ಮಥುರಾ ಕೃಷ್ಣ ಜನ್ಮಭೂಮಿ- ಈದ್ಗಾ ಮಸೀದಿ ವಿವಾದ: ದಾವೆ ವರ್ಗಾವಣೆ ಅರ್ಜಿ ವಿಚಾರಣೆಗೆ ಅಲಾಹಾಬಾದ್‌ ಹೈಕೋರ್ಟ್‌ ಸಮ್ಮತಿ

ಪ್ರಕರಣವು ಕೋಟ್ಯಂತರ ಕೃಷ್ಣನ ಭಕ್ತರಿಗೆ ಸಂಬಂಧಿಸಿದ್ದು, ರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವುದರಿಂದ ವಿಚಾರಣೆಯನ್ನು ಹೈಕೋರ್ಟ್‌ಗೆ ವರ್ಗಾವಣೆ ಮಾಡುವಂತೆ ಅರ್ಜಿದಾರರು ಕೋರಿದ್ದಾರೆ.
Krishna Janmabhumi Case
Krishna Janmabhumi Case
Published on

ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ವಿವಾದವನ್ನು ವಿಚಾರಣಾಧೀನ ನ್ಯಾಯಾಲಯದಿಂದ ಹೈಕೋರ್ಟ್‌ಗೆ ವರ್ಗಾವಣೆ ಮಾಡುವ ಸಂಬಂಧದ ಅರ್ಜಿ ವಿಚಾರಣೆಯನ್ನು ನಡೆಸಲು ಗುರುವಾರ ಅಲಾಹಾಬಾದ್‌ ಹೈಕೋರ್ಟ್‌ ಸಮ್ಮತಿಸಿದೆ [ಭಗವಾನ್‌ ಶ್ರೀಕೃಷ್ಣ ವಿರಾಜಮಾನ್‌ ಮತ್ತು ಏಳು ಮಂದಿ ಇತರರು ವರ್ಸಸ್‌ ಸುನ್ನಿ ಕೇಂದ್ರ ವಕ್ಫ್‌ ಮಂಡಳಿ].

ಪ್ರಕರಣವನ್ನು ಪರಿಗಣಿಸಬೇಕಿದೆ ಎಂದು ನ್ಯಾಯಮೂರ್ತಿ ನಳಿನ್‌ ಕುಮಾರ್‌ ಶ್ರೀವಾಸ್ತವ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿದ್ದು, ಹಿಂದೂ ಪಕ್ಷಕಾರರು ಸಲ್ಲಿಸಿರುವ ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವವರಿಗೆ ನೋಟಿಸ್‌ ಜಾರಿ ಮಾಡಿದೆ. ಪ್ರತಿವಾದಿಗಳಿಗೆ 28.02.2023ರ ಒಳಗೆ ಆಕ್ಷೇಪಣೆ ಸಲ್ಲಿಸಲು ಪೀಠವು ಆದೇಶಿಸಿದೆ.

ಕೃಷ್ಣ ಜನ್ಮಭೂಮಿ ಪ್ರದೇಶದಲ್ಲಿ ಮಥುರ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿರುವುದರಿಂದ ಅದನ್ನು ತೆರವು ಮಾಡುವಂತೆ ಸಿವಿಲ್‌ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಪ್ರಕರಣವು ಕೋಟ್ಯಂತರ ಕೃಷ್ಣನ ಭಕ್ತರಿಗೆ ಸಂಬಂಧಿಸಿದ್ದು, ರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವುದರಿಂದ ವಿಚಾರಣೆಯನ್ನು ಹೈಕೋರ್ಟ್‌ಗೆ ವರ್ಗಾವಣೆ ಮಾಡುವಂತೆ ಅರ್ಜಿದಾರರು ಕೋರಿದ್ದಾರೆ.

ಪ್ರಕರಣದಲ್ಲಿ ಕಾನೂನಿನ ಮಹತ್ವದ ಪ್ರಶ್ನೆಗಳಿದ್ದು, ಸಂವಿಧಾನದ ವ್ಯಾಖ್ಯಾನಕ್ಕೆ ಸಂಬಂಧಿಸಿದ ಹಲವಾರು ವಿಚಾರಗಳು ಸೇರಿವೆ ಎಂದು ಹೇಳಲಾಗಿದೆ. ಮಥುರಾದ ಹಿರಿಯ ಸಿವಿಲ್‌ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಪ್ರಾರಂಭಿಕ ದಾವೆ ಹೂಡಿದ ಬಳಿಕ ಅದನ್ನು ನಕಲಿ ಮಾಡಿ ಹಲವು ದಾವೆಗಳನ್ನು ಹೂಡಲಾಗಿದೆ. ಎಲ್ಲಾ ದಾವೆಗಳು ಒಂದೇ ಆಗಿದ್ದು, ಒಂದೇ ರೀತಿಯ ಪರಿಹಾರ ಕೋರಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

Also Read
ಕೃಷ್ಣ ಜನ್ಮಭೂಮಿ ವಿವಾದ: ಶಾಹಿ ಈದ್ಗಾ ಮಸೀದಿ ತೆರವು ಕೋರಿದ್ದ ಅರ್ಜಿ ವಿಚಾರಣೆ ಯೋಗ್ಯ ಎಂದ ಮಥುರಾ ಜಿಲ್ಲಾ ನ್ಯಾಯಾಲಯ

ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭಿನ್ನ ತೀರ್ಪು ಪ್ರಕಟವಾಗುವುದನ್ನು ತಪ್ಪಿಸಲು ಎಲ್ಲಾ ದಾವೆಗಳನ್ನು ಮಥುರಾ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಲಾಗಿತ್ತು.

ಈ ಮಧ್ಯೆ, ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದ ಮುಂದೆ ಸಲ್ಲಿಸಬೇಕಾಗಿತ್ತು ಎಂದು ಹೈಕೋರ್ಟ್‌ಗೆ ವಿಚಾರಣೆ ವರ್ಗಾವಣೆ ಮಾಡುವುದಕ್ಕೆ ವಕ್ಫ್‌ ಮಂಡಳಿ ವಿರೋಧಿಸಿತ್ತು. ಇತರೆ ಪ್ರಕರಣಗಳಲ್ಲಿ ಪಕ್ಷಾಕಾರರಾಗಿರುವವರ ಪರವಾಗಿ ಅರ್ಜಿದಾರರು ಏಕಮಾತ್ರವಾಗಿ ಮನವಿ ಸಲ್ಲಿಸಲಾಗದು. ಈ ಅರ್ಜಿ ನಿರ್ಧರಿಸುವುದಕ್ಕೂ ಮುನ್ನ ಅವರ ವಾದವನ್ನೂ ಆಲಿಸಬೇಕಿತ್ತು ಎಂದು ಹೇಳಲಾಗಿದೆ. ಪ್ರಕರಣವನ್ನು ಪರಿಗಣಿಸಬೇಕಿದೆ ಎಂದು ನ್ಯಾಯಾಲಯ ಹೇಳಿದ್ದು, ನೋಟಿಸ್‌ ಜಾರಿ ಮಾಡಿ, ವಿಚಾರಣೆಯನ್ನು ಮಾರ್ಚ್‌ 2ಕ್ಕೆ ಮುಂದೂಡಿದೆ.

Kannada Bar & Bench
kannada.barandbench.com