ಕೆಪಿಎಸ್‌ಸಿಯ ಎ ಮತ್ತು ಬಿ ವೃಂದದ 384 ಹುದ್ದೆಗಳ ನೇಮಕ ಪ್ರಕ್ರಿಯೆಗೆ ತಡೆ ನೀಡಿದ ಕೆಎಸ್‌ಎಟಿ

ಈ ಹಿಂದಿನ ದೋಷಗಳನ್ನು ಸರಿಪಡಿಸದೆ ಕೆಪಿಎಸ್‌ಸಿ ಹೇಗೆ ಮುಖ್ಯ ಪರೀಕ್ಷೆ ನಡೆಸಲು ಅಧಿಸೂಚನೆ ಹೊರಡಿಸಿದೆ ಎಂದು ಪ್ರಶ್ನಿಸಿರುವ ಕೆಎಸ್‌ಎಟಿ.
ಕೆಪಿಎಸ್‌ಸಿಯ ಎ ಮತ್ತು ಬಿ ವೃಂದದ 384 ಹುದ್ದೆಗಳ ನೇಮಕ ಪ್ರಕ್ರಿಯೆಗೆ ತಡೆ ನೀಡಿದ ಕೆಎಸ್‌ಎಟಿ
Published on

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುತ್ತಿರುವ 2023-24ನೇ ಸಾಲಿನ ಗ್ರೂಪ್‌ ಎ ಮತ್ತು ಬಿ ವೃಂದದ 384 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧಿಕರಣ (ಕೆಎಸ್ಎಟಿ) ಮಧ್ಯಂತರ ತಡೆ ನೀಡಿದೆ.

ಡಿ ಪವಿತ್ರಾ ಸೇರಿದಂತೆ ಇತರೆ 51 ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೆಎಸ್‌ಎಟಿ ನ್ಯಾಯಾಂಗ ಸದಸ್ಯ ಎಸ್‌ ವೈ ವಟವಟಿ ಮತ್ತು ಆಡಳಿತ ಸದಸ್ಯೆ ಅಮಿತಾ ಪ್ರಸಾದ್‌ ಅವರ ವಿಭಾಗೀಯ ಪೀಠ ಗುರುವಾರ ನಡೆಸಿತು. ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಿದೆ.

ಪೂರ್ವಭಾವಿ ಪರೀಕ್ಷಾ ಫಲಿತಾಂಶವನ್ನು 2025ರ ಜನವರಿ 30ರಂದು ಪ್ರಕಟಿಸಿ ನೇಮಕ ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡಿದ್ದ ಕೆಎಸ್‌ಎಟಿ ಇದೀಗ ಮುಖ್ಯ ಪರೀಕ್ಷೆ ನಡೆಸಲು ಆಯೋಗವು ಜನವರಿ 29ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಮುಂದಿನ ವಿಚಾರಣೆವರೆಗೆ ಅಮಾನತ್ತಿನಲ್ಲಿ ಇರಿಸುವಂತೆ ಆದೇಶಿಸಿದೆ.

Also Read
ಕೆಎಎಸ್‌ ಪೂರ್ವಭಾವಿ ಮರು ಪರೀಕ್ಷೆ: ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಕೆಪಿಎಸ್‌ಸಿಗೆ ಕೆಎಸ್‌ಎಟಿ ಅನುಮತಿ

ಈ ಹಿಂದಿನ ದೋಷಗಳನ್ನು ಸರಿಪಡಿಸದೆ ಕೆಪಿಎಸ್‌ಸಿ ಹೇಗೆ ಮುಖ್ಯ ಪರೀಕ್ಷೆ ನಡೆಸಲು ಅಧಿಸೂಚನೆ ಹೊರಡಿಸಿದೆ ಎಂದು ಪ್ರಶ್ನಿಸಿರುವ ಪೀಠವು “ಇಂತಹ ಸನ್ನಿವೇಶದಲ್ಲಿ ಮುಖ್ಯ ಪರೀಕ್ಷೆಗೆ ಕೆಪಿಎಸ್‌ಸಿ ಹೊರಡಿಸಿರುವ ಅಧಿಸೂಚನೆಯನ್ನು ಅಮಾನತಿಯಲ್ಲಿ ಇರಿಸುವುದೇ ಸೂಕ್ತ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಮೇಲ್ನೋಟಕ್ಕೆ ಪ್ರಶ್ನೆ ಪತ್ರಿಕೆಗಳನ್ನು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡುವಾಗ ದೋಷಗಳಾಗಿರುವುದು ಕಂಡು ಬಂದಿದೆ. ಆಯೋಗವೂ ಕೂಡ ಇದನ್ನು ಒಪ್ಪಿಕೊಂಡು ಆ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿ ರಚನೆ ಮಾಡಿತ್ತು. ಅಂತೆಯೇ, ಸಮಿತಿ ನೀಡಿರುವ ವರದಿಯಲ್ಲಿ, ಪ್ರಶ್ನೆ ಪತ್ರಿಕೆ ಭಾಷಾಂತರದಲ್ಲಿ ದೋಷಗಳಾಗಿವೆ ಎಂಬುದನ್ನು ವರದಿ ದೃಢಪಡಿಸಿದೆಯಲ್ಲದೆ, ಈ ವಿಚಾರವನ್ನು ಬಗೆಹರಿಸುವಂತೆ ಸಲಹೆ ನೀಡಿದೆ ಎಂಬ ಅಂಶವನ್ನು ಪೀಠವು ಉಲ್ಲೇಖಿಸಿದೆ.

Kannada Bar & Bench
kannada.barandbench.com