ಹಾಸ್ಯ ಕಲಾವಿದ ಕಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಎಜಿ ಅನುಮತಿ ನೀಡಿದ್ದೇಕೆ? ಇಲ್ಲಿದೆ ವಿವರ

ಸುಪ್ರೀಂ ಕೋರ್ಟ್‌ ವಿರುದ್ಧ ಕುನಾಲ್‌ ಕಮ್ರಾ ಟ್ವೀಟ್‌ಗಳು ಅತ್ಯಂತ ಆಕ್ಷೇಪಾರ್ಹವಾಗಿವೆ, ತಮ್ಮ ದೃಷ್ಟಿಯಲ್ಲಿ ಅವು ಕ್ರಿಮಿನಲ್‌ ನ್ಯಾಯಾಂಗ ನಿಂದನೆಗೆ ಸಮನಾಗಿವೆ ಎಂದು ಅನುಮತಿ ಪತ್ರದಲ್ಲಿ ಎಜಿ ಕೆ ಕೆ ವೇಣುಗೋಪಾಲ್‌ ವಿವರಿಸಿದ್ದಾರೆ.
Kunal Kamra, Supreme Court
Kunal Kamra, Supreme Court
Published on

ಸುಪ್ರೀಂ ಕೋರ್ಟ್‌ ವಿಮರ್ಶಿಸಿ ಟ್ವೀಟ್‌ಗಳನ್ನು ಮಾಡಿದ್ದ ಹಾಸ್ಯ ಕಲಾವಿದ ಕುನಾಲ್‌ ಕಮ್ರಾ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಗುರುವಾರ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅನುಮತಿ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ ವಿರುದ್ಧ ಕುನಾಲ್‌ ಕಮ್ರಾ ಅವರ ಟ್ವೀಟ್‌ಗಳು ಅತ್ಯಂತ ಪ್ರಶ್ನಾರ್ಹವಾಗಿದ್ದು, ತಮ್ಮ ದೃಷ್ಟಿಯಲ್ಲಿ ಅವು ಕ್ರಿಮಿನಲ್‌ ನ್ಯಾಯಾಂಗ ನಿಂದನೆಗೆ ಸಮಾನವಾಗಿವೆ ಎಂದು ತಮ್ಮ ಅನುಮತಿ ಪತ್ರದಲ್ಲಿ ವೇಣುಗೋಪಾಲ್‌ ವಿವರಿಸಿದ್ದಾರೆ.

ಕಮ್ರಾ ಅವರ ಟ್ವೀಟ್‌ಗಳು “ಕೆಟ್ಟ ಅಭಿರುಚಿ ಹೊಂದಿರುವುದು ಮಾತ್ರವಲ್ಲದೇ ಅವುಗಳು ಸ್ಪಷ್ಟವಾಗಿ ಹಾಸ್ಯ ಮತ್ತು ನ್ಯಾಯಾಂಗ ನಿಂದನೆಯ ಎಲ್ಲೆಯನ್ನು ಮೀರಿವೆ” ಎಂದು ವೇಣುಗೋಪಾಲ್‌ ಉಲ್ಲೇಖಿಸಿದ್ದಾರೆ.

ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರ ನೇತೃತ್ವದ ವಿಭಾಗೀಯ ಪೀಠವು ಬುಧವಾರ ರಿಪಬ್ಲಿಕ್‌ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದನ್ನು ವಿಮರ್ಶಿಸಿ ಕಮ್ರಾ ಟ್ವೀಟ್‌ ಮಾಡಿದ್ದರು.

ಕಮ್ರಾ ಅವರು ನಾಲ್ಕು ಟ್ವೀಟ್‌ಗಳನ್ನು ಅವರ ಮೇಲಿನ ನ್ಯಾಯಾಂಗ ನಿಂದನೆಗೆ ವಕೀಲ ರಿಜ್ವಾನ್‌ ಸಿದ್ದಿಕಿ ಕೋರಿದ್ದರು. ಕಮ್ರಾ ಟ್ವೀಟ್‌ಗಳು ಹೀಗಿವೆ:

  1. ಈ ದೇಶದ ಸುಪ್ರೀಂ ಕೋರ್ಟ್‌ ದೇಶದ ಸುಪ್ರೀಂ ಜೋಕ್‌ ಆಗಿದೆ…

  2. “ನ್ಯಾಷನಲ್ ಇಂಟರೆಸ್ಟ್” ವಿಚಾರಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಕಾರ್ಯನಿರ್ವಹಣೆ ಮಾಡುವ ವೇಗವನ್ನು ಗಮನಿಸಿದರೆ ಮಹಾತ್ಮ ಗಾಂಧಿ ಅವರ ಚಿತ್ರಕ್ಕೆ ಬದಲಾಗಿ ಹರೀಶ್‌ ಸಾಳ್ವೆ ಅವರ ಚಿತ್ರವನ್ನು ಹಾಕುವ ಸಮಯ ಬಂದಿದೆ…

    (ನ್ಯಾಷನಲ್‌ ಇಂಟರೆಸ್ಟ್‌ - ರಾಷ್ಟ್ರೀಯ ಹಿತಾಸಕ್ತಿ ಎನ್ನುವುದು ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರಿಂದ ಪದೇಪದೇ ಬಳಸಲ್ಪಡುವ ಪದ)

  3. ಪ್ರಥಮ ದರ್ಜೆ ಪ್ರಯಾಣಿಕರಿಗೆ ತುರ್ತಾಗಿ ವಿಚಾರಣೆ ಅವಕಾಶ ದೊರೆತ ಬಳಿಕ ಷಾಂಪೇನ್ 'ಸರ್ವ್' ಮಾಡುತ್ತಿರುವ ವಿಮಾನ ಸಹಾಯಕ ಡಿವೈ ಚಂದ್ರಚೂಡ್. ಮತ್ತೊಂದು ಕಡೆ ಸಾಮಾನ್ಯರಿಗೆ ಇಂತಹ 'ಸೇವೆ'ಯಿರಲಿ ಪ್ರವೇಶಕ್ಕೆ, ಕೂರುವುದಕ್ಕೆ ಕೂಡ ಅವಕಾಶ ಸಿಗುತ್ತದೆಯೇ ಎಂಬುದೂ ಗೊತ್ತಿಲ್ಲ.

    ( 'ಜಸ್ಟೀಸ್‌ ಸರ್ವ್ಡ್' ಎನ್ನುವ ಪದಗಳ ಸುತ್ತ ಕಮ್ರಾ ಮಾಡಿದ್ದ ವಿಡಂಬನೆ)

  4. ಸುಪ್ರೀಂ ಕೋರ್ಟ್‌ ಅಥವಾ ನ್ಯಾಯಮೂರ್ತಿಗಳನ್ನು ಗೌರವಾನ್ವಿತ ಎಂದು ಸಂಬೋಧಿಸುವ ವಿಶೇಷಣದ ಬಳಕೆಯನ್ನು ಬೆನ್ನುಮೂಳೆ ಇರುವ ಎಲ್ಲಾ ವಕೀಲರು ನಿಲ್ಲಿಸಬೇಕು. ಕಟ್ಟಡವನ್ನು ಗೌರವ ಎಂದೋ ಬಿಟ್ಟು ಹೋಗಿದೆ…

ಸುಪ್ರೀಂ ಕೋರ್ಟ್‌ಗೆ ಕೇಸರಿ ಬಣ್ಣ ಬಳಿದಿರುವ ಮತ್ತು ಸುಪ್ರೀಂ ಕೋರ್ಟ್‌ ಕಟ್ಟಡದಲ್ಲಿ ಬಿಜೆಪಿ ಬಾವುಟ ಹಾರಾಡುತ್ತಿರುವ ತಿರುಚಿದ ಚಿತ್ರವನ್ನು ಕಮ್ರಾ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ನ ತಿರುಚಿದ ಚಿತ್ರವು ಸರ್ವೋನ್ನತ ನ್ಯಾಯಾಲಯವು ನಿಷ್ಪಕ್ಷಪಾತವಾಗಿಲ್ಲ. ಅದು ಭಾರತೀಯ ಜನತಾ ಪಕ್ಷಕ್ಕಾಗಿ ಇದೆ ಎಂದು ಪ್ರಚೋದಿಸುವ ಉದ್ದೇಶವನ್ನು ಹೊಂದಿದೆ ಎಂದು ವೇಣುಗೋಪಾಲ್‌ ಹೇಳಿದ್ದಾರೆ.

ಕೇಸರಿ ಬಣ್ಣ ಬಳಿದಿರುವ ಸುಪ್ರೀಂ ಕೋರ್ಟ್‌ನಲ್ಲಿ ಬಿಜೆಪಿಯ ಬಾವುಟ ಹಾಕಿರುವುದು ಸುಪ್ರೀಂ ಕೋರ್ಟ್‌ನ ಒಟ್ಟು ಅಸ್ತಿತ್ವಕ್ಕೆ ವಿರುದ್ಧವಾಗಿ ಅದನ್ನು ಪ್ರಚೋದಿಸುವ ಕೃತ್ಯವಾಗಿದೆ. ಸುಪ್ರೀಂ ಕೋರ್ಟ್‌ ಮತ್ತು ಅಲ್ಲಿರುವ ನ್ಯಾಯಮೂರ್ತಿಗಳು ಸ್ವತಂತ್ರ ಮತ್ತು ನಿಷ್ಪಕ್ಷಪಾತವಾಗಿಲ್ಲ. ಬದಲಾಗಿ ಇದು ಆಡಳಿತ ಪಕ್ಷದ ನ್ಯಾಯಾಲಯವಾಗಿದ್ದು, ಬಿಜೆಪಿಯ ಅನುಕೂಲಕ್ಕಾಗಿ ಇದೆ ಎಂಬ ಈ ಎಲ್ಲಾ ಅಂಶಗಳು ನನ್ನ ದೃಷ್ಟಿಯಲ್ಲಿ ಕ್ರಿಮಿನಲ್‌ ನ್ಯಾಯಾಂಗ ನಿಂದನೆಗೆ ಸಮನಾಗಿವೆ.
ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌

“ಸಂವಿಧಾನದ ಅಡಿ ವಾಕ್‌ ಸ್ವಾತಂತ್ರ್ಯವು ನ್ಯಾಯಾಂಗ ನಿಂದನೆ ಕಾನೂನಿಗೆ ಒಳಪಟ್ಟಿರುವುದರಿಂದ ಅಸಮರ್ಥನೀಯವಾಗಿ ಮತ್ತು ಲಜ್ಜೆಗೆಟ್ಟ ರೀತಿಯಲ್ಲಿ ಸಂಸ್ಥೆಯನ್ನು ವಿಮರ್ಶಿಸಬಾರದು ಎಂಬುದನ್ನು ಜನರು ಅರ್ಥಮಾಡಿಕೊಳ್ಳಲು ಇದು ಸೂಕ್ತ ಸಮಯವಾಗಿದೆ. ಹಾಗೆ ಮಾಡಿದಲ್ಲಿ ಅದು ನ್ಯಾಯಾಂಗ ನಿಂದನೆ ಕಾಯಿದೆ 1972 ರ ಅಡಿ ಶಿಕ್ಷೆಗೆ ಅರ್ಹವಾಗಿದೆ” ಎಂದು ವೇಣುಗೋಪಾಲ್‌ ವಿವರಿಸಿದ್ದಾರೆ.

Also Read
ನ್ಯಾಯಾಂಗ ನಿಂದನಾ ತೀರ್ಪು ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿ, ಪರಿಷತ್ತು ಸ್ಪಷ್ಟನಿಲುವು ತಳೆಯಲಿ: ಭೂಷಣ್ ಪ್ರತಿಕ್ರಿಯೆ

ಅಟಾರ್ನಿ ಜನರಲ್‌ ವೇಣುಗೋಪಾಲ್‌ ಅವರು ಕಾನೂನು ವಿದ್ಯಾರ್ಥಿ ಸ್ಕಂದ ಬಾಜ್ಪೇಯಿ ಮತ್ತು ವಕೀಲರಾದ ಶ್ರೀರಂಗ ಕಾಂತೇಶ್ವರಕರ್‌ ಮತ್ತು ಅಭಿಷೇಕ್‌ ರಾಸ್ಕರ್‌ ಅವರಿಗೆ ಅನುಮತಿ ನೀಡಿದ್ದಾರೆ. ಕುನಾಲ್‌ ಕಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅನುಮತಿ ನೀಡುವಂತೆ ಎಜಿಗೆ ಒಟ್ಟು 10ಮನವಿ ಸಲ್ಲಿಕೆಯಾಗಿದ್ದವು.

Kannada Bar & Bench
kannada.barandbench.com