ವಕೀಲರಿಗೆ ಟೋಲ್ ಶುಲ್ಕ ವಿನಾಯಿತಿ ಕೋರಿ ಕೇಂದ್ರ ಸರ್ಕಾರಕ್ಕೆ ಕೆಎಸ್‌ಬಿಸಿ ಮನವಿ
ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳ ಸೀಮಿತ ಪರಿಧಿಯಲ್ಲಿ ಸಂಚರಿಸುವ ವಕೀಲರಿಗೆ ಟೋಲ್ ಶುಲ್ಕ ಪಾವತಿಯಿಂದ ವಿನಾಯಿತಿ ನೀಡುವಂತೆ ರಾಜ್ಯ ವಕೀಲರ ಪರಿಷತ್ ಕೇಂದ್ರಕ್ಕೆ ಮನವಿ ಮಾಡಿದೆ.
ಈ ಸಂಬಂಧ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಸ್ ಎಸ್ ಮಿಟ್ಟಲಕೋಡ ಅವರು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
“ತಾಲ್ಲೂಕು ಕೇಂದ್ರಗಳಿಂದ 50 ಹಾಗೂ ಜಿಲ್ಲಾ ಕೇಂದ್ರಗಳಿಂದ 100 ಕಿ.ಮೀ ಪರಿಧಿಯಲ್ಲಿ ವೃತ್ತಿನಿರತ ವಕೀಲರು ತಮ್ಮ ಅಧಿಕೃತ ಕೆಲಸದ ನಿಮಿತ್ತ ಸಂಚರಿಸುವಾಗ ಅವರ ವಾಹನಗಳಿಗೆ ಟೋಲ್ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಬೇಕು" ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಅಂಚೆ ಕಚೇರಿ ಆರಂಭಕ್ಕೆ ಮನವಿ
ವಕೀಲರಿಗೆ ಅನುಕೂಲ ಮಾಡಿಕೊಡಲು ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಲಯಗಳ ಆವರಣದಲ್ಲಿ ಅಂಚೆ ಕಚೇರಿ ತೆರೆಯುವಂತೆ ಕೋರಿ ಕೇಂದ್ರ ಸಂವಹನ ಸಚಿವ ಜ್ಯೋತಿರಾಧಿತ್ಯಾ ಸಿಂಧ್ಯಾ ಅವರಿಗೆ ಮಿಟ್ಟಲಕೋಡ ಮನವಿ ಸಲ್ಲಿಸಿದ್ದಾರೆ.
ಇದರಿಂದ ರಾಜ್ಯದಾದ್ಯಂತ ಇರುವ 197 ವಕೀಲ ಸಂಘಗಳಲ್ಲಿನ 1.20 ಲಕ್ಷ ವಕೀಲರಿಗೆ ನೆರವಾಗಲಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.