[ಕೃಷ್ಣ ಜನ್ಮಭೂಮಿ ವಿವಾದ] ಶಾಹಿ ಈದ್ಗಾ ಮಸೀದಿಯಲ್ಲಿ ನಮಾಜ್‌ ನಿಷೇಧಿಸಲು ಕೋರಿ ಮಥುರಾ ನ್ಯಾಯಾಲಯದಲ್ಲಿ ಮನವಿ

ಕಳೆದ ಕೆಲವು ವರ್ಷಗಳಲ್ಲಿ ಪ್ರತಿವಾದಿಗಳು ಉದ್ದೇಶಪೂರ್ವಕವಾಗಿ ವಿವಾದಿತ ಸ್ಥಳದಲ್ಲಿ ದಿನಕ್ಕೆ ಐದು ಬಾರಿ ನಮಾಜ್‌ ಮಾಡುತ್ತಿದ್ದು, ಇದಕ್ಕೆ ಅವಕಾಶವಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.
Krishna Janmabhoomi - Shahi Idgah Dispute

Krishna Janmabhoomi - Shahi Idgah Dispute

Published on

ಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಶಾಹಿ ಈದ್ಗಾ ಮಸೀದಿ ಮತ್ತು ಅದಕ್ಕೆ ಸೇರಿದ ರಸ್ತೆಯಲ್ಲಿ ನಮಾಜ್‌ ಮಾಡುವುದಕ್ಕೆ ನಿಷೇಧ ಹೇರುವಂತೆ ಕೋರಿ ಮಥುರಾ ನ್ಯಾಯಾಲಯದಲ್ಲಿ ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿಯು ಮನವಿ ಸಲ್ಲಿಸಿದೆ.

ಹಿಂದೂ ಸಂಘಟನೆಯ ಅಧ್ಯಕ್ಷ ಮನವಿ ಸಲ್ಲಿಸಿದ್ದು ಅವರನ್ನು ಪ್ರತಿನಿಧಿಸಿರುವ ವಕೀಲ ಮಹೇಂದ್ರ ಪ್ರತಾಪ್‌ ಸಿಂಗ್‌ ಅವರು “ಈದ್ಗಾ ಮಸೀದಿಯ ಒಳಗೆ ನಮಾಜ್‌ ಮಾಡಲಾಗುತ್ತಿರಲಿಲ್ಲ. ಆದರೆ, ಕಳೆದ ಕೆಲವು ವರ್ಷಗಳಿಂದ ಮಸೀದಿಯ ಒಳಗೆ ನಮಾಜ್‌ ಮಾಡಲಾಗುತ್ತಿದ್ದು, ಅದಕ್ಕೆ ನಿಷೇಧ ಹೇರಬೇಕು” ಎಂದು ಮನವಿಯಲ್ಲಿ ವಿವರಿಸಿದ್ದಾರೆ.

“ಆಕ್ಷೇಪಿತ ಸ್ಥಳವು ಹಿಂದೂ ಪಕ್ಷಕಾರರಿಗೆ ಸೇರಿದ್ದು, ಈದ್ಗಾ ಮಸೀದಿಯಲ್ಲಿ ನಮಾಜ್‌ ಮಾಡಲಾಗುತ್ತಿರಲಿಲ್ಲ. ಆದರೆ, ಕಳೆದ ಕೆಲವು ವರ್ಷಗಳಿಂದ ಪ್ರತಿವಾದಿಗಳು ಉದ್ದೇಶಪೂರ್ವಕವಾಗಿ ಮತ್ತು ಕಾನೂನುಬಾಹಿರವಾಗಿ ದಿನಕ್ಕೆ ಐದು ಬಾರಿ ನಮಾಜ್‌ ಮಾಡುತ್ತಿದ್ದಾರೆ. ಪವಿತ್ರ ಕುರಾನ್‌ನಲ್ಲೂ ವಿವಾದಿತ ಸ್ಥಳದಲ್ಲಿ ನಮಾಜ್‌ ಮಾಡಬಾರದು ಎಂದು ಹೇಳಲಾಗಿದೆ. ಪ್ರತಿವಾದಿಗಳು ಉದ್ದೇಶಪೂರ್ವಕವಾಗಿ ಕೋಮು ಶಾಂತಿಗೆ ಧಕ್ಕೆ ಉಂಟು ಮಾಡಲು ಪ್ರಯತ್ನ ಮಾಡುತ್ತಿದ್ದು, ಇದರ ಜೊತೆಗೆ ರಸ್ತೆಯಲ್ಲಿ ನಮಾಜ್‌ ಮಾಡುತ್ತಿದ್ದಾರೆ…” ಎಂದು ಹೇಳಿದ್ದಾರೆ.

Also Read
[ಕೃಷ್ಣ ಜನ್ಮಭೂಮಿ ಪ್ರಕರಣ] ಮಸೀದಿ ನೆಲಸಮಕ್ಕೆ ಒಪ್ಪಿದರೆ ದೊಡ್ಡ ಪ್ರಮಾಣದ ಭೂಮಿ ನೀಡಲಾಗುವುದು ಎಂದ ಹಿಂದೂ ಸಂಘಟನೆ

1669ರಲ್ಲಿ ಕೃಷ್ಣ ದೇವಸ್ಥಾನವನ್ನು ನಾಶಪಡಿಸಿ ವಿವಾದಿತ ಸ್ಥಳದಲ್ಲಿ ಔರಂಗಜೇಬ್‌ ಮಸೀದಿ ನಿರ್ಮಿಸಿದ್ದಾನೆ. ಮಸೀದಿಯ ಗೋಡೆಗಳಲ್ಲಿ ಇನ್ನೂ ಹಿಂದೂ ಧಾರ್ಮಿಕ ಚಿಹ್ನೆಗಳಿವೆ ಎಂದು ಹೇಳಲಾಗಿದೆ.

“ಹಿಂದೂ ಧರ್ಮಗ್ರಂಥಗಳನ್ನು ಉಲ್ಲೇಖಿಸಿರುವ ಹಲವು ಶಿಲೆಗಳು ಕಾಣಸಿಗುತ್ತವೆ. ಔರಂಗಜೇಬ್‌ ಆದೇಶದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ನಾಶಪಡಿಸಿ ಮಸೀದಿ ನಿರ್ಮಿಸಲಾಗಿದೆ” ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ. ಜನವರಿ ಮೊದಲ ವಾರದಲ್ಲಿ ಪ್ರಕರಣ ವಿಚಾರಣೆಗೆ ಬರಲಿದೆ.

Kannada Bar & Bench
kannada.barandbench.com