ಬೆಂಗಳೂರಿನ ಶಿವರಾಜ್ ಅಲಿಯಾಸ್ ಕುಳ್ಳ ಶಿವರಾಜ್ ಅವರನ್ನು ಗೂಂಡಾ ಕಾಯಿದೆ ಅಡಿ ವಶಕ್ಕೆ ಪಡೆದಿರುವ ಪೊಲೀಸ್ ಆಯುಕ್ತರ ಕ್ರಮ ಕಾನೂನುಬಾಹಿರ ಎಂದು ಘೋಷಿಸಬೇಕು ಎಂದು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ.
ಗೂಂಡಾ ಕಾಯಿದೆ ಅಡಿ ಜೈಲು ಸೇರಿರುವ ಕುಳ್ಳ ಶಿವರಾಜ್ ಪತ್ನಿ ಕೆ ಎನ್ ಕಮಲಮ್ಮ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್ ಜಿ ಪಂಡಿತ್ ಮತ್ತು ಎಂ ಜಿ ಉಮಾ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ರೋಹನ್ ತಿಗಾಡಿ ಅವರು “2021ರ ಏಪ್ರಿಲ್ 21ರಂದು ಪೊಲೀಸ್ ಇನ್‌ಸ್ಪೆಕ್ಟರ್ ಜಗದೀಶ್ ಅವರ ವಿರುದ್ಧ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಶಿವರಾಜ್ ಅವರು ದೂರು ನೀಡಿದ ಬಳಿಕ ಸುಳ್ಳು ಪ್ರಕರಣಗಳನ್ನು ಶಿವರಾಜ್ ವಿರುದ್ಧ ದಾಖಲಿಸಿ, ಅವರನ್ನು ಗೂಂಡಾ ಕಾಯಿದೆ ಅಡಿ ಬಂಧಿಸಲಾಗಿದೆ. ಇದು ಕಾನೂನಿಗೆ ವಿರುದ್ಧವಾಗಿದೆ. ಶಿವರಾಜ್ ಅವರನ್ನು ವಶದಲ್ಲಿಟ್ಟುಕೊಳ್ಳುವುದನ್ನು ಮುಂದುವರಿಸುವುದು ಸಾಂವಿಧಾನಿಕವಾಗಿ ಅವರಿಗೆ ದೊರೆತಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ” ಎಂದು ವಾದಿಸಿದರು.
ಇದನ್ನು ಆಲಿಸಿದ ಪೀಠವು ಬೆಂಗಳೂರು ಪೊಲೀಸ್ ಆಯುಕ್ತರು, ಗೃಹ ಕಾರ್ಯದರ್ಶಿ ಹಾಗೂ ಪರಪ್ಪನ ಅಗ್ರಹಾರದ ಹಿರಿಯ ಮೇಲ್ವಿಚಾರಕರಿಗೆ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿ, ಪ್ರಕರಣ ಮುಂದೂಡಿತು.
ಪ್ರಕರಣದ ಹಿನ್ನೆಲೆ: ತಾವರೆಕೆರೆಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಆಗಿದ್ದ ಜಗದೀಶ್ ಎಂಬ ಅಧಿಕಾರಿಯು 2021ರಿಂದ ಅರ್ಜಿದಾರ ಶಿವರಾಜ್ ಮತ್ತು ಅವರ ಕುಟುಂಬಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಅರ್ಜಿದಾರರ ಮನೆ ಮತ್ತು ಪತ್ನಿಯ ಕಚೇರಿ ಬಳಿಗೆ ಬಂದು ಎನ್‌ಕೌಂಟರ್‌ನಲ್ಲಿ ಶಿವರಾಜ್ ಅವರನ್ನು ಸಾಯಿಸುವುದಾಗಿ ಬೆದರಿಸಿದ್ದು, ಹಾಲಿ ವಾಸವಿರುವ ಸ್ಥಳವನ್ನು ಖಾಲಿ ಮಾಡಬೇಕು. ಅಲ್ಲದೇ ಬೆಂಗಳೂರನ್ನು ತೊರೆಯುವಂತೆ ಬೆದರಿಕೆ ಹಾಕಿದ್ದರು. ಹೀಗಾಗಿ, ಶಿವರಾಜ್ ಅವರು 2021ರ ಏಪ್ರಿಲ್ 20ರಂದು ಜಗದೀಶ್ ಅವರ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ (ಕೆಎಸ್‌ಎಚ್‌ಆರ್‌ಸಿ) ದೂರು ನೀಡಿದ್ದರು ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಕೆಎಸ್‌ಎಚ್‌ಆರ್‌ಸಿಯಲ್ಲಿ ದೂರು ದಾಖಲಾಗಿರುವುದನ್ನು ಅರಿತ ಜಗದೀಶ್ ಅವರು ಶಿವರಾಜ್ ಮತ್ತು ಅವರ ಕುಟುಂಬವನ್ನು 2021ರ ಏಪ್ರಿಲ್ 21ರಂದು ಕರೆಯಿಸಿಕೊಂಡು ಅವರನ್ನು ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದಲ್ಲದೇ ಶಿವರಾಜ್ ಅವರಲ್ಲಿನ ದೇಹದ ಗುರುತು ಪಡೆದುಕೊಂಡಿದ್ದರು. ಅಲ್ಲದೇ, ಅದೇ ಸ್ಥಳದಲ್ಲಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಕರೆ ಮಾಡಿದ್ದ ಜಗದೀಶ್ ಅವರು ಶಿವರಾಜ್ ಅವರನ್ನು ಎರಡು ಮೂರು ನಕಲಿ ಪ್ರಕರಣಗಳಲ್ಲಿ ಸಿಲುಕಿಸುವಂತೆ ನಿರ್ದೇಶಿಸಿದ್ದರು ಎಂದು ದೂರಲಾಗಿದೆ.
2021ರ ಏಪ್ರಿಲ್ 23ರಂದು ಸಹೋದ್ಯೋಗಿ ಪೊಲೀಸರ ಮೂಲಕ ಶಿವರಾಜ್ ಅವರ ವಿರುದ್ಧ ರೌಡಿ ಶೀಟ್ ತೆರೆಯಲು ಮೇಲಿನ ಅಧಿಕಾರಿಗಳಿಗೆ ಮನವಿ ಸಲ್ಲಿಕೆಯಾಗುವಂತೆ ನೋಡಿಕೊಂಡಿದ್ದರು. ಈ ಕೋರಿಕೆಗೆ ಅನುಮತಿ ದೊರೆತಿದ್ದು, 2021ರ ಮೇ 6ರಂದು ಶಿವರಾಜ್ ವಿರುದ್ಧ ರೌಡಿ ಶೀಟ್ ತೆರೆಯಲಾಗಿತ್ತು. ಇದರ ಜೊತೆಗೆ ಜಗದೀಶ್ ಅವರ ಆಣತಿಯಂತೆ ಶಿವರಾಜ್ ವಿರುದ್ದ ಹಲವು ನಕಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವಿವರಿಸಲಾಗಿದೆ.
ಅಲ್ಲದೇ, ಬ್ಯಾಡರಹಳ್ಳಿ ಠಾಣೆಯಲ್ಲಿ 2021ರ ಆಗಸ್ಟ್ 11ರಂದು ಧರ್ಮೇಶ್ ಎಂಬವರ ಮೇಲೆ ಹಲ್ಲೆ ನಡೆಸಿರುವುದು ಮತ್ತು ಆಗಸ್ಟ್ 12ರಂದು ಬಂಧಿಸಲು ತೆರಳಿದ್ದಾಗ ಪಿಎಸ್‌ಐ ಹರೀಶ್ ಅವರ ಮೇಲೆ ಖಾರದ ಪುಡಿ ಎರಚಿದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೆಲ್ಲವನ್ನೂ ಆಧರಿಸಿ 2021ರ ಡಿಸೆಂಬರ್ 28ರಂದು ಪೊಲೀಸ್ ಆಯುಕ್ತರು ಗೂಂಡಾ ಕಾಯಿದೆ ಸೆಕ್ಷನ್ 3(1) ರ ಅಡಿ ಶಿವರಾಜ್ ಅವರನ್ನು ವಶಕ್ಕೆ ಪಡೆದು ಪರಪ್ಪನ ಅಗ್ರಹಾರದಲ್ಲಿ ಇಡಲು ಆದೇಶ ಮಾಡಿದ್ದಾರೆ. ಇಲ್ಲಿ ಶಿವರಾಜ್ ಅವರಿಗೆ ಮನವಿ ಸಲ್ಲಿಸಲು ಯಾವುದೇ ಅವಕಾಶ ಮಾಡಿಕೊಟ್ಟಿಲ್ಲ. ಇದು ಕಾನೂನಿನ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಲಾಗಿದೆ.