ಮೂರು ವರ್ಷದ ಎಲ್‌ಎಲ್‌ಬಿ ಪರೀಕ್ಷೆ: ಏಕಸದಸ್ಯ ಪೀಠದ ತೀರ್ಪು ರದ್ದು; ಪರೀಕ್ಷೆ ನಡೆಸಲು ಕೆಎಸ್‌ಎಲ್‌ಯುಗೆ ಅನುಮತಿ

ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠವು ಡಿಸೆಂಬರ್ 14ರಂದು ಹೊರಡಿಸಿದ್ದ ತೀರ್ಪನ್ನು ಪ್ರಶ್ನಿಸಿ ಕೆಎಸ್‌ಎಲ್‌ಯು ಸಲ್ಲಿಸಿದ್ದ ಮೇಲ್ಮನವಿ ಮಾನ್ಯ ಮಾಡಿದ ಧಾರವಾಡದ ಪೀಠ.
ಮೂರು ವರ್ಷದ ಎಲ್‌ಎಲ್‌ಬಿ ಪರೀಕ್ಷೆ: ಏಕಸದಸ್ಯ ಪೀಠದ ತೀರ್ಪು ರದ್ದು; ಪರೀಕ್ಷೆ ನಡೆಸಲು ಕೆಎಸ್‌ಎಲ್‌ಯುಗೆ ಅನುಮತಿ
KSLU and Karnataka High Court

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್ಎಲ್ಯು) ನಡೆಸಲು ಉದ್ದೇಶಿಸಿದ್ದ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಪಡಿಸಿ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ರದ್ದುಪಡಿಸಿದೆ. ಇದರೊಂದಿಗೆ ವಿಶ್ವವಿದ್ಯಾಲಯ ಹಾಗೂ ಕಾನೂನು ವಿದ್ಯಾರ್ಥಿಗಳ ನಡುವೆ ತೀವ್ರ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಪ್ರಕರಣ ಅಂತ್ಯ ಕಂಡಿದೆ.

ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠವು ಡಿಸೆಂಬರ್ 14ರಂದು ಹೊರಡಿಸಿದ್ದ ತೀರ್ಪನ್ನು ಪ್ರಶ್ನಿಸಿ ಕೆಎಸ್‌ಎಲ್‌ಯು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎಸ್‌ ಜಿ ಪಂಡಿತ್‌ ಮತ್ತು ಅನಂತ್‌ ರಾಮನಾಥ್‌ ಹೆಗಡೆ ಅವರ ನೇತೃತ್ವದ ವಿಭಾಗೀಯ ಪೀಠವು ಇಂದು ತೀರ್ಪು ಪ್ರಕಟಿಸಿದೆ.

“ಕಾನೂನು ಶಿಕ್ಷಣದ ಹಿತಾಸಕ್ತಿಯ ದೃಷ್ಟಿಯಿಂದ ಆದೇಶ ಮಾಡಲಾಗುತ್ತಿದ್ದು, ಕೆಎಸ್‌ಎಲ್‌ಯು ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಲಾಗಿದೆ. ಏಕಸದಸ್ಯ ಪೀಠವು ಕಳೆದ ವರ್ಷದ ಡಿಸೆಂಬರ್‌ 14ರಂದು ಹೊರಡಿಸಿದ್ದ ಆದೇಶವನ್ನು ಬದಿಗೆ ಸರಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಭಾರತೀಯ ವಕೀಲರ ಪರಿಷತ್‌ ಕಳೆದ ವರ್ಷದ ಜೂನ್‌ 10ರಂದು ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿರುವಂತೆ ಆನ್‌ ಲೈನ್‌, ಆಫ್‌ಲೈನ್‌ ಸೇರಿದಂತೆ ಯಾವುದಾದರೂ ವಿಧಾನದಲ್ಲಿ ಪರೀಕ್ಷೆ ನಡೆಸಲು, ಈ ಆದೇಶವನ್ನು ವೆಬ್‌ನಲ್ಲಿ ಹಾಕಿದ ಹತ್ತು ದಿನಗಳಲ್ಲಿ ಕ್ರಮಕೈಗೊಳ್ಳಬೇಕು” ಎಂದು ಕೆಎಸ್‌ಎಲ್‌ಯುಗೆ ಪೀಠವು ನಿರ್ದೇಶಿಸಿದೆ.

“ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ನ ಎರಡು ಮತ್ತು ನಾಲ್ಕನೇ ಸೆಮಿಸ್ಟರ್‌ ಪರೀಕ್ಷೆ/ಮೌಲ್ಯಮಾಪನ ವಿಧಾನಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಕೈಗೊಳ್ಳಬೇಕು. ಪರೀಕ್ಷೆ/ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಕಾಲಾವಕಾಶದ ಕುರಿತು ನಿಯಮಗಳಿದ್ದರೆ ಅವುಗಳನ್ನು ಕೆಎಸ್‌ಎಲ್‌ಯು ಖಾತರಿಪಡಿಸಬೇಕು” ಎಂದು ವಿಭಾಗೀಯ ಪೀಠವು ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಮೂರು ವರ್ಷದ ಎಲ್ಎಲ್‌ಬಿ ಪದವಿ ಶಿಕ್ಷಣದ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳನ್ನು 50:50 ಪರೀಕ್ಷಾ ಮಾದರಿಯ ಅನುಸಾರ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್‌ಗೆ ಉತ್ತೀರ್ಣಗೊಳಿಸಲು ಏಕಸದಸ್ಯ ಪೀಠವು ಕೆಎಸ್‌ಎಲ್‌ಯುಎಗೆ ನಿರ್ದೇಶಿಸಿತ್ತು.

ಮೂರು ವರ್ಷದ ಎಲ್ಎಲ್‌ಬಿ ಪದವಿ ಕೋರ್ಸಿಗೆ ಸಂಬಂಧಿಸಿದಂತೆ ಎರಡನೇ ಪ್ರತಿವಾದಿಯಾಗಿದ್ದ ಕೆಎಸ್ಎಲ್‌ಯು ಎರಡು ಮತ್ತು ನಾಲ್ಕನೇ ಸೆಮಿಸ್ಟರ್‌ಗಳಿಗೆ ಪರೀಕ್ಷೆ ನಡೆಸಲು ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸಲಾಗಿದೆ ಎಂದು ಪೀಠವು ತನ್ನ ಅದೇಶದಲ್ಲಿ ತಿಳಿಸಿತ್ತು. ಅಲ್ಲದೆ, ಈ ಹಿಂದೆ ಫೆಬ್ರವರಿ 8ರಂದು ನೀಡಿದ್ದ ಆದೇಶದಂತೆ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್‌ಗೆ ಉತ್ತೀರ್ಣಗೊಳಿಸಲು ಸೂಚಿಸಿತ್ತು.

Related Stories

No stories found.