ವೃತ್ತಿ ಪ್ರಮಾಣಪತ್ರ ಅರ್ಜಿ ಸಲ್ಲಿಕೆಗೆ ಜನವರಿ 10ರ ಗಡುವು ವಿಧಿಸಿದ ಕೆಎಸ್‌ಬಿಸಿ

2010ರ ಜುಲೈ 14ರ ಒಳಗೆ ಎಲ್‌ಎಲ್‌ಬಿ ಪದವಿ ಪೂರ್ಣಗೊಳಿಸಿರುವ, ಆದರೆ ಕಂಪ್ಯೂಟರ್‌ನಲ್ಲಿ ನೈಪುಣ್ಯತೆ ಸಾಧಿಸದಿರುವ ವಕೀಲರು ಸೂಕ್ತ ದಾಖಲೆಗಳೊಂದಿಗೆ ಸಿಒಪಿ ಅರ್ಜಿಯನ್ನು ಜನವರಿ 10ರ ಒಳಗೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
KSBC
KSBC
Published on

ವೃತ್ತಿ ಪ್ರಮಾಣಪತ್ರ (ಸರ್ಟಿಫಿಕೇಟ್‌ ಆಫ್‌ ಪ್ರಾಕ್ಟೀಸ್‌ - ಸಿಒಪಿ) ಅರ್ಜಿ ಸಲ್ಲಿಸುವ ಕಡೆಯ ದಿನಾಂಕವನ್ನು 2024ರ ಜನವರಿ 10ರವರೆಗೆ ರಾಜ್ಯ ವಕೀಲರ ಪರಿಷತ್‌ನ (ಕೆಎಸ್‌ಬಿಸಿ) ಸಿಒಪಿ ಸಮಿತಿಯು ವಿಸ್ತರಿಸಿದೆ.

ಪರಿಷ್ಕೃತ ಡಿಫಾಲ್ಟ್‌ ಪಟ್ಟಿಯನ್ನು ಕೆಎಸ್‌ಬಿಸಿ ವೆಬ್‌ಸೈಟ್‌ನಲ್ಲಿ ಜನವರಿ 3ರಂದು ಪ್ರಕಟಿಸಲಾಗುತ್ತದೆ. ವಕೀಲಿಕೆ ನೋಂದಣಿ ಸಂದರ್ಭದಲ್ಲಿ ಎಲ್ಲಿ ಪ್ರಾಕ್ಟೀಸ್‌ ಮಾಡುತ್ತಿದ್ದರು ಎಂಬುದರ ಆಧಾರದಲ್ಲಿ ಸಿಒಪಿ ಡಿಫಾಲ್ಟರ್‌ಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಅದರಲ್ಲಿ ವಕೀಲರು ತಮ್ಮ ಹೆಸರು ಪರಿಶೀಲಿಸಿಕೊಳ್ಳಬೇಕು ಎಂದು ಕೋರಲಾಗಿದೆ.

ಕೆಎಸ್‌ಬಿಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿರುವ ಸಿಒಪಿ ಮಾನದಂಡದ ಪ್ರಕಾರ 2020ರ ಜನವರಿ 1ರಿಂದ 2023ರ ನವೆಂಬರ್‌ 30ರ ನಡುವೆ ವಕೀಲರಾಗಿ ನೋಂದಣಿ ಮಾಡಿಸಿರುವವರು ಮತ್ತು ಅಖಿಲ ಭಾರತ ವಕೀಲರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರು ಸೂಕ್ತ ದಾಖಲೆಗಳೊಂದಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ವಿವರಿಸಲಾಗಿದೆ.

2010ರ ಜುಲೈ 14ರ ಒಳಗೆ ಎಲ್‌ಎಲ್‌ಬಿ ಪದವಿ ಪೂರ್ಣಗೊಳಿಸಿರುವ, ಆದರೆ ಕಂಪ್ಯೂಟರ್‌ನಲ್ಲಿ ನೈಪುಣ್ಯತೆ ಸಾಧಿಸದಿರುವ ವಕೀಲರು ಸೂಕ್ತ ದಾಖಲೆಗಳೊಂದಿಗೆ ಸಿಒಪಿ ಅರ್ಜಿಯನ್ನು ಕೆಎಸ್‌ಬಿಸಿ ಕಚೇರಿಗೆ 2024ರ ಜನವರಿ 10ರ ಒಳಗೆ ಸಲ್ಲಿಸಬೇಕು. ಅಂಚೆಯ ಮೂಲಕ ಕಳುಹಿಸಲಾಗುವ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಭಾರತೀಯ ವಕೀಲರ ಪರಿಷತ್‌ಗೆ ಜನವರಿ 15ರ ಒಳಗೆ ಸಿಒಪಿ ವರದಿಯನ್ನು ಸಲ್ಲಿಸಬೇಕಿರುವುದರಿಂದ ಯಾವುದೇ ಕಾರಣಕ್ಕೂ ಮತ್ತೊಮ್ಮೆ ದಿನಾಂಕ ವಿಸ್ತರಿಸುವುದಿಲ್ಲ. ಪ್ರಾಕ್ಟೀಸ್‌ ಮಾಡದ ವಕೀಲರ ಪಟ್ಟಿಗೆ ಸೇರುವುದರಿಂದ ಪಾರಾಗಲು ವಕೀಲರು ಸಿಒಪಿ ಅರ್ಜಿ ಸಲ್ಲಿಸಬೇಕು ಎಂದು ಕೆಎಸ್‌ಬಿಸಿ ಅಧ್ಯಕ್ಷ ಎಚ್‌ ಎಲ್‌ ವಿಶಾಲ್‌ ರಘು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Kannada Bar & Bench
kannada.barandbench.com