

ರೀಲ್ಸ್ ಮೂಲಕ ಕಾನೂನು ಸಲಹೆ ನೀಡುವ ನೆಪದಲ್ಲಿ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿದ್ದ ಮತ್ತು ವೃತ್ತಿ ಘನತೆಗೆ ಅಪಚಾರ ಎಸಗಿದ ಆರೋಪದ ಮೇಲೆ ಒಬ್ಬರು ಮಹಿಳೆ ಸೇರಿ ಐವರು ವಕೀಲರ ಸನ್ನದನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಈಚೆಗೆ ಅಮಾನತುಗೊಳಿಸಿದೆ.
ವಕೀಲರಾದ ಬೆಂಗಳೂರಿನ ವಿನಯ್‌ಕುಮಾರ್, ಜಿ ಮಂಜುನಾಥ್ ಮತ್ತು ರೇಣುಕಾ ದೇವಿ ಅಲಿಯಾಸ್ ರೇಣುಕಾ ಹಿರೇಮಠ, ಮೈಸೂರಿನ ವಿ ರವಿಕುಮಾರ್ ಮತ್ತು ಹುಣಸೂರಿನ ಎನ್ ಪುಟ್ಟೇಗೌಡ ಅವರ ಸನ್ನದನ್ನು ಕೆಎಸ್‌ಬಿಸಿಯು ಅಮಾನತುಗೊಳಿಸಿದೆ.
ಸಾಮಾಜಿಕ ಮಾಧ್ಯಮ ಮತ್ತು ಇತರೆಡೆ ರೀಲ್ಸ್ ಮಾಡಿರುವುದಕ್ಕೆ ಸಂಬಂಧಿಸಿದಂತೆ ಪರಿಶೀಲನಾ/ಮಧ್ಯಸ್ಥಿಕೆ ಸಮಿತಿಯು ಮಾಡಿರುವ ಶಿಫಾರಸ್ಸುಗಳನ್ನು ಒಪ್ಪಿಕೊಳ್ಳಲಾಗಿದೆ. ವಕೀಲರಾದ ವಿನಯ್‌ಕುಮಾರ್, ಜಿ ಮಂಜುನಾಥ್, ರೇಣುಕಾ ದೇವಿ ಅಲಿಯಾಸ್ ರೇಣುಕಾ ಹಿರೇಮಠ, ವಿ ರವಿಕುಮಾರ್ ಮತ್ತು ಎನ್ ಪುಟ್ಟೇಗೌಡ ಅವರ ವಿರುದ್ಧ ತನಿಖೆ ಬಾಕಿ ಉಳಿಸಿ ಸನ್ನದು ಅಮಾನತುಗೊಳಿಸಲಾಗಿದೆ ಎಂದು ಕೆಎಸ್‌ಬಿಸಿ ನಿರ್ಣಯದಲ್ಲಿ ತಿಳಿಸಲಾಗಿದೆ.
ಭಾರತೀಯ ವಕೀಲರ ಪರಿಷತ್ (ಬಿಸಿಐ) ನಿಯಮ 36 ವಕೀಲರ ಕರ್ತವ್ಯಕ್ಕೆ ಸಂಬಂಧಿಸಿದ್ದಾಗಿದ್ದು, ವಕೀಲರು ತಮ್ಮ ಕೆಲಸವನ್ನು ಯಾವುದೇ ರೀತಿಯಲ್ಲೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವುದೇ ವಿಧಾನ ಅಥವಾ ಮಾಧ್ಯಮ ಬಳಸಿ ಪ್ರಚಾರ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ಇದರ ಉಲ್ಲಂಘನೆಯು ವಕೀಲರ ಕಾಯಿದೆ ಸೆಕ್ಷನ್ 1961ರ ಪ್ರಕಾರ ಶಿಸ್ತುಕ್ರಮಕ್ಕೆ ಆಸ್ಪದ ನೀಡಲಿದೆ.
ಆನ್‌ಲೈನ್ ವೇದಿಕೆಗಳಲ್ಲಿ ಪ್ರಚಾರ ಚಟುವಟಿಕೆ ನಡೆಸುವುದು ವೃತ್ತಿಪರತೆಗೆ ವಿರುದ್ಧ ಎಂದು ಮದ್ರಾಸ್ ಹೈಕೋರ್ಟ್ ಪ್ರಕರಣವೊಂದರಲ್ಲಿ ನೀಡಿರುವ ತೀರ್ಪಿನ ಅನುಸಾರ ಬಿಸಿಐ 2024ರ ಜುಲೈ 8ರಂದು ಅಕ್ರಮ ಚಟುವಟಿಕೆಗಳ ಕುರಿತು ವಕೀಲರಿಗೆ ಎಚ್ಚರಿಕೆ ನೀಡಿತ್ತು. ಅಲ್ಲದೇ, ಅನುಮತಿ ಪಡೆಯದೇ ಆನ್‌ಲೈನ್ ವೇದಿಕೆಗಳಲ್ಲಿ ಪ್ರಚಾರಕ್ಕೆ ಇಳಿದಿರುವ ವಕೀಲರ ವಿರುದ್ಧ ತಕ್ಷಣ ಶಿಸ್ತುಕ್ರಮಕೈಗೊಳ್ಳುವಂತೆ ರಾಜ್ಯ ವಕೀಲರ ಪರಿಷತ್‌ಗಳಿಗೆ ಬಿಸಿಐ ನಿರ್ದೇಶಿಸಿತ್ತು.
ವಕೀಲರ ರೀಲ್ಸ್ ಪ್ರಚಾರಗಳು ಹೆಚ್ಚಾದ ಹಿನ್ನೆಲೆಯಲ್ಲಿ 2025ರ ಆಗಸ್ಟ್ 15ರಂದು ಕೆಎಸ್‌ಬಿಸಿಯು ಆನ್‌ಲೈನ್ ವೇದಿಕೆಗಳಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊಗಳು, ರೀಲ್ಸ್ ಅಥವಾ ಇತರೆ ಪ್ರಚಾರದ ಮಾಹಿತಿಗಳನ್ನು ಆಗಸ್ಟ್ 31ರ ಒಳಗೆ ತೆಗೆಯುವಂತೆ ನಿರ್ದೇಶಿಸಿತ್ತು. ಅಲ್ಲದೇ, ಈ ಕೃತ್ಯದಲ್ಲಿ ತೊಡಗಿದ್ದ ರಾಜ್ಯದ ಹಲವು ವಕೀಲರಿಗೆ ನೋಟಿಸ್ ನೀಡಲಾಗಿದ್ದು, 28 ವಕೀಲರು ಆಕ್ಷೇಪಾರ್ಹ ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಕೆಎಸ್‌ಬಿಸಿ ತಿಳಿಸಿದೆ.
ವಿನಯ್ ಕುಮಾರ್ ಎಂಬ ವಕೀಲರು ಯೂಟ್ಯೂಬ್ ಚಾನಲ್ ಆರಂಭಿಸುವುದರ ಜೊತೆಗೆ ಜಾಹೀರಾತು ನೀಡಿದ್ದು, ಕ್ಲೈಂಟ್‌ಗಳನ್ನು ಆಹ್ವಾನಿಸಿದ್ದರು. 2025ರ ಸೆಪ್ಟೆಂಬರ್ 27ರಂದು ವಿನಯ್ ಕುಮಾರ್‌ಗೆ ಕೆಎಸ್‌ಬಿಸಿ ಶೋಕಾಸ್ ನೋಟಿಸ್ ನೀಡಿತ್ತು ಎನ್ನಲಾಗಿದೆ.
ಈ ಮಧ್ಯೆ, ವಕೀಲರಿಗೆ ಸಾಕಷ್ಟು ಕಾಲಾವಕಾಶ ನೀಡಿ ಒಮ್ಮತದಿಂದ ಪರಿಹಾರ ಕಂಡುಕೊಳ್ಳಲು ಕೆಎಸ್‌ಬಿಸಿಯು ಹಿರಿಯ ವಕೀಲ ಎಸ್ ಬಸವರಾಜು, ಆರ್ ರಾಜಣ್ಣ ಮತ್ತು ಎಸ್ ಎಫ್ ಗೌತಮ್ ಚಂದ್ ಅವರನ್ನು ಒಳಗೊಂಡ ಮೂವರ ಪರಿಶೀಲನಾ ಸಮಿತಿ ರಚಿಸಿತ್ತು. ಆದರೆ, ವಿನಯ್ ಕುಮಾರ್ ಅವರು ಪರಿಶೀಲನಾ ಸಮಿತಿಯ ಹಾದಿ ತಪ್ಪಿಸಿದ್ದು, ಕೆಎಸ್‌ಬಿಸಿ ಕಾರ್ಯದರ್ಶಿಗೆ ಸಂದೇಶ ಕಳುಹಿಸಿ ವಿಡಿಯೋ ಡಿಲೀಟ್ ಮಾಡಲಾಗಿದೆ ಎಂದು ತಿಳಿಸಿದ್ದರು. ಪರಿಶೀಲನಾ ಸಮಿತಿಯು ವಿನಯ್ ಕುಮಾರ್ ಪ್ರಕರಣ ಇತ್ಯರ್ಥಕ್ಕೆ ಶಿಫಾರಸ್ಸು ಮಾಡಿದ್ದ ಬೆನ್ನಿಗೇ ವಿನಯ್ ಕುಮಾರ್ ಅವರು ತಮ್ಮ ವಿಡಿಯೊಗಳನ್ನು ಖಾಸಗಿ ವಿಭಾಗದಿಂದ ಸಾರ್ವಜನಿಕಗೊಳಿಸಿದ್ದರು ಎಂದು ತಿಳಿದುಬಂದಿದೆ.
ಇದರ ಬೆನ್ನಿಗೇ, 2025ರ ನವೆಂಬರ್ 22ರಂದು ವಿನಯ್ ಕುಮಾರ್‌ಗೆ ಸಮಿತಿಯ ಮುಂದೆ ಹಾಜರಾಗಿ ಸ್ಪಷ್ಟನೆ ನೀಡಲು ಮತ್ತೊಂದು ಅವಕಾಶ ನೀಡಲಾಗಿತ್ತು. ಇದು ಪರಿಹಾರ ಆಗದ ಹಿನ್ನೆಲೆಯಲ್ಲಿ ಮತ್ತು ವಿನಯ್ ಕುಮಾರ್ ಪ್ರತಿಕ್ರಿಯಿಸದೇ ಇದ್ದುದರಿಂದ ವಕೀಲರ ಕಾಯಿದೆ ಸೆಕ್ಷನ್ 35ರ ಅಡಿ ತನಿಖೆ ಬಾಕಿ ಉಳಿಸಿ ಸಮಿತಿಯು ಅವರನ್ನು ಅಮಾನತುಗೊಳಿಸಲು ಶಿಫಾರಸ್ಸು ಮಾಡಿತ್ತು.