎಂದು ಅರ್ಜಿದಾರರು ದೂರಿದ್ದರು.
Karnataka High Court
Karnataka High Court

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ (ಕೆಪಿಟಿಸಿಎಲ್) ಸಹಾಯಕ ಎಂಜಿನಿಯರ್ ಹುದ್ದೆಗೆ ಬಡ್ತಿಯ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವುದಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ಬಂಧ ಹೇರಿದೆ.

ಸಹಾಯಕ ಹುದ್ದೆಯ ಬಡ್ತಿಗೆ ಕೆಪಿಟಿಸಿಎಲ್ ಪ್ರಕಟಿಸಿದ್ದ ಸಂಭಾವ್ಯ ಹಿರಿಯರ ಪಟ್ಟಿಯನ್ನು ಪ್ರಶ್ನಿಸಿ ದಾವಣಗೆರೆ ನ್ಯಾಮತಿ ತಾಲ್ಲೂಕಿನ ಜೀನಹಳ್ಳಿ ಗ್ರಾಮದ ನಿವಾಸಿಯಾದ ಕೆಪಿಟಿಸಿಎಲ್ ಕಿರಿಯ ಎಂಜಿನಿಯರ್ ಬಿ ಸುಮಾ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ರಜಾಕಾಲೀನ ಏಕಸದಸ್ಯ ಪೀಠವು ನಡೆಸಿತು.

ಅರ್ಜಿದಾರರು ಕೆಪಿಟಿಸಿಎಲ್ ಕಿರಿಯ ಎಂಜಿನಿಯರ್ ಹುದ್ದೆಗೆ ನೇಮಕವಾಗಿದ್ದರು. ಸದ್ಯ ಪ್ರಭಾರಿ ಸಹಾಯಕ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೇವಾ ಹಿರಿತನದ ಮೇಲೆ ಸಹಾಯಕ ಎಂಜಿನಿಯರ್ ಹುದ್ದೆಗೆ ಬಡ್ತಿ ನೀಡುವ ಕಾರಣಕ್ಕಾಗಿ 2022ರ ಜನವರಿ 10ರಂದು ಕೆಪಿಟಿಸಿಎಲ್ ಸಂಭಾವ್ಯ ಹಿರಿಯರ ಪಟ್ಟಿ ಪ್ರಕಟಿಸಿತ್ತು. ಈ ಪಟ್ಟಿಗೆ ಜನವರಿ 12 ಮತ್ತು 13ರಂದು ಆಕ್ಷೇಪಣೆ ಸಲ್ಲಿಸಿದ್ದ ಸುಮಾ, ಸಹಾಯಕ ಎಂಜಿನಿಯರ್ ಹುದ್ದೆ ಬಡ್ತಿ ಪಡೆಯಲು ಹೈದರಾಬಾದ್ ಕರ್ನಾಟಕ ಪ್ರದೇಶದ ಮೀಸಲು ಕೋಟಾದಡಿ ತಾವು ಅರ್ಹರಾಗಿದ್ದೇವೆ ಎಂದು ತಿಳಿಸಿದ್ದರು.

ತಮ್ಮ ಆಕ್ಷೇಪಣೆ ಪರಿಗಣಿಸದೆ ಸಹಾಯಕ ಎಂಜಿನಿಯರ್ ಹುದ್ದೆಗೆ ಬಡ್ತಿ ಅಂತಿಮ ಪಟ್ಟಿ ಪ್ರಕಟಿಸುವ ಪ್ರಕ್ರಿಯೆಯನ್ನು ಕೆಪಿಟಿಸಿಎಲ್ ಮುಂದುವರಿಸಿದೆ ಎಂದು ಸುಮಾ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.

ಇದನ್ನು ಪರಿಗಣಿಸಿದ ಹೈಕೋರ್ಟ್‌, ಸುಮಾ ಅವರು ಸಹಾಯಕ ಎಂಜಿನಿಯರ್ ಹುದ್ದೆ ಬಡ್ತಿ ಪಡೆಯಲು ಹೈದರಾಬಾದ್ ಕರ್ನಾಟಕ ಪ್ರದೇಶದ ಮೀಸಲು ಕೋಟಾದಡಿ ಅರ್ಹರಾಗಿದ್ದಾರೋ ಅಥವಾ ಇಲ್ಲವೋ ಎಂಬ ಬಗ್ಗೆ ಪರಿಗಣಿಸಿ ನಾಲ್ಕು ವಾರಗಳಲ್ಲಿ ಸೂಕ್ತ ಆದೇಶ ಹೊರಡಿಸಬೇಕು. ಅಲ್ಲಿಯವರಿಗೆ ಸಹಾಯಕ ಎಂಜಿನಿಯರ್ ಹುದ್ದೆಗೆ ಬಡ್ತಿಯ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಬಾರದು ಎಂದು ಕೆಪಿಟಿಸಿಎಲ್‌ಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.

Related Stories

No stories found.
Kannada Bar & Bench
kannada.barandbench.com