ಕೆಪಿಎಸ್‌ಸಿ 384 ಗೆಜೆಟೆಡ್‌ ಪ್ರೊಬೇಷನರ್‌ ನೇಮಕ ಅಧಿಸೂಚನೆ ರದ್ದು: ಮೀಸಲಾತಿ ಹೆಚ್ಚಳ ಆದೇಶ ವಜಾಗೊಳಿಸಿದ ಕೆಎಸ್‌ಎಟಿ

ಕೆಪಿಎಸ್‌ಸಿ 384 ಗೆಜೆಟೆಡ್‌ ಪ್ರೊಬೇಷನರ್‌ ನೇಮಕ ಅಧಿಸೂಚನೆ ರದ್ದು: ಮೀಸಲಾತಿ ಹೆಚ್ಚಳ ಆದೇಶ ವಜಾಗೊಳಿಸಿದ ಕೆಎಸ್‌ಎಟಿ

“ಸುಪ್ರೀಂ ಕೋರ್ಟ್ ಯಾವುದೇ ತೀರ್ಪಿನಲ್ಲಿ ಶೇ.50ರ ಮಿತಿ ದಾಟುವಂತೆ ಹೇಳಿಲ್ಲ. ಆದರೂ ಕೆಲವು ರಾಜ್ಯಗಳು ಮೀಸಲಾತಿ ಹೆಚ್ಚಿಸಿವೆ ಎಂದು ಮೀಸಲು ಮಿತಿ ಹೆಚ್ಚಿಸಿರುವ ಸರ್ಕಾರದ ನಿರ್ಧಾರಕ್ಕೆ ಯಾವುದೇ ಶಾಸನಾತ್ಮಕ ಬೆಂಬಲ ಇಲ್ಲ” ಎಂದಿರುವ ಕೆಎಸ್‌ಎಟಿ.
Published on

ಸರ್ಕಾರಿ ನೇಮಕಾತಿಗಳಲ್ಲಿ ಮೀಸಲು ಪ್ರಮಾಣವನ್ನು ಶೇ.50ರಿಂದ ಶೇ.56ಕ್ಕೆ ಹೆಚ್ಚಳ ಮಾಡಿದ ರಾಜ್ಯ ಸರ್ಕಾರದ ಆದೇಶದ ಆಧಾರದ ಮೇಲೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2024ರ ಫೆಬ್ರವರಿ 26ರಂದು ಹೊರಡಿಸಿದ್ದ 384 ಗೆಜೆಟೆಡ್‌ ಪ್ರೊಬೇಷನರ್‌ ನೇಮಕ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯು (ಕೆಎಸ್‌ಎಟಿ) ಈಚೆಗೆ ರದ್ದುಪಡಿಸಿ ಮಹತ್ವದ ಆದೇಶ ಮಾಡಿದೆ. ಇದರಿಂದ ಕೆಎಎಸ್‌ ಅಧಿಕಾರಿಗಳ ನೇಮಕ ಮತ್ತೆ ಅತಂತ್ರಕ್ಕೆ ಸಿಲುಕಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬಿ ಎನ್‌ ಮಧು ಸಲ್ಲಿಸಿದ್ದ ಅರ್ಜಿಯನ್ನು ಕೆಎಸ್‌ಎಟಿ ಅಧ್ಯಕ್ಷ ನ್ಯಾಯಮೂರ್ತಿ ಬಿ ಆರ್‌ ಬೂದಿಹಾಳ್‌ ಮತ್ತು ಆಡಳಿತಾತ್ಮಕ ಸದಸ್ಯ ರಾಘವೇಂದ್ರ ಔರಾದ್ಕರ್‌ ಅವರ ವಿಭಾಗೀಯ ಪೀಠ ಪುರಸ್ಕರಿಸಿದೆ.

“ಕೆಎಎಸ್‌ ಹುದ್ದೆಗಳ ಭರ್ತಿ ಜೊತೆಗೆ 2022ರ ಡಿಸೆಂಬರ್‌ 12ರಂದು ರಾಜ್ಯ ಸರ್ಕಾರ ಮೀಸಲು ಹೆಚ್ಚಳಕ್ಕೆ ಹೊರಡಿಸಿದ್ದ ಆದೇಶವನ್ನೂ ಸಹ ಕೆಎಸ್‌ಎಟಿ ರದ್ದುಗೊಳಿಸಿದ್ದು, ಪ್ರತಿವಾದಿ ಕೆಪಿಎಸ್‌ಸಿ ಕಾನೂನು ಪ್ರಕಾರ ನೇಮಕಕ್ಕೆ ಹೊಸದಾಗಿ ಅಧಿಸೂಚನೆ ಹೊರಡಿಸಲು ಸ್ವತಂತ್ರವಾಗಿದೆ” ಎಂದು ಸ್ಪಷ್ಟಪಡಿಸಿದೆ.

“‘2022ರ ಅಕ್ಟೋಬರ್‌ 23ರಂದು ಅಂದಿನ ರಾಜ್ಯ ಸರ್ಕಾರ (ಬಸವರಾಜ ಬೊಮ್ಮಾಯಿ ನೇತೃತ್ವದ) ಹೊರಡಿಸಿದ್ದ ಸುಗ್ರೀವಾಜ್ಞೆಯು ಮೀಸಲು ಪ್ರಮಾಣವನ್ನು ಶೇ.50ರಿಂದ ಶೇ.56ಕ್ಕೆ ಹೆಚ್ಚಿಸಿದೆ. ಅದನ್ನು ಆಧರಿಸಿ 2022ರ ಡಿಸೆಂಬರ್‌ 28ರಂದು ಸರ್ಕಾರಿ ಅಧಿಸೂಚನೆ ಪ್ರಕಟಿಸಿ ರೋಸ್ಟರ್‌ ಅಂಕಗಳನ್ನು ನಿಗದಿಪಡಿಸಲಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಶಾಸನಸಭೆಯ ಅನುಮತಿ ಪಡೆದಿಲ್ಲ. ಹೀಗಾಗಿ, ಅದರ ಆಧಾರದ ಮೇಲೆ ರಚಿಸಲಾದ 2023ರ ನಿಯಮಾವಳಿ ರಚನೆ ಊರ್ಜಿತವಲ್ಲ” ಎಂದು ಕೆಎಸ್‌ಎಟಿ ಅಭಿಪ್ರಾಯಪಟ್ಟಿದೆ.

ಇಂದಿರಾ ಸಹಾನಿ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಒಟ್ಟು ಮೀಸಲು ಪ್ರಮಾಣ ಶೇ.50ರಷ್ಟು ಮೀರುವಂತಿಲ್ಲ ಎಂದು ಮಿತಿ ಹೇರಿದೆ. ಅದಾದ ಬಳಿಕ ಈವರೆಗೆ ಸುಪ್ರೀಂ ಕೋರ್ಟ್‌ನ ಯಾವುದೇ ತೀರ್ಪಿನಲ್ಲಿ ಶೇ.50ರ ಮಿತಿ ದಾಟುವಂತೆ ಹೇಳಿಲ್ಲ. ಆದರೂ ಕೆಲವು ರಾಜ್ಯಗಳು ಮೀಸಲಾತಿ ಹೆಚ್ಚಿಸಿವೆ ಎಂಬುದನ್ನು ಮುಂದಿಟ್ಟುಕೊಂಡು ಮೀಸಲು ಮಿತಿ ಹೆಚ್ಚಳಕ್ಕೆ ಯಾವುದೇ ಶಾಸನಾತ್ಮಕ ಬೆಂಬಲ ಇಲ್ಲ” ಎಂದೂ ಕೆಎಸ್‌ಎಟಿ ಹೇಳಿದೆ.

ಅರ್ಜಿದಾರರ ಪರ ವಕೀಲರಾದ ರಂಗನಾಥ್‌ ಎಸ್‌. ಜೋಯಿಷ್‌, ಬಿ ಒ ಅನಿಲ್‌ ಕುಮಾರ್‌ ಮತ್ತು ಎಸ್‌ ವೈ ರೋಡಗಿ ಅವರು “ಸುಪ್ರೀಂ ಕೋರ್ಟ್‌ ಆದೇಶದ ವಿರುದ್ಧ ರಾಜಕೀಯ ಕಾರಣಕ್ಕಾಗಿ ಸರ್ಕಾರ ಮೀಸಲು ಪ್ರಮಾಣ ಶೇ.56ಕ್ಕೆ ಹೆಚ್ಚಳ ಮಾಡಿದೆ. ಇದರಿಂದ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕೇವಲ ಶೇ.44ರಷ್ಟು ಮಾತ್ರ ಅವಕಾಶ ಸಿಗುತ್ತದೆ. ಇದರಿಂದ ಸಂವಿಧಾನಬದ್ಧವಾಗಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಸಿಗಬೇಕಾದ ಅವಕಾಶ ಕಸಿದುಕೊಳ್ಳಲಾಗಿದೆ. ಇದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಆದೇಶದ ಉಲ್ಲಂಘನೆಯಾಗಿದೆ. ಎಂ ಆರ್‌ ಬಾಲಾಜಿ ವರ್ಸಸ್‌ ಮೈಸೂರು ರಾಜ್ಯ ಪ್ರಕರಣದಲ್ಲಿ ಮೀಸಲಿಗೆ ಮಿತಿ ಇರಬೇಕು ಎಂಬ ಸುಪ್ರೀಂ ಕೋರ್ಟ್‌ ಆದೇಶದ ವಿರುದ್ಧ ನಿಯಮ ರೂಪಿಸಲಾಗಿದೆ” ಎಂದು ವಾದಿಸಿದ್ದರು.

ಸರ್ಕಾರಿ ವಕೀಲ ಕಿರಣ್‌ ಕುಮಾರ್‌ ಅವರು “ಕರ್ನಾಟಕ ಶಾಸನಸಭೆ ರೂಪಿಸಿದ ಕಾಯಿದೆಯನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಕೆಯಾಗಿದ್ದು, ಅದಕ್ಕೆ ಮಾನ್ಯತೆ ಇಲ್ಲ. ಸಾಮಾಜಿಕ ಮತ್ತು ಶೈಕ್ಷ ಣಿಕ ಹಿಂದುಳಿದಿರುವಿಕೆ ಖಚಿತಪಡಿಸಿಕೊಂಡು ನಿವೃತ್ತ ನ್ಯಾಯಮೂರ್ತಿ ಎಚ್‌ ಎನ್‌ ನಾಗಮೋಹನ್‌ ದಾಸ್‌ ಆಯೋಗದ ಶಿಫಾರಸ್ಸಿನಂತೆ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ. ಆಯೋಗವು ವೈಜ್ಞಾನಿಕ ವರದಿ ನೀಡಿದ್ದು, ಈಗಾಗಲೇ ಹಲವಾರು ರಾಜ್ಯಗಳು ಜಾರಿಗೊಳಿಸಿದ ಮಾದರಿಯಲ್ಲಿ ಜನಸಂಖ್ಯೆ ಆಧರಿಸಿ ಮೀಸಲಾತಿ ಪ್ರಮಾಣ ವಿಸ್ತರಿಸಲಾಗಿದೆ” ಎಂದು ಸಮರ್ಥಿಸಿಕೊಂಡಿದ್ದರು.

ಪ್ರಕರಣದ ಹಿನ್ನೆಲೆ: ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರ 2022ರಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿ ಸೀಟು ಹಂಚಿಕೆ ಮೀಸಲು ಮತ್ತು ರಾಜ್ಯ ಸೇವೆಯಲ್ಲಿ ನೇಮಕ ಹುದ್ದೆಗಳಿಗೆ ಮೀಸಲು) ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. ಅದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣವನ್ನು ಶೇ. 18ರಿಂದ ಶೇ. 24ಕ್ಕೆ ಹೆಚ್ಚಿಸಿ ಸುಗ್ರೀವಾಜ್ಞೆ ಹೊರಡಿಸಿತ್ತು. ಅದನ್ನು ಆಧರಿಸಿ ಕರ್ನಾಟಕ ಸರ್ಕಾರಿ ಸೇವೆಯಲ್ಲಿ ರೋಸ್ಟರ್‌ ಮೀಸಲು ನಿಗದಿಪಡಿಸಿತ್ತು. ಆನಂತರ ಅದನ್ನು ಆಧರಿಸಿ ಕೆಪಿಎಸ್‌ಸಿ 384 ಗ್ರೂಪ್‌ ಎ ಮತ್ತು ಬಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿತ್ತು. ಅದನ್ನು ಅರ್ಜಿದಾರರು ಪ್ರಶ್ನಿಸಿ ಕೆಎಎಸ್‌ಎಟಿ ಮೊರೆ ಹೋಗಿದ್ದರು.

ಕೆಎಎಸ್‌ ಅಧಿಕಾರಿಗಳ ನೇಮಕಕ್ಕೆ ಮುಖ್ಯ ಪರೀಕ್ಷೆ ನಡೆದು ಇನ್ನೇನು ಫಲಿತಾಂಶ ಹೊರಬೀಳಬೇಕಿದೆ. ಈ ಹಂತದಲ್ಲಿ ಕೆಎಸ್‌ಎಟಿ ಆದೇಶ ಅಭ್ಯರ್ಥಿಗಳಿಗೆ ಸಂಕಷ್ಟ ತಂದಿದ್ದು, ಸರ್ಕಾರ ಇದೀಗ ನೇಮಕ ಪ್ರಕ್ರಿಯೆಯನ್ನು ಊರ್ಜಿತಗೊಳಿಸಬೇಕಾದರೆ ಕೆಎಸ್‌ಎಟಿ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕಾಗಿದೆ.

Attachment
PDF
Madhu B N Vs State of Karnataka
Preview
Kannada Bar & Bench
kannada.barandbench.com