ರಾಜ್ಯ ಸರ್ಕಾರದ ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ ಆದೇಶ ಎತ್ತಿ ಹಿಡಿದ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ

“ಹಗರಣ ವ್ಯಾಪಕವಾಗಿರುವುದರಿಂದ ಕಳಂಕಿತರು ಮತ್ತು ಕಳಂಕರಹಿತರನ್ನು ಪ್ರತ್ಯೇಕಿಸಲಾಗದು. ಪೊಲೀಸ್‌ ನೇಮಕಾತಿ ವಿಭಾಗದ ಪ್ರಮುಖ ಅಧಿಕಾರಿಗಳು ಬಂಧಿತರಾಗಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗದು” ಎಂದಿದ್ದ ರಾಜ್ಯ ಸರ್ಕಾರ.
PSI Exam
PSI Exam

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳ (ಪಿಎಸ್‌ಐ) ನೇಮಕಾತಿ ಹಗರಣ ಬೆಳಕಿಗೆ ಬಂದ ಬೆನ್ನಿಗೇ ಮರುಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯು (ಕೆಎಸ್‌ಎಟಿ) ಮಂಗಳವಾರ ಎತ್ತಿ ಹಿಡಿದಿದೆ.

ಬೆಂಗಳೂರಿನ ಪವಿತ್ರಾ ಎಲ್‌ ಎನ್‌ ಸೇರಿದಂತೆ 28 ಅಭ್ಯರ್ಥಿಗಳು "ಕಳಂಕ ರಹಿತ ಮತ್ತು ಕಳಂಕಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ” ಈಗಾಗಲೇ ಹೊರಡಿಸಿರುವ ಆದೇಶದ ಪ್ರಕಾರ ನೇಮಕಾತಿ ಆದೇಶ ನೀಡಲು ಆದೇಶಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ನ್ಯಾಯಿಕ ಸದಸ್ಯರಾದ ಟಿ ನಾರಾಯಣ ಸ್ವಾಮಿ ಮತ್ತು ಜಿ ಲತಾ ಕೃಷ್ಣರಾವ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.

ಪೊಲೀಸ್‌ ಇಲಾಖೆಯ 545 ಸಬ್‌ ಇನ್ಸ್‌ಪೆಕ್ಟರ್‌ಗಳ ಆಯ್ಕೆ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವುದು ರಾಜ್ಯಾದ್ಯಂತ ಸಂಚಲನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮರುಪರೀಕ್ಷೆಗೆ ಮುಂದಾಗಿದೆ. ಆದರೆ ರಾಜ್ಯ ಸರ್ಕಾರದ ಈ ನಡೆಯಿಂದ ಯಾವುದೇ ಅಕ್ರಮವೆಸಗದೆ ಕಳಂಕ ರಹಿತವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದ್ದು, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ "ಕಳಂಕ ರಹಿತ ಮತ್ತು ಕಳಂಕಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ ಈಗಾಗಲೇ ಹೊರಡಿಸಿರುವ ಆದೇಶದ ಪ್ರಕಾರ ನೇಮಕಾತಿ ಆದೇಶ ನೀಡಲು ಆದೇಶಿಸಬೇಕು ಎಂದು ಕೋರಲಾಗಿತ್ತು. ಇದನ್ನು ಕೆಎಸ್‌ಎಟಿಯು ಮಾನ್ಯ ಮಾಡಿಲ್ಲ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ ಆರ್‌ ರವಿಶಂಕರ್ “ಅವರು ಪಿಎಸ್‌ಐ ಪರೀಕ್ಷೆಗೆ ಸಂಬಂಧಿಸಿದಂತೆ ಒಂದು ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮದ ಕುರಿತಾಗಿ ಎಫ್‌ಐಆರ್‌ ದಾಖಲಿಸಲಾಗಿದೆ. ಈ ಸಂಬಂಧ ಸಿಐಡಿ ತನಿಖೆ ನಡೆಸುತ್ತಿದ್ದು, ಮಧ್ಯಂತರ ವರದಿ ಆಧರಿಸಿ ರಾಜ್ಯ ಸರ್ಕಾರವು ಮರು ಪರೀಕ್ಷೆ ನಡೆಸುವುದಾಗಿ ಆದೇಶಿಸಿದೆ. ಸಿಐಡಿ ತನಿಖೆ ಪೂರ್ಣಗೊಳ್ಳದಿರುವಾಗ ಇಡೀ ನೇಮಕಾತಿ ರದ್ದುಪಡಿಸುವ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದು ವಾದಿಸಿದ್ದರು.

“ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ 545 ಅಭ್ಯರ್ಥಿಗಳಿಗೂ ಸಿಐಡಿ ಪತ್ರ ಬರೆದು ಅವರಿಗೆ ಒಎಂಆರ್‌ ಸಲ್ಲಿಸುವಂತೆ ಸೂಚಿಸಿದ್ದು, ಎಲ್ಲರೂ ಒಎಂಆರ್‌ ಪ್ರತಿ ಸಲ್ಲಿಸಿದ್ದಾರೆ. ಈಗ ಆ ಒಎಂಆರ್‌ ಪ್ರತಿಗಳನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಒಳಪಡಿಸದಿದ್ದರೆ ಕಳಂಕಿತರು ಮತ್ತು ಕಳಂಕರಹಿತರು ಯಾರು ಎಂಬುದು ತಿಳಿಯುವುದಿಲ್ಲ. ಮೂರು ಮತ್ತು ನಾಲ್ಕನೇ ಪ್ರತಿವಾದಿಗಳಾದ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ಮತ್ತು ಸಿಐಡಿ ಪೊಲೀಸ್‌ ಮಹಾನಿರ್ದೇಶಕರು ಯಾವುದೇ ತನಿಖೆ ನಡೆಸಿ ವರದಿ ಸಲ್ಲಿಸಿಲ್ಲ. ಬದಲಿಗೆ, ಕಳಂಕಿತ ಮತ್ತು ಕಳಂಕರಹಿತರನ್ನು ಪ್ರತ್ಯೇಕಿಸಲಾಗುತ್ತಿದ್ದು, ಮುಗ್ಧ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರವು ತನಿಖೆ ನಡೆಸಲು ಸಿಐಡಿಗೆ ಪ್ರಕರಣ ವಹಿಸಿದೆ” ಎಂದಿದ್ದರು.

Also Read
ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ: ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಮೇ 24ರವರೆಗೆ ಕಾಲಾವಕಾಶ ನೀಡಿದ ಕೆಎಸ್‌ಎಟಿ

“ಕಲಬುರ್ಗಿಯ ಒಂದು ಪರೀಕ್ಷಾ ಕೇಂದ್ರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಸಿಐಡಿ ಮಧ್ಯಂತರ ವರದಿ ಸಲ್ಲಿಸಿದೆ. ಇದನ್ನು ಆಧರಿಸಿ ಈಗ ಮರು ಪರೀಕ್ಷೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಪಿಎಸ್‌ಐ ಹುದ್ದೆಗೆ 1.2 ಲಕ್ಷ ಅಭ್ಯರ್ಥಿಗಳು ಅರ್ಜಿ ಹಾಕಿದ್ದು, ದೈಹಿಕ ಪರೀಕ್ಷೆ ಮುಗಿದು 54,104 ಮಂದಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಶೇ. 1ರಷ್ಟು ಅಭ್ಯರ್ಥಿಗಳೂ ಆಯ್ಕೆಯಾಗಿಲ್ಲ. ಪ್ರತಿ ಬಾರಿಯೂ ಸಚಿನ್‌ ತೆಂಡೂಲ್ಕರ್‌ ಅವರು ಶತಕ ಬಾರಿಸಲಾಗದು. ಪ್ರತಿ ಪರೀಕ್ಷೆಯಲ್ಲೂ ಟಾಪರ್‌ ಆಗಿ ಹೊರಹೊಮ್ಮಲಾಗದು. ಹೀಗಾಗಿ, ಹೊಸದಾಗಿ ಮರು ಪರೀಕ್ಷೆ ನಡೆಸಲಾಗುವುದು ಎಂಬುದಕ್ಕೆ ತಡೆ ನೀಡಬೇಕು” ಎಂದು ಕೋರಿದ್ದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಸುಬ್ರಹ್ಮಣ್ಯ ಅವರು “ಹಗರಣ ವ್ಯಾಪಕವಾಗಿರುವುದರಿಂದ ಕಳಂಕಿತರು ಮತ್ತು ಕಳಂಕರಹಿತರನ್ನು ಪ್ರತ್ಯೇಕಿಸಲಾಗದು. ಪೊಲೀಸ್‌ ನೇಮಕಾತಿ ವಿಭಾಗದ ಪ್ರಮುಖ ಅಧಿಕಾರಿಗಳು ಬಂಧಿತರಾಗಿದ್ದು, ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಳ್ಳಲು ಇನ್ನೂ ಕಾಲಾವಕಾಶಬೇಕಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗದು” ಎಂದು ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com