ಮೈಸೂರಿನ ಮಹಾರಾಣಿ ಕಾಲೇಜಿನ ಪ್ರಾಂಶುಪಾಲ ವಸಂತಕುಮಾರ್ ಅವರನ್ನು ತೆಗೆದುಹಾಕಿದ್ದ ಆದೇಶಕ್ಕೆ ಕೆಎಸ್‌ಎಟಿ ಮಧ್ಯಂತರ ತಡೆ

ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಆದೇಶ ಪ್ರಶ್ನಿಸಿ ಬಿ ವಿ ವಸಂತಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೆಎಸ್‌ಎಟಿ ನ್ಯಾಯಾಂಗ ಸದಸ್ಯ ನಾರಾಯಣ ಮತ್ತು ಆಡಳಿತಾತ್ಮಕ ಸದಸ್ಯ ಎನ್ ಶಿವಶೈಲಂ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿದೆ.
KSAT
KSAT
Published on

ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲರ ಹುದ್ದೆಯಿಂದ ಬಿ ವಿ ವಸಂತಕುಮಾರ್ ಅವರನ್ನು ತೆಗೆದುಹಾಕಿದ್ದ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಆದೇಶಕ್ಕೆ ಈಚೆಗೆ ಮಧ್ಯಂತರ ತಡೆ ನೀಡಿರುವ ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧಿಕರಣವು (ಕೆಎಸ್‌ಎಟಿ) ಈ ಆದೇಶದ ಹಿಂದೆ ಮುಖ್ಯಮಂತ್ರಿ ಕಚೇರಿಯ ಒತ್ತಾಸೆಯಿದ್ದಂತೆ ಕಾಣುತ್ತಿದೆ ಎಂದಿದೆ.

ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಆದೇಶ ಪ್ರಶ್ನಿಸಿ ಬಿ ವಿ ವಸಂತಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೆಎಸ್‌ಎಟಿ ನ್ಯಾಯಾಂಗ ಸದಸ್ಯ ನಾರಾಯಣ ಮತ್ತು ಆಡಳಿತಾತ್ಮಕ ಸದಸ್ಯ ಎನ್ ಶಿವಶೈಲಂ ಅವರನ್ನೊಳಗೊಂಡ ಪೀಠ ನಡೆಸಿದೆ.

ಅರ್ಜಿದಾರರ ಪರ ಹೈಕೋರ್ಟ್‌ನ ಹಿರಿಯ ವಕೀಲ ಎಂ ಅರುಣ್ ಶ್ಯಾಮ್‌ ಮಂಡಿಸಿದ ವಾದ ಮನ್ನಿಸಿರುವ ನ್ಯಾಯಾಧಿಕರಣವು ವಸಂತಕುಮಾರ್ ವಿರುದ್ಧ ಇಲಾಖಾ ವಿಚಾರಣೆ ನಡೆಸದೇ ಇಂತಹ ಆದೇಶ ಹೊರಡಿಸಿರುವುದು ಕಾನೂನಿಗೆ ವಿರುದ್ಧ. ಜಂಟಿ ನಿರ್ದೇಶಕರ ಆದೇಶ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದಿದೆ.

ವಸಂತಕುಮಾರ್ ಅವರ ಸ್ಥಾನಕ್ಕೆ ಸಹಾಯಕ ಪ್ರೊಫೆಸರ್‌ ಎಚ್‌ ಎಂ ಬಸವರಾಜು ಅವರನ್ನು ನೇಮಕ ಮಾಡಿರುವುದೂ ಕಾನೂನಿನ ಅಡಿಯಲ್ಲಿ ಅಸಮರ್ಥನೀಯ. ಹೀಗಾಗಿ, ಈ ಅರ್ಜಿ ಇತ್ಯರ್ಥವಾಗುವ ತನಕ ವಸಂತಕುಮಾರ್ ಅವರನ್ನು ಮೊದಲಿದ್ದ ಸ್ಥಾನದಲ್ಲಿ ಮುಂದುವರಿಸಬೇಕು. ಒಂದು ವೇಳೆ ಎಚ್‌ ಎಂ ಬಸವರಾಜು ಅಧಿಕಾರ ವಹಿಸಿಕೊಂಡ ದಿನದಿಂದ ಅವರು ಯಾವುದಾದರೂ ಆಡಳಿತಾತ್ಮಕ ಕ್ರಮ ಕೈಗೊಂಡಿದ್ದರೆ ಅದನ್ನು ಮರುಪರಿಶೀಲಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಹಾಸ್ಟೆಲ್‌ ಹಣದ ವಿಚಾರ ಹಾಗೂ ವಿದ್ಯಾರ್ಥಿ ವೇತನದ ಉಳಿಕೆ ವಿಷಯದಲ್ಲಿ ಅರ್ಜಿದಾರರಿಗೆ ಯಾವುದೇ ಸಂಬಂಧವಿಲ್ಲ. ಲೆಕ್ಕ ಪರಿಶೋಧಕರು 2018ರಲ್ಲಿ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಅರ್ಜಿದಾರ ವಸಂತ ಕುಮಾರ್ ಅವರು ಪ್ರಾಂಶುಪಾಲರಾಗಿ 2023ರ ಮಾರ್ಚ್‌ನಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇಲಾಖೆ ಉಲ್ಲೇಖಿಸಿರುವಂತೆ ಅವರು ಯಾವುದೇ ರಾಜಕೀಯ ಭಾಷಣ ಮಾಡಿಲ್ಲ. ಪತ್ರಿಕೆಗೆ ಬರೆದ ಶಿಕ್ಷಣ ಬಗೆಗಿನ ಲೇಖನ ಆಧರಿಸಿ ಅವರ ವಿರುದ್ಧ ಹೊರಿಸಲಾಗಿರುವ ಆರೋಪ ನಿರಾಧಾರವಾಗಿವೆ ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ಪೀಠವು ಪುರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ: ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಹಲವಾರು ವರ್ಷಗಳಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ವಿದ್ಯಾರ್ಥಿ ವೇತನವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಕಾಲೇಜಿನ ಹಾಸ್ಟೆಲ್‌ನಲ್ಲಿ ₹ 10 ಲಕ್ಷಕ್ಕೂ ಹೆಚ್ಚು ಇಬಿಎಲ್‌ (ಎಕ್ಸ್‌ಟ್ರಾ ಬೋರ್ಡಿಂಗ್ ಅಂಡ್‌ ಲಾಡ್ಜಿಂಗ್‌) ಹಣವನ್ನು ದುರುಪಯೋಗ ಮಾಡಲಾಗಿದೆ ಎಂದು ವಸಂತ ಕುಮಾರ್ ವಿರುದ್ಧ ಆರೋಪಿಸಲಾಗಿದೆ.

ಕಾಲೇಜಿನಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿ ವೇತನವನ್ನು ನಿಗದಿತ ಸಮಯದಲ್ಲಿ ಪಾವತಿ ಮಾಡದೇ ಇರುವುದರಿಂದ ಈ ಆಕ್ಷೇಪಣೆ ಉಂಟಾಗಿದೆ. ಕಾಲೇಜಿನ ಪ್ರಾಂಶುಪಾಲ ಬಿ ವಿ ವಸಂತಕುಮಾರ್ ಅವರು ರಾಜಕೀಯ ಹಾಗೂ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿ ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮ 2021ರ 3 (1), (2), (3) ಮತ್ತು ನಿಯಮ (4) ಅನ್ನು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಸಂತ್‌ ಕುಮಾರ್ ನಂತರ ಸೇವಾ ಜೇಷ್ಠತೆಯಲ್ಲಿ ಹಿರಿಯರಾದ ಬೋಧಕರಿಗೆ ಪ್ರಾಂಶುಪಾಲ ಜವಾಬ್ದಾರಿ ಪ್ರಭಾರ ವಹಿಸಿ ತುರ್ತಾಗಿ ವರದಿ ಸಲ್ಲಿಸಿ ಎಂದು ಜಂಟಿ ನಿರ್ದೇಶಕರು ಫೆಬ್ರವರಿ 9ರಂದು ಆದೇಶಿಸಿದ್ದರು.

Kannada Bar & Bench
kannada.barandbench.com