ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷರು ಮತ್ತು ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಬಿ ವೀರಪ್ಪ ಅವರು ಶುಕ್ರವಾರ ಕೋಲಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಆಸ್ಪತ್ರೆ ಮತ್ತು ಜೈಲುಗಳ ಸ್ಥಿತಿಗತಿ ಪರಿಶೀಲನೆ ನಡೆಸಿದರು.
ಕೋಲಾರದ ಎಸ್ ಎನ್ ಆರ್ ಜಿಲ್ಲಾಸ್ಪತ್ರೆ, ಮುಳಬಾಗಿಲು ಮತ್ತು ಶ್ರೀನಿವಾಸಪುರದ ತಾಲ್ಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದ ನ್ಯಾಯಮೂರ್ತಿ ವೀರಪ್ಪ ಅವರು ರೋಗಿಗಳ ಕುಶಲೋಪರಿ ವಿಚಾರಿಸಿದರು. ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು.
ಅಲ್ಲದೇ, ಕೋಲಾರದ ಜಿಲ್ಲಾ ಕಾರಾಗೃಹಕ್ಕೆ ತೆರಳಿ ಕೈದಿಗಳ ಜೊತೆ ಮಾತುಕತೆ ನಡೆಸಿದರು. ವಯಸ್ಸಾದ ಕೈದಿ ಜೊತೆ ಮಾತುಕತೆ ನಡೆಸಿದ ನ್ಯಾಯಮೂರ್ತಿಗಳು ವಕೀಲರನ್ನು ನೇಮಿಸಿಕೊಂಡಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಆರೋಪಿಯು ವಕೀಲರ ನೇಮಕವಾಗಿದೆ ಎಂದರು.
ಇನ್ನೊಂದು ಕೊಠಡಿಯಲ್ಲಿ ಸಾಮಾನ್ಯ ಕೈದಿಗಳ ಜೊತೆ ಅಪ್ರಾಪ್ತ ಕೈದಿಯನ್ನು ಇಟ್ಟಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು ಆರೋಪಿಯನ್ನು ಬಾಲ ಮಂದಿರಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಹಾಜರಿದ್ದರು.
ಕಾನೂನು ಸೇವೆಗಳ ಪ್ರಾಧಿಕಾರ ಕಾಯಿದೆ 1987ರ ಸೆಕ್ಷನ್ 22ರ ಅಡಿ ಆಸ್ಪತ್ರೆ ಮತ್ತು ಔಷಧಿ ಕೇಂದ್ರಗಳು ಸಾರ್ವಜನಿಕ ವ್ಯಾಪ್ತಿಗೆ ಬರುವುದರಿಂದ ಜನರಿಗೆ ಅಲ್ಲಿ ಕಾನೂನು ಸೇವೆಯ ಅಗತ್ಯತೆ ಪರಿಶೀಲಿಸುವ ಉದ್ದೇಶದಿಂದ ನ್ಯಾಯಮೂರ್ತಿಗಳು ಭೇಟಿ ನೀಡಿದ್ದರು.