ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಶಾಹಿ-ಈದ್ಗಾ ಮಸೀದಿಯ ಆವರಣವನ್ನು ಪರಿಶೀಲಿಸಲು ಕೋರ್ಟ್ ಕಮಿಷನರ್ ನೇಮಿಸುವಂತೆ ಅಲಾಹಾಬಾದ್ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ.
ಹೈಕೋರ್ಟ್ ಪ್ರಕರಣದ ವಿಚಾರಣೆ ಮುಂದುವರೆಸಬಹುದಾದರೂ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವವರೆಗೆ ಆಯುಕ್ತರ ನೇಮಕ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ತಿಳಿಸಿತು.
ಕೋರ್ಟ್ ಕಮಿಷನರ್ ನೇಮಕಕ್ಕಾಗಿ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿ ತುಂಬಾ ಅಸ್ಪಷ್ಟ ಮತ್ತು ಬಹು ವಿಚಾರಗಳನ್ನು ಒಳಗೊಂಡಿದೆ ಎಂದು ಈ ಹಿಂದೆ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.
"(ಕೋರ್ಟ್ ಕಮಿಷನರ್ ನೇಮಕಕ್ಕಾಗಿ ಮಾಡಿದ) ಮನವಿ ತುಂಬಾ ಅಸ್ಪಷ್ಟವಾಗಿದೆ! ಅದು ಸೂಚ್ಯವಾಗಿರಬೇಕು. ನಿಮಗೇನು ಬೇಕೋ ಆ ಬಗ್ಗೆ ಸ್ಪಷ್ವಾಗಿರಬೇಕು ಅದನ್ನು ನೀವು ನ್ಯಾಯಾಲಯಕ್ಕೆ ಬಿಡುತ್ತೀರಿ. ಇದು ಬಹು ವಿಚಾರಗಳನ್ನು ಒಳಗೊಂಡಿದೆ" ಎಂದು ನ್ಯಾ. ಖನ್ನಾ ತಿಳಿಸಿದರು.
ಪ್ರಕರಣವನ್ನು ವರ್ಗಾಯಿಸಬೇಕೆಂಬ ವಿಚಾರವೂ ಬರುತ್ತಿದ್ದು ಪ್ರಕರಣದ ಪರಿಗಣನೆಗೆ ಕೆಲವು ಕಾನೂನು ಪ್ರಶ್ನೆಗಳು ಸಹ ಉದ್ಭವಿಸುತ್ತವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
"ನೋಟಿಸ್ ನೀಡಿ. ವರ್ಗಾವಣೆ ಪ್ರಕರಣದೊಂದಿಗೆ (ಈ ಮನವಿಯನ್ನು) ಲಗತ್ತಿಸಿ, ಜನವರಿ 23 ರಂದು ಪಟ್ಟಿ ಮಾಡಿ. ಹೈಕೋರ್ಟ್ ಮುಂದೆ ವಿಚಾರಣೆಗಳು ಮುಂದುವರಿಯಬಹುದು ಆದರೆ (ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿರುವ) ಮುಂದಿನ ದಿನದವರೆಗೆ ಕಮಿಷನರ್ ನೇಮಕ ಜಾರಿಗೆ ಬರುವಂತಿಲ್ಲ" ಎಂದು ಅದು ಆದೇಶಿಸಿದೆ.
ಕಳೆದ ವರ್ಷ ಡಿಸೆಂಬರ್ 14ರಂದು ಹಿಂದೂ ದೈವ ಭಗವಾನ್ ಶ್ರೀ ಕೃಷ್ಣ ವಿರಾಜ್ಮಾನ್ ಮತ್ತಿತರ ಏಳು ಹಿಂದೂ ಪಕ್ಷಕಾರರ ಪರವಾಗಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿತ್ತು.
ಮಥುರಾ ಶಾಹಿ ಈದ್ಗಾ ಮಸೀದಿಯನ್ನು ಕೃಷ್ಣ ಜನ್ಮಭೂಮಿ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಅರ್ಜಿದಾರರು (ಹಿಂದೂ ಪಕ್ಷಕಾರರು) ಹೈಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇರುವ ಮೂಲ ದಾವೆಯ ಭಾಗವಾಗಿ ಈ ಅರ್ಜಿ ಸಲ್ಲಿಸಿದ್ದರು.