ಕೆಎಸ್‌ಎಲ್‌ಯು ಪರೀಕ್ಷೆ ರದ್ದುಗೊಳಿಸಿ ಆದೇಶಿಸಿದ ಹೈಕೋರ್ಟ್‌; ಮೂರು ವರ್ಷದ ಎಲ್ಎಲ್‌ಬಿ ಪದವಿ ವಿದ್ಯಾರ್ಥಿಗಳು ನಿರಾಳ

ನ್ಯಾ. ಆರ್‌ ದೇವದಾಸ್‌ ಅವರು ಫೆಬ್ರವರಿ 8ರಂದು ನೀಡಿದ್ದ ಆದೇಶದಂತೆ ಆಂತರಿಕ ಮೌಲ್ಯಮಾಪನ ಹಾಗೂ ಹಿಂದಿನ ಸೆಮಿಸ್ಟರ್‌ನಲ್ಲಿ ತೋರಿದ್ದ ಕಲಿಕಾ ಪ್ರದರ್ಶನವನ್ನು 50:50 ಅನುಪಾತದಲ್ಲಿ ಆಧರಿಸಿ ಉತ್ತೀರ್ಣಗೊಳಿಸಲು ಸೂಚನೆ.
ಕೆಎಸ್‌ಎಲ್‌ಯು ಪರೀಕ್ಷೆ ರದ್ದುಗೊಳಿಸಿ ಆದೇಶಿಸಿದ ಹೈಕೋರ್ಟ್‌; ಮೂರು ವರ್ಷದ ಎಲ್ಎಲ್‌ಬಿ ಪದವಿ  ವಿದ್ಯಾರ್ಥಿಗಳು ನಿರಾಳ
KSLU and Karnataka High Court

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್‌ಎಲ್‌ಯು) ನಡೆಸಲು ಉದ್ದೇಶಿಸಿದ್ದ ಎರಡು ಮತ್ತು ನಾಲ್ಕನೇ ಸೆಮಿಸ್ಟರ್‌ ಪರೀಕ್ಷೆಗಳನ್ನು ರದ್ದುಪಡಿಸಿ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಅದೇಶಿಸಿದೆ. ಇದರೊಂದಿಗೆ ವಿಶ್ವವಿದ್ಯಾಲಯ ಹಾಗೂ ಕಾನೂನು ವಿದ್ಯಾರ್ಥಿಗಳ ನಡುವೆ ತೀವ್ರ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಪ್ರಕರಣ ಅಂತ್ಯ ಕಂಡಿದೆ.

ಪ್ರಕರಣವನ್ನು ಆಲಿಸಿದ ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠವು ಈ ಕುರಿತ ತೀರ್ಪನ್ನು ಮಂಗಳವಾರ ಪ್ರಕಟಿಸಿದ್ದು ಮೂರು ವರ್ಷದ ಎಲ್‌ಎಲ್‌ಬಿ ಪದವಿ ಶಿಕ್ಷಣದ ಎರಡು ಮತ್ತು ನಾಲ್ಕನೇ ಸೆಮಿಸ್ಟರ್‌ ವಿದ್ಯಾರ್ಥಿಗಳನ್ನು 50:50 ಪರೀಕ್ಷಾ ಮಾದರಿಯ ಅನುಸಾರ ಮುಂದಿನ ಸೆಮಿಸ್ಟರ್‌ಗೆ ಉತ್ತೀರ್ಣಗೊಳಿಸಲು ನಿರ್ದೇಶಿಸಿದೆ.

ಮೂರು ವರ್ಷದ ಎಲ್‌ಎಲ್‌ಬಿ ಪದವಿ ಕೋರ್ಸಿಗೆ ಸಂಬಂಧಿಸಿದಂತೆ ಎರಡನೇ ಪ್ರತಿವಾದಿಯು (ಕೆಎಸ್‌ಎಲ್‌ಯು) ಎರಡು ಮತ್ತು ನಾಲ್ಕನೇ ಸೆಮಿಸ್ಟರ್‌ಗಳಿಗೆ ಪರೀಕ್ಷೆ ನಡೆಸಲು ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸಲಾಗಿದೆ ಎಂದು ಪೀಠವು ತನ್ನ ಅದೇಶದಲ್ಲಿ ತಿಳಿಸಿದೆ. ಅಲ್ಲದೆ, ಈ ಹಿಂದೆ ಫೆಬ್ರವರಿ 8ರಂದು ನೀಡಿದ್ದ ಆದೇಶದಂತೆ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್‌ಗೆ ಉತ್ತೀರ್ಣಗೊಳಿಸಲು ಸೂಚಿಸಿದೆ.

ಈ ಹಿಂದೆ ನ್ಯಾ. ಆರ್‌ ದೇವದಾಸ್‌ ಅವರು ಫೆಬ್ರವರಿ 8ರಂದು ನೀಡಿದ್ದ ಆದೇಶದಲ್ಲಿ, ವಿದ್ಯಾರ್ಥಿಗಳ ಪ್ರಸಕ್ತ ಸೆಮಿಸ್ಟರ್‌ನ ಆಂತರಿಕ ಮೌಲ್ಯಮಾಪನ ಹಾಗೂ ಹಿಂದಿನ ಸೆಮಿಸ್ಟರ್‌ನಲ್ಲಿ ತೋರಿದ್ದ ಕಲಿಕಾ ಪ್ರದರ್ಶನವನ್ನು 50:50 ಅನುಪಾತದಲ್ಲಿ ಆಧರಿಸಿ ಉತ್ತೀರ್ಣಗೊಳಿಸಲು ಸೂಚಿಸಿತ್ತು.

ನಿಗದಿತ ವೇಳಾಪಟ್ಟಿಯಂತೆ ಇಂದಿನಿಂದ (ಡಿ.15) ಕಾನೂನು ಪದವಿ ಕೋರ್ಸ್‌ಗಳ ಪರೀಕ್ಷೆಗಳು ಆರಂಭವಾಗಬೇಕಿದ್ದವು. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಕಾನೂನು ಸಚಿವರು ಭೌತಿಕ ಪರೀಕ್ಷೆಗಳನ್ನು ಮಾಡುವುದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದರು. ಕಾನೂನು ಸಚಿವ ಮಾಧುಸ್ವಾಮಿ ಅವರು ಪರೀಕ್ಷೆಯನ್ನು ನಡೆಸುವುದಾಗಿ ಸದನಲ್ಲಿ ಹೇಳಿಕೆಯನ್ನೂ ನೀಡಿದ್ದರು. ಪರೀಕ್ಷೆಯಿಲ್ಲದೆ ಉತ್ತೀರ್ಣ ಮಾಡಬೇಕೆಂಬ ಬೇಡಿಕೆಯ ಈಡೇರಿಕೆ ಸಾಧ್ಯವಿಲ್ಲ ಎಂದು ಗುಡುಗಿದ್ದರು. ಸ್ವತಃ ಅವರದೇ ಪಕ್ಷದ ನಾಯಕರಾದ ಜಗದೀಶ್‌ ಶೆಟ್ಟರ್‌ ಅವರಿಂದಲೇ ವಿದ್ಯಾರ್ಥಿಗಳ ಬೇಡಿಕೆಗೆ ಕಿವಿಗೊಡದ ಕುಲಪತಿಯವರ ಆತುರದ ನಡೆಯ ಬಗ್ಗೆ ಪ್ರತಿರೋಧ ವ್ಯಕ್ತವಾಗಿತ್ತು.

ಮುಂದುವರಿದ ಗೊಂದಲ: ನ್ಯಾಯಾಲಯದ ಆದೇಶದ ನಡುವೆಯೇ ಐದು ವರ್ಷದ ಸೆಮಿಸ್ಟರ್ ವಿದ್ಯಾರ್ಥಿಗಳ ಭವಿಷ್ಯದ ವಿಚಾರ ಇನ್ನೂ ಡೋಲಾಯಮಾನ ಸ್ಥಿತಿಯಲ್ಲಿದೆ. ಆದೇಶವು ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ನ ಎರಡು ಮತ್ತು ನಾಲ್ಕನೇ ಸೆಮಿಸ್ಟರ್‌ಗಳಿಗೆ ಸೀಮಿತವಾಗಿದ್ದು ಐದು ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿಗಳ ಪರೀಕ್ಷೆಯ ಬಗ್ಗೆ ಯಾವುದೇ ಅಂಶವನ್ನು ಉಲ್ಲೇಖಿಸಿಲ್ಲದೆ ಇರುವುದು ಗೊಂದಲಕ್ಕೆ ಕಾರಣವಾಗಿದೆ.

Related Stories

No stories found.
Kannada Bar & Bench
kannada.barandbench.com