ಕೃಷ್ಣಂ ರಾಜು ಪ್ರಕರಣ: ಸಿಐಡಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡ ಆಂಧ್ರ ಹೈಕೋರ್ಟ್

ವಾದ ಮಂಡನೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರ ವರ್ತನೆಗೆ ಪೀಠ ಅಸಮಾಧಾನ ವ್ಯಕ್ತಪಡಿಸಿ ಎಚ್ಚರಿಸಿತಾದರೂ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಮುಂದಾಗಲಿಲ್ಲ.
Justice C Praveen Kumar and Justice Lalita Kanneganti
Justice C Praveen Kumar and Justice Lalita Kanneganti
Published on

ವೈಎಸ್‌ಆರ್‌ ಕಾಂಗ್ರೆಸ್‌ ಸಂಸದ ಕನುಮುರಿ ರಘುರಾಮ ಕೃಷ್ಣಂ ರಾಜು ಅವರ ವೈದ್ಯಕೀಯ ಪರಿಕ್ಷೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಾಲಿಸಲು ವಿಫಲರಾದ ಸಿಐಡಿ ಅಧಿಕಾರಿಗಳ ವಿರುದ್ಧ ಆಂಧ್ರಪ್ರದೇಶ ಹೈಕೋರ್ಟ್‌ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿಕೊಂಡಿದೆ.

ಆಂಧ್ರಪ್ರದೇಶ ಸರ್ಕಾರ ಹೂಡಿದ್ದ ದೇಶದ್ರೋಹ ಪ್ರಕರಣದ ತನಿಖೆ ವೇಳೆ ತನ್ನನ್ನು ಪೊಲೀಸರು ದೈಹಿಕವಾಗಿ ಹಿಂಸಿಸಿದ್ದರು ಎಂದು ರಾಜು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಸಿಐಡಿ ಎಡಿಜಿಪಿ ವಿರುದ್ಧ ನ್ಯಾಯಾಲಯ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿಕೊಂಡಿದೆ. ಆದೇಶವನ್ನು ನ್ಯಾಯಾಲಯ ಮೇ 19ರಂದು ಹೊರಡಿಸಿದ್ದು ಶನಿವಾರ ಅದನ್ನು ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ರಾಜು ಅವರಿಗೆ ಸುಪ್ರೀಂಕೋರ್ಟ್‌ ಶುಕ್ರವಾರ ಜಾಮೀನು ನೀಡಿತ್ತು.

ಮೇ 15ರಂದು ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸಲು ವಿಫಲರಾದ ಸಿಐಡಿಯ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ, ಮಂಗಳಗಿರಿ ಸಿಐಡಿ ಪೊಲೀಸ್‌ ಠಾಣಾಧಿಕಾರಿ, ಗುಂಟೂರು ಸಾರ್ವಜನಿಕ ಆಸ್ಪತ್ರೆಯ ಸೂಪರಿಂಟೆಂಡೆಂಟ್‌ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲಾಗಿದೆ.

Also Read
ದೇಶದ್ರೋಹ ಪ್ರಕರಣ: ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದ ಕೃಷ್ಣಂ ರಾಜುಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್

ವಾದ ಮಂಡನೆ ವೇಳೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ (ಎಎಜಿ) ತೋರಿದ್ದ ಉದ್ದಟತನ, ಬೆದರಿಕೆ ಒಡ್ಡುವ ಶೈಲಿ ವಿರುದ್ಧವೂ ನ್ಯಾಯಮೂರ್ತಿಗಳಾದ ಸಿ ಪ್ರವೀಣ್ ಕುಮಾರ್ ಮತ್ತು ಲಲಿತಾ ಕನ್ನೆಗಂಟಿ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಆದರೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಒಪ್ಪದ ನ್ಯಾಯಾಲಯ ಭವಿಷ್ಯದಲ್ಲಿ ಹೀಗೆ ಆಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸಿತು.

“ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರು ಭಂಡತನ ಮತ್ತು ಉದ್ಧಟತನದಿಂದ ತಮ್ಮ ವಾದವನ್ನು ಮುಂದುವರೆಸಿದ ರೀತಿ ನ್ಯಾಯಾಲಯಕ್ಕೆ ಆಶ್ಚರ್ಯ ಹುಟ್ಟಿಸಿದೆ… ಭಂಡತನವು ನೇರವಾದ ಬಿಚ್ಚುಮಾತಾಗಲಾರದು, ಅದೇ ರೀತಿ, ಉದ್ಧಟತನವನ್ನು ಭೀತಮುಕ್ತತೆ ಎನ್ನಲಾಗದು. ಕೋಪೋದ್ರಿಕ್ತ ಭಾಷೆಯಾಗಲಿ, ಬೆದರಿಕೆಯಾಗಲಿ ಸತ್ಯವನ್ನು ಒತ್ತಿಹೇಳುತ್ತದೆ ಎಂದಲ್ಲ,” ಎಂದು ಪೀಠ ಅಭಿಪ್ರಾಯಪಟ್ಟಿತು. ನ್ಯಾಯವಾದಿಗಳು ತಮ್ಮ ವಾದ ಮಂಡನೆಯ ವೇಳೆ ನ್ಯಾಯಾಲಯಕ್ಕೆ ಅಡಿಯಾಳಾಗಿರಬೇಕಿಲ್ಲವಾದರೂ ಅವರು ಸಭಾಮರ್ಯಾದೆ ಉಲ್ಲಘಿಸುವುದನ್ನು ನಿರೀಕ್ಷಿಸಲಾಗದು ಎಂದು ಕಿವಿ ಹಿಂಡಿತು.

ಕೃಷ್ಣಂ ರಾಜು ಅವರು ಡಿಜಿಟಲ್‌ ವೇದಿಕೆಗಳಲ್ಲಿ ಕೆಲ ಸಮುದಾಯಗಳ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಆಂಧ್ರದ ಸಿಐಡಿ ಪೊಲೀಸರು ಅವರನ್ನು ಬಂಧಿಸಿದ್ದರು. ಈ ಘಟನೆಗೂ ಕೆಲ ವಾರಗಳ ಹಿಂದೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮ್ಮ ಪಕ್ಷದ ನೇತಾರ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ ಜಾಮೀನು ಪಡೆದಿದ್ದು ಅವರ ಜಾಮೀನನ್ನು ರದ್ದುಗೊಳಿಸಬೇಕೆಂದು ಕೃಷ್ಣಂ ರಾಜು ಸಿಬಿಐ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

Kannada Bar & Bench
kannada.barandbench.com