
ರಾಜ್ಯ ವಕೀಲರ ಪರಿಷತ್‌ಗೆ ಮತದಾನ ಪಟ್ಟಿಯಲ್ಲಿರುವ ಇಬ್ಬರು ವಕೀಲರು ಮತ್ತು ಪದನಿಮಿತ್ತ ಸದಸ್ಯರ ನೇತೃತ್ವದ ತಾತ್ಕಾಲಿಕ ಸಮಿತಿ ರಚಿಸಬೇಕೆ ವಿನಾ ಏಕಸದಸ್ಯರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗದು ಎಂಬ ವಿಚಾರದ ಸಂಬಂಧ ಸೂಚನೆ ಪಡೆಯಲು ಭಾರತೀಯ ವಕೀಲರ ಪರಿಷತ್‌ಗೆ (ಬಿಸಿಐ) ಕರ್ನಾಟಕ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ಕೆಎಸ್‌ಬಿಸಿಗೆ ಚುನಾವಣೆ ನಡೆಸಲು ನಿರ್ದೇಶಿಸಬೇಕು ಎಂದು ಕೋರಿ ವಕೀಲ ರೆಹಮತ್ ಉಲ್ಲಾ ಕೊತ್ವಾಲ್ ಮತ್ತು ಕೆಎಸ್‌ಬಿಸಿ ನಾಮನಿರ್ದೇಶಿತ ಅಧ್ಯಕ್ಷ ಎಸ್ ಎಸ್ ಮಿಟ್ಟಲಕೋಡ್ ನೇಮಕಾತಿ ವಜಾಗೊಳಿಸಬೇಕು ಎಂದು ಕೋರಿ ವಕೀಲ ಕೋಟೇಶ್ವರ ರಾವ್ ಮತ್ತು ಬೆಂಗಳೂರು ವಕೀಲರ ಸಂಘಕ್ಕೆ (ಎಎಬಿ) ಪರ್ಯಾಯವಾಗಿ ಹೊಸ ಸಂಘ ನೋಂದಣಿ ಮಾಡದಂತೆ ಕೆಎಸ್‌ಬಿಸಿಗೆ ನಿರ್ದೇಶಿಸಬೇಕು ಎಂದು ಕೋರಿರುವವ ಪ್ರತ್ಯೇಕ ಮೂರು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೋಟೇಶ್ವರ ರಾವ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್ ಎಸ್ ಯಡ್ರಾಮಿ ಅವರು “ವಕೀಲರ ಕಾಯಿದೆ 1961ರ ಸೆಕ್ಷನ್ 8, 8ಎ, ಸೆಕ್ಷನ್ 32 ಹಾಗೂ ಸರ್ಟಿಫಿಕೇಟ್ ಮತ್ತು ಪ್ರಾಕ್ಟೀಸ್ ಸ್ಥಳ ಪರಿಶೀಲನೆ ನಿಯಮ 2015ರ ಪ್ರಕಾರ ಕೆಎಸ್‌ಬಿಸಿ ಮತದಾರರ ಪಟ್ಟಿಯಲ್ಲಿರುವ ಇಬ್ಬರು ವಕೀಲರು ಮತ್ತು ಪದನಿಮಿತ್ತ ಸದಸ್ಯರ ನೇತೃತ್ವದ ಸಮಿತಿಯನ್ನು ಬಿಸಿಐಯು ರಚಿಸಬೇಕು. 2015ರ ನಿಯಮದ ಪರ ಪ್ರಕಾರ ತಾತ್ಕಾಲಿಕ ಸಮಿತಿ ಇರಬೇಕೆ ವಿನಾ ಏಕಸದಸ್ಯ ಇರುವಂತಿಲ್ಲ. ಸರ್ಟಿಫಿಕೇಟ್ ಆಫ್ ಪ್ರಾಕ್ಟೀಸ್ (ಸಿಒಪಿ) ನೆವದಲ್ಲಿ ಯಾರೋ ಒಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗದು. ಮಿಟ್ಟಲ್‌ಕೋಡ್ ಅವರು ತನ್ನ ಮಿತಿ ಮೀರಿ ಕೆಲಸ ಮಾಡುತ್ತಿದ್ದಾರೆ” ಎಂದರು.
ಇದನ್ನು ಆಲಿಸಿದ ಪೀಠವು ಬಿಸಿಐ ಪ್ರತಿನಿಧಿಸಿದ್ದ ವಕೀಲೆ ಅನುಭ ಶ್ರೀವಾಸ್ತವ ಅವರಿಗೆ ಬಿಸಿಐನಿಂದ ಸೂಚನೆ ಪಡೆಯಲು ನಿರ್ದೇಶಿಸಿತು.
ಇನ್ನು, ವಕೀಲ ರೆಹಮತ್ ಉಲ್ಲಾ ಕೊತ್ವಾಲ್ ಅವರು ಕೆಎಸ್‌ಬಿಸಿಗೆ ಚುನಾವಣೆ ನಡೆಸಬೇಕು ಎಂದು ಕೋರಿರುವ ಅರ್ಜಿ ಸಂಬಂಧ ಕೆಎಸ್‌ಬಿಸಿ ಪರ ವಕೀಲ ಟಿ ಪಿ ವಿವೇಕಾನಂದ ಅವರು “ಚುನಾವಣೆ ನಡೆಸಲು ದಿನಾಂಕವನ್ನು ಬಿಸಿಐ ನಿಗದಿಪಡಿಸಬೇಕು. ಸೆಪ್ಟೆಂಬರ್ 10ರಿಂದ ಆರು ವಾರ ಅಂದರೆ ಅಕ್ಟೋಬರ್ (ಅ.27) ಮೂರನೇ ವಾರದವರೆಗೆ ಬಿಸಿಐ ಸೂಚನೆಗಾಗಿ ಕಾಯಬೇಕಿದೆ” ಎಂದರು.
ಇದೇ ವಿಚಾರದಲ್ಲಿ ಬಿಸಿಐ ವಕೀಲೆ ಅನುಭಾ ಶ್ರೀವಾಸ್ತವ ಅವರು “ನ್ಯಾಯಾಲಯವು ಜುಲೈ 14ರಂದು ಚುನಾವಣೆಗೆ ಸಂಬಂಧಿಸಿದಂತೆ ಎತ್ತಿರುವ ಪ್ರಶ್ನೆಗೆ ಅಫಿಡವಿಟ್‌ನಲ್ಲಿ ಉತ್ತರಿಸಿದ್ದೇವೆ. ಸಿಒಪಿಗೆ ಸಂಬಂಧಿಸಿದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವುದು ಚುನಾವಣೆ ನಡೆಸಲು ವಿಳಂಬಕ್ಕೆ ಕಾರಣವೇ ಎಂದು ಕೇಳಲಾಗಿತ್ತು? ಸ್ಥಳೀಯ ಪರಿಸ್ಥಿತಿ ಮತ್ತು ಸಿದ್ಧತೆಯನ್ನು ಆಧರಿಸಿ ರಾಜ್ಯ ವಕೀಲರ ಪರಿಷತ್‌ಗೆ ಚುನಾವಣೆ ನಡೆಸಲಾಗುವುದು. ಸುಪ್ರೀಂ ಕೋರ್ಟ್‌ನಲ್ಲಿ ಸಿಒಪಿಗೆ ಸಂಬಂಧಿಸಿದಂತೆ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿದೆ. ರಾಜ್ಯ ವಕೀಲರ ಪರಿಷತ್‌ಗೆ ಚುನಾವಣೆ ನಡೆಸುವುದನ್ನು ವಿಳಂಬಗೊಳಿಸಬಾರದು ಎಂದು ಎಲ್ಲಾ ವಕೀಲರ ಪರಿಷತ್‌ಗಳು ಪ್ರಶ್ನಿಸಿರುವ ಅರ್ಜಿಯೂ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ" ಎಂದು ತಿಳಿಸಿದರು.
ಮುಂದುವರೆದು, "ಈ ಅರ್ಜಿಗಳು ಸೆಪ್ಟೆಂಬರ್ 24ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿವೆ. ಸಿಒಪಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಚುನಾವಣೆ ಮುಂದೂಡಬೇಕು ಎಂದು ಕೋರಿರುವ ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ನಿರ್ದೇಶನಕ್ಕಾಗಿ ಕಾಯಲಾಗುತ್ತದೆ. ಪ್ರಾಕ್ಟೀಸ್ ಮತ್ತು ಪ್ರಾಕ್ಟೀಸ್ ಮಾಡದ ವಕೀಲರನ್ನು ಮತದಾರರ ಪಟ್ಟಿಯಿಂದ ತೆಗೆಯಬೇಕಿದೆ” ಎಂದರು.
ಅರ್ಜಿದಾರ ಕೊತ್ವಾಲ್ ಅವರು “ಕೆಎಸ್‌ಬಿಸಿಯ ಹಾಲಿ ಸದಸ್ಯರೊಬ್ಬರು ರಾಜ್ಯದಲ್ಲಿ ಸಿಒಪಿ ಪ್ರಕ್ರಿಯೆ 2024ರ ಜೂನ್‌ನಲ್ಲಿ ಮುಗಿದಿದೆ. ಇದನ್ನು ಕೆಎಸ್‌ಬಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದಿದ್ದಾರೆ” ಎಂದರು. ಎಲ್ಲರ ವಾದ ಆಲಿಸಿದ ಪೀಠವು ಕೊತ್ವಾಲ್‌ಗೆ ಕೆಎಸ್‌ಬಿಸಿ ಮತ್ತು ಬಿಸಿಐ ವಾದಕ್ಕೆ ಪ್ರತ್ಯುತ್ತರ ದಾಖಲಿಸಲು ನಿರ್ದೇಶಿಸಿದೆ.
ಇನ್ನು, ಪರ್ಯಾಯವಾಗಿ ಹೊಸ ಸಂಘ ನೋಂದಾಯಿಸಬಾರದು ಎಂದು ಕೋರಿ ಎಎಬಿ ಸಲ್ಲಿಸಿರುವ ಅರ್ಜಿಯಲ್ಲಿ ಮಧ್ಯಪ್ರವೇಶಿಕೆ ಕೋರಿ ಹಿರಿಯ ವಕೀಲ ಎಸ್ ಬಸವರಾಜು ಅರ್ಜಿ ಸಲ್ಲಿಸಿದ್ದಾರೆ.
ಈ ಸಂಬಂಧ ವಾದಿಸಿದ ಬಸವರಾಜು ಅವರು “ವಕೀಲರ ಕಲ್ಯಾಣ ನಿಧಿ ಕಾಯಿದೆ 1983 ಅಡಿ ಸಂಘವೊಂದಕ್ಕೆ ನೋಂದಣಿ ಮತ್ತು ಮಾನ್ಯತೆ ನೀಡಲು ಅವಕಾಶವಿದೆ. 2008ರಲ್ಲಿ ಕಾಯಿದೆ ತಿದ್ದುಪಡಿಯಾಗಿದ್ದು, ಇದರ ಪ್ರಕಾರ ಸಂಘಗಳು ಕೆಎಸ್‌ಬಿಸಿಯ ಮಾದರಿ ಬೈಲಾವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ. ಎಎಬಿಯು ಸಾಮಾನ್ಯ ಸಭೆಯ ತೀರ್ಮಾನಕ್ಕೆ ಒಳಪಟ್ಟು ಬೈಲಾ ಅಳವಡಿಸಿಕೊಳ್ಳಲಾಗುವುದು ಎಂದು ಹೇಳುತ್ತಾ ಬಂದಿದೆ. ಆದರೆ, ಇದುವರೆಗೂ ಮಾದರಿ ಬೈಲಾವನ್ನು ಎಎಬಿ ಅಳವಡಿಸಿಕೊಂಡಿಲ್ಲ. ನಿಯಮದ ಪ್ರಕಾರ ಇನ್ನೊಂದು ಸಂಘ ನೋಂದಣಿ ಮಾಡಿಸಿ, ಸ್ಟ್ಯಾಂಪ್ ಮಾರಾಟ ಮಾಡಬಹುದಾಗಿದೆ. ಎಎಬಿ ಬೈಲಾ ಅಳವಡಿಸಿಕೊಳ್ಳದಿರುವುದಷ್ಟೇ ಇಲ್ಲಿ ಸಮಸ್ಯೆ” ಎಂದರು.
ಈ ವಾದ ಆಲಿಸಿದ ಪೀಠವು ಎಎಬಿಗೆ ಪರ್ಯಾಯವಾಗಿ ಹೊಸ ಸಂಘಕ್ಕೆ ಮಾನ್ಯತೆ ನೀಡದಂತೆ ಕೆಎಸ್‌ಬಿಸಿಗೆ ನಿರ್ದೇಶಿಸಿರುವ ತನ್ನ ಮಧ್ಯಂತರ ಆದೇಶವನ್ನು ವಿಸ್ತರಿಸಿ, ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಿತು. ಅಲ್ಲದೇ, ಅಂದು ರಹಸ್ಯ ವಿಚಾರಣೆ ಬೇಕೆ ಎಂದು ನಿರ್ಧರಿಸಲು ಪಕ್ಷಕಾರರಿಗೆ ಸೂಚಿಸಿತು. ಇದಕ್ಕೆ ಎಲ್ಲರೂ ರಹಸ್ಯ ವಿಚಾರಣೆಗೆ ಸಹಮತ ಸೂಚಿಸಿದರು.