ದಾವೆದಾರರ ಅನುಕೂಲಕ್ಕಾಗಿ ಮೂರು ತಿಂಗಳು "ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ” ಸಂಧಾನ ಅಭಿಯಾನ ಆರಂಭಿಸಿದ ಕೆಎಸ್‌ಎಲ್‌ಎಸ್‌ಎ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಧ್ಯಸ್ಥಿಕೆ ಸಂಧಾನ ಯೋಜನಾ ಸಮಿತಿ ನಿರ್ದೇಶನದಂತೆ 01.07.2025 ರಿಂದ 07.10.2025ರವರೆಗೆ ಅಭಿಯಾನ ನಡೆಸಲಾಗುತ್ತದೆ ಎಂದು ಕೆಎಸ್‌ಎಲ್‌ಎಸ್‌ಎ ಪ್ರಕಟಣೆಯಲ್ಲಿ ತಿಳಿಸಿದೆ.
KSLSA
KSLSA
Published on

ರಾಜ್ಯದಲ್ಲಿ ಮಧ್ಯಸ್ಥಿಕೆ ಮೂಲಕ ಪ್ರಕರಣಗಳನ್ನು ರಾಜೀ ಮಾಡಿಸುವ ಉದ್ದೇಶದಿಂದ ಹೈಕೋರ್ಟ್‌/ಜಿಲ್ಲಾ ಮತ್ತು ತಾಲ್ಲೂಕು ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಜುಲೈ 1ರಿಂದ 90 ದಿನಗಳ ಕಾಲ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (ಕೆಎಸ್‌ಎಲ್‌ಎಸ್‌ಎ) “ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ” ವಿಶೇಷ ಅಭಿಯಾನ ಆರಂಭಿಸಿದೆ.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್‌ಎಎಲ್‌ಎಸ್‌ಎ) ಮತ್ತು ಮಧ್ಯಸ್ಥಿಕೆ ಸಂಧಾನ ಯೋಜನಾ ಸಮಿತಿ (ಎಂಸಿಪಿಸಿ) ನಿರ್ದೇಶನದಂತೆ 01.07.2025 ರಿಂದ 07.10.2025ರವರೆಗೆ ಅಭಿಯಾನ ನಡೆಸಲಾಗುತ್ತದೆ ಎಂದು ಕೆಎಸ್‌ಎಲ್‌ಎಸ್‌ಎ ಪ್ರಕಟಣೆಯಲ್ಲಿ ತಿಳಿಸಿದೆ.

ವೈವಾಹಿಕ ವಿವಾದ, ಅಪಘಾತ ಪರಿಹಾರ, ಕೌಟುಂಬಿಕ ದೌರ್ಜನ್ಯ, ಚೆಕ್‌ ಬೌನ್ಸ್‌, ವಾಣಿಜ್ಯ ವಿವಾದ, ಸೇವಾ ಸಂಬಂಧಿತ ಪ್ರಕರಣ, ಕ್ರಿಮಿನಲ್‌ ಸಂಯೋಜಿತ, ಗ್ರಾಹಕರ ವಿವಾದ, ಸಾಲ ಮರುಪಾವತಿ ಪ್ರಕರಣ, ವಿಭಜನೆ, ತೆರವು, ಭೂಸ್ವಾಧೀನ ಮತ್ತು ಮಧ್ಯಸ್ಥಿಕೆ ಹೊಂದುವ ಸೂಕ್ತ ಸಿವಿಲ್‌ ಪ್ರಕರಣಗಳನ್ನು ಅಭಿಯಾನದಲ್ಲಿ ಇತ್ಯರ್ಥಕ್ಕೆ ಪರಿಗಣಿಸಲಾಗುತ್ತದೆ.

“ಮಧ್ಯಸ್ಥಿಕೆಯ ಮೂಲಕ ತಮ್ಮ ಬಾಕಿ ಪ್ರಕರಣಗಳನ್ನು ಪರಿಹರಿಸಿಕೊಳ್ಳ ಬಯಸುವವರು ನ್ಯಾಯಾಲಯದ ವ್ಯಾಪ್ತಿಯಲ್ಲಿ ಆರಂಭಿಸಲ್ಪಟ್ಟಿರುವ ಜಿಲ್ಲಾ ಮತ್ತು ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದಾಗಿದೆ. ಹೈಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳ ಬಯಸುವವರು ಬೆಂಗಳೂರು/ಧಾರವಾಡ ಮತ್ತು ಕಲಬುರ್ಗಿ ಹೈಕೋರ್ಟ್‌ ಕಾನೂನು ಸೇವಾ ಪ್ರಾಧಿಕಾರಗಳನ್ನು ಸಂಪರ್ಕಿಬಹುದು” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಲ್ಲೂಕು, ಜಿಲ್ಲಾ ಮತ್ತು ಹೈಕೋರ್ಟ್‌ ಕಾನೂನು ಸೇವಾ ಸಮಿತಿಗಳನ್ನು ಫೋನ್‌ ಮೂಲಕ ಸಂಪರ್ಕಿಸಬಹುದಾಗಿದೆ. www.kslsa.kar.nic.in ನಲ್ಲಿ ಸಂಪರ್ಕ ಸಂಖ್ಯೆ ಲಭ್ಯವಿದೆ.  

Kannada Bar & Bench
kannada.barandbench.com