ಬಸ್‌-ಬೈಕ್‌ ಡಿಕ್ಕಿ: ಸವಾರನಿಗೆ ನೀಡಿದ್ದ ಪರಿಹಾರದ ಮೊತ್ತವನ್ನು ₹3.4 ಲಕ್ಷದಿಂದ ₹85 ಸಾವಿರಕ್ಕೆ ಇಳಿಸಿದ ಹೈಕೋರ್ಟ್‌

ಕೆಎಸ್‌ಆರ್‌ಟಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾ. ಲಲಿತಾ ಕನ್ನೆಘಂಟಿ ನೇತೃತ್ವದ ಪೀಠ ಪುರಸ್ಕಿರಿಸಿದೆ. ಶೇ.6 ಬಡ್ಡಿ ಸೇರಿಸಿ ಕನಕಪುರದ ಬೈಕ್‌ ಸವಾರ ವೀರಭದ್ರಗೆ ₹84,500 ಪರಿಹಾರ ಬಿಡುಗಡೆ ಮಾಡುವಂತೆ ಕೆಎಸ್‌ಆರ್‌ಟಿಸಿಗೆ ನಿರ್ದೇಶಿಸಿದೆ.
Karnataka HC
Karnataka HC

ಒಂದೂವರೆ ದಶಕದ ಹಿಂದೆ ಕನಕಪುರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಶೇ.75ರಷ್ಟು ಬೈಕ್ ಸವಾರನದ್ದೇ ತಪ್ಪು ಎಂದು ತೀರ್ಮಾನಿಸಿರುವ ಕರ್ನಾಟಕ ಹೈಕೋರ್ಟ್, ಸವಾರನಿಗೆ ನೀಡಿದ್ದ ಪರಿಹಾರದ ಮೊತ್ತವನ್ನು ₹3.4 ಲಕ್ಷದಿಂದ ₹ 85 ಸಾವಿರಕ್ಕೆ ಕಡಿತಗೊಳಿಸಿದೆ.

ಕೆಎಸ್‌ಆರ್‌ಟಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಲಲಿತಾ ಕನ್ನೆಘಂಟಿ ನೇತೃತ್ವದ ಏಕಸದಸ್ಯ ಪೀಠ ಪುರಸ್ಕಿರಿಸಿದೆ. ಶೇ.6 ಬಡ್ಡಿ ಸೇರಿಸಿ ಬೈಕ್‌ ಸವಾರ ಕನಕಪುರದ ವೀರಭದ್ರ ಅವರಿಗೆ ₹84,500 ಪರಿಹಾರ ಬಿಡುಗಡೆ ಮಾಡುವಂತೆ ಕೆಎಸ್‌ಆರ್‌ಟಿಸಿಗೆ ನಿರ್ದೇಶಿಸಿದೆ.

ಮೋಟಾರು ವಾಹನ ಅಪಘಾತ ಪರಿಹಾರ ಮಂಡಳಿಯು ಕೆಎಸ್‌ಆರ್‌ಟಿಸಿ ಬಸ್ ಚಾಲಕನದ್ದು ಶೇ.90ರಷ್ಟು, ಬೈಕ್ ಸವಾರನದ್ದು ಶೇ.10ರಷ್ಟು ತಪ್ಪಿದೆ ಎಂದು ಸವಾರನಿಗೆ ₹3.4 ಲಕ್ಷ ಪರಿಹಾರಕ್ಕೆ ಆದೇಶ ಮಾಡಿತ್ತು. ಆದರೆ, ಹೈಕೋರ್ಟ್ ಘಟನಾ ಸ್ಥಳದ ಮಹಜರು, ಫೋಟೊ ಮತ್ತು ಸಾಕ್ಷ್ಯಗಳನ್ನು ಆಧರಿಸಿ ಶೇ.75ರಷ್ಟು ತಪ್ಪು ಬೈಕ್ ಸವಾರನದ್ದಾಗಿದೆ ಎಂದು ಹೇಳಿ ಪರಿಹಾರದ ಮೊತ್ತ ಇಳಿಕೆ ಮಾಡಿದೆ.

ಸ್ಥಳ ಮಹಜರು ದಾಖಲೆ ಪರಿಶೀಲಿಸಿದ ನ್ಯಾಯಾಲಯವು ಬಸ್‌ನ ಬಲಭಾಗದ ಒಂದು ಚಕ್ರ ಪಾದಚಾರಿ ಮಾರ್ಗದ ಮೇಲಿದೆ. ಹಿಂದಿನ ಚಕ್ರ ರಸ್ತೆಯ ಮೇಲಿದೆ. ಬೈಕ್ ಬಸ್‌ನ ಮುಂಭಾಗದ ಬಂಪರ್ ಕೆಳಗೆ ಬಿದ್ದಿದೆ. ಚಾಲಕ ಅಪಘಾತ ತಪ್ಪಿಸಲು ಪ್ರಯತ್ನಿಸಿದ್ದಾನೆ. ಹೀಗಾಗಿ, ಬಸ್ ಚಾಲಕನದ್ದೇ ಶೇ.90ರಷ್ಟು ತಪ್ಪಿದೆ ಎಂಬ ನ್ಯಾಯಮಂಡಳಿ ಆದೇಶ ಸರಿಯಿಲ್ಲ. ಘಟನೆಯಲ್ಲಿ ಬೈಕ್ ಸವಾರನದ್ದೇ ಶೇ.75ರಷ್ಟು ತಪ್ಪಾಗಿದೆ. ಹೀಗಾಗಿ, ಪರಿಹಾರ ಕಡಿತಗೊಳಿಸಲಾಗುವುದು ಎಂದು ಹೈಕೋರ್ಟ್‌ ಆದೇಶದಲ್ಲಿ ವಿವರಿಸಿದೆ.

ಕೆಎಸ್‌ಆರ್‌ಟಿಸಿ ಪರ ವಕೀಲರು, ಮೋಟಾರು ವಾಹನ ಅಪಘಾತ ಪರಿಹಾರ ಮಂಡಳಿಯು ಸಾಕ್ಷ್ಯಗಳಿಗೆ ವಿರುದ್ಧವಾದ ತೀರ್ಪು ನೀಡಿದೆ. ಪ್ರಕರಣದಲ್ಲಿ ಬೈಕ್ ಸವಾರನದ್ದೇ ತಪ್ಪಿದ್ದರೂ ಆತನಿಗೆ ಪರಿಹಾರಕ್ಕೆ ಆದೇಶ ನೀಡಿದೆ. ಹೀಗಾಗಿ, ನ್ಯಾಯಮಂಡಳಿ ಆದೇಶ ರದ್ದುಗೊಳಿಸಬೇಕು ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: 2008ರ ಮಾರ್ಚ್‌ 4ರಂದು ಸಾತನೂರಿಂದ ಕನಕಪುರದ ಕಡೆಗೆ ಹೊರಟ್ಟಿದ್ದ ಕೆಎಸ್‌ಆರ್‌ಟಿಸಿ ಬಸ್ ಚಿಕ್ಕಗೌಡನಹಳ್ಳಿ ಬಳಿ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಆಗ ಗಾಯಗೊಂಡಿದ್ದ ಕನಕಪುರದ ನಿವಾಸಿ ವೀರಭದ್ರ ಅವರು ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿಯಲ್ಲಿ, ಬಸ್ ಚಾಲಕನ ನಿರ್ಲಕ್ಷವೇ ಅಪಘಾತಕ್ಕೆ ಕಾರಣ. ಹೀಗಾಗಿ, ತಮಗೆ ₹10 ಲಕ್ಷ ಪರಿಹಾರ ಕೊಡಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.

ನ್ಯಾಯಮಂಡಳಿ ಅಪಘಾತಕ್ಕೆ ಕೆಎಸ್‌ಆರ್‌ಟಿಸಿ ಬಸ್ ಚಾಲಕನದ್ದು ಶೇ.90ರಷ್ಟು, ಬೈಕ್ ಸವಾರನದ್ದು ಶೇ.10ರಷ್ಟು ತಪ್ಪಿದೆ ಎಂದು ಸವಾರನಿಗೆ ₹3.4 ಲಕ್ಷ ಪರಿಹಾರಕ್ಕೆ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. 

Related Stories

No stories found.
Kannada Bar & Bench
kannada.barandbench.com