ಮಾನಸಿಕ ಖಿನ್ನತೆಯಿಂದ 632 ದಿನ ಕರ್ತವ್ಯಕ್ಕೆ ಗೈರಾಗಿದ್ದ ಉದ್ಯೋಗಿ: ಮರು ನೇಮಕ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

ಮುಂದೆ ಕರ್ತವ್ಯಕ್ಕೆ ಗೈರಾಗುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟ ಹೊರತಾಗಿಯೂ ಗೈರಾದ ಹಿನ್ನೆಲೆಯಲ್ಲಿ ಕಿರಣ್‌ ಅವರನ್ನು 2014ರ ಜನವರಿ 3ರಂದು ಸೇವೆಯಿಂದ ವಜಾ ಮಾಡಲಾಗಿದೆ ಎಂದು ಕೆಪಿಟಿಸಿಎಲ್‌ ವಾದಿಸಿತ್ತು.
Chief Justice P B Varale and Justice Krishna S. Dixit
Chief Justice P B Varale and Justice Krishna S. Dixit

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರಿಂದ ಅನುಮತಿ ಪಡೆಯದೇ ಬಹುಕಾಲ ಸೇವೆಗೆ ಗೈರಾಗಿದ್ದ ಉದ್ಯೋಗಿಯೊಬ್ಬರನ್ನು ಸೇವೆಗೆ ಮರು ನೇಮಕ ಮಾಡುವಂತೆ ಕೆಪಿಟಿಸಿಎಲ್‌ಗೆ ನಿರ್ದೇಶಿಸಿದ್ದ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠ ಎತ್ತಿ ಹಿಡಿದಿದೆ.

ಕೆಪಿಟಿಸಿಎಲ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.

“ಈ ದಿನಗಳಲ್ಲಿ ಯಾರೂ ಉದ್ಯೋಗ ಬಿಡುವುದಿಲ್ಲ. ಕೆಪಿಟಿಸಿಎಲ್‌ ಸರ್ಕಾರದ ಸಂಸ್ಥೆಯಾಗಿದ್ದು, ನೀವು ನ್ಯಾಯಯುತವಾಗಿ ವರ್ತಿಸಬೇಕು. ಏಕಸದಸ್ಯ ಪೀಠವು ತನ್ನ ಆದೇಶದಲ್ಲಿ ಸಕಾರಣಗಳನ್ನು ನೀಡಿದೆ” ಎಂದು ವಿಭಾಗೀಯ ಪೀಠ ಹೇಳಿದೆ.

“ಉದ್ಯೋಗಿ ಎಸ್‌ ಕಿರಣ್‌ ಅವರನ್ನು ಸೇವೆಗೆ ಮರು ನೇಮಕ ಮಾಡಿದ್ದನ್ನು ಪ್ರಶ್ನಿಸಿದ್ದ ಕೆಪಿಟಿಸಿಎಲ್‌ ಅರ್ಜಿಯನ್ನು ಏಕಸದಸ್ಯ ಪೀಠವು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿದ್ದ ಮೇಲ್ಮನವಿಯನ್ನೂ ಈಗ ವಿಭಾಗೀಯ ಪೀಠ ವಜಾ ಮಾಡಿದೆ. ಪ್ರತಿವಾದಿ ಕಿರಣ್‌ ಅವರು ಉದ್ದೇಶಪೂರ್ವಕವಾಗಿ ತಮ್ಮ ಕರ್ತವ್ಯಕ್ಕೆ ಗೈರಾಗಿಲ್ಲ. ತಾನು ಗೈರಾಗಿದ್ದಕ್ಕೆ ಸಾಕಷ್ಟು ಸಕಾರಣಗಳನ್ನು ಅವರು ನೀಡಿದ್ದಾರೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

2008ರ ಜನವರಿ 30ರಂದು ಕಿರಣ್‌ ಅವರು ಕೆಪಿಟಿಸಿಎಲ್‌ನಲ್ಲಿ ಸ್ಟೇಷನ್‌ ಅಟೆಂಡೆಂಟ್‌ ಆಗಿ (ಗ್ರೇಡ್‌-2) ಕೆಲಸ ಆರಂಭಿಸಿದ್ದರು. ಆನಂತರ 2010ರ ಬಳಿಕ ಅವರು ಅನುಮತಿ ಪಡೆಯದೇ ಕರ್ತವ್ಯಕ್ಕೆ ಗೈರಾಗುತ್ತಿದ್ದರು. ಒಟ್ಟಾರೆ 632 ದಿನಗಳ ಕಾಲ ಅನುಮತಿ ಇಲ್ಲದೇ ಕರ್ತವ್ಯಕ್ಕೆ ಗೈರಾಗಿದ್ದರಿಂದ 2014ರ ಜನವರಿ 3ರಂದು ಕಿರಣ್‌ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು.

ಇದನ್ನು ಪ್ರಶ್ನಿಸಿ ಕಿರಣ್‌ ಅವರು ಕಾರ್ಮಿಕ ನ್ಯಾಯಾಲಯದ ಮೆಟ್ಟಿಲೇರಿದ್ದು, 2019ರ ಮಾರ್ಚ್‌ 21ರಂದು ಕಾರ್ಮಿಕ ನ್ಯಾಯಾಲಯವು ಕೆಪಿಟಿಸಿಎಲ್‌ ಆದೇಶ ಬದಿಗೆ ಸರಿಸಿತ್ತು. ಅಲ್ಲದೇ, ಕಿರಣ್‌ ಅವರು ಹಿಂದಿನ ವೇತನಕ್ಕೆ ಅರ್ಹರಲ್ಲ. ಆದರೆ, ಸೇವೆಯಲ್ಲಿ ಮುಂದುವರಿಯಲು ಅರ್ಹರು” ಎಂದು ಆದೇಶಿಸಿತ್ತು.

ಕಿರಣ್‌ ಅವರು ಒಂಭತ್ತು ಸಂದರ್ಭದಲ್ಲಿ ಒಟ್ಟಾರೆ 632 ದಿನ ಕರ್ತವ್ಯಕ್ಕೆ ಗೈರಾಗಿದ್ದು, 2012ರ ಆಗಸ್ಟ್‌ 24ರಂದು ಮುಚ್ಚಳಿಕೆ ಬರೆದುಕೊಟ್ಟು ತಾನು ಮುಂದೆ ಕರ್ತವ್ಯಕ್ಕೆ ಗೈರಾಗಲ್ಲ ಎಂದು ವಾಗ್ದಾನ ನೀಡಿದ್ದಾರೆ. ಒಂದೊಮ್ಮೆ ಗೈರಾದರೆ ಸೇವೆಯಿಂದ ವಜಾ ಮಾಡಬಹುದು ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಅದಾಗ್ಯೂ, ಕರ್ತವ್ಯಕ್ಕೆ ಗೈರಾದ ಹಿನ್ನೆಲೆಯಲ್ಲಿ ಕಿರಣ್‌ ಅವರನ್ನು 2014ರ ಜನವರಿ 3ರಂದು ಸೇವೆಯಿಂದ ವಜಾ ಮಾಡಲಾಗಿದೆ ಎಂದು ಕೆಪಿಟಿಸಿಎಲ್‌ ವಾದಿಸಿತ್ತು.

ಇದಕ್ಕೆ ಆಕ್ಷೇಪಿಸಿದ್ದ ಕಿರಣ್‌ ಅವರು ತಾನು ಉದ್ದೇಶಪೂರ್ವಕವಾಗಿ ಕರ್ತವ್ಯಕ್ಕೆ ಗೈರಾಗಿಲ್ಲ. ತಾನು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ನಿರಂತರವಾಗಿ ಚಿಕಿತ್ಸೆಯಲ್ಲಿದ್ದೆ. ಹಲವು ಬಾರಿ ಮನೆ ತೊರೆದಿದ್ದು, ಮನೆಯವರಿಗೆ ತನ್ನನ್ನು ಪತ್ತೆ ಮಾಡಲು ಕಷ್ಟವಾಗಿದೆ. ವೈದ್ಯಕೀಯ ಚಿಕಿತ್ಸೆ ಪಡೆದಿರುವ ದಾಖಲೆಗಳನ್ನೂ ಸಲ್ಲಿಸಲಾಗಿದೆ ಎಂದಿದ್ದರು. ಈ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ.  

Attachment
PDF
KPTCL Vs Kiran S.pdf
Preview

Related Stories

No stories found.
Kannada Bar & Bench
kannada.barandbench.com