[ಸಾಕ್ಷ್ಯಾಧಾರ ಕೊರತೆ] ಅಕ್ರಮ ಸಂಬಂಧ ಆರೋಪದಲ್ಲಿ ಮಹಿಳೆ ಕೊಲೆಗೈದ ಆರೋಪಿಗಳ ಖುಲಾಸೆ

“ವಿಚಾರಣಾಧೀನ ನ್ಯಾಯಾಲಯವು ಕಾನೂನಾತ್ಮಕ ದಾಖಲೆಗಳ ಕೊರೆತೆ ಹಿನ್ನೆಲೆಯಲ್ಲಿ ಆರೋಪಿಗಳನ್ನು ನೈತಿಕವಾಗಿ ಅಪರಾಧಿಗಳು ಎಂದು ಘೋಷಿಸಿರುವ ಸಾಧ್ಯತೆ” ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.
Justices Sreenivas Harish Kumar and S Rachaiah
Justices Sreenivas Harish Kumar and S Rachaiah

ಅಕ್ರಮ ಸಂಬಂಧ ಹೊಂದಿದ್ದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಮೂವರು ಆರೋಪಿಗಳಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿ ಆದೇಶಿಸಿದೆ.

ವಿಚಾರಣಾಧೀನ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ ನಿಂಗಣ್ಣ ಮತ್ತು ನಾಗಮ್ಮ ದಂಪತಿ ಮತ್ತು ಮಗ ಎಂ ಎನ್ ಪ್ರಸಾದ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ ಹರೀಶ್ ಕುಮಾರ್ ಮತ್ತು ಎಸ್ ರಾಚಯ್ಯ ಅವರ ನೇತೃತ್ವದ ವಿಭಾಗೀಯ ಪೀಠ ಪುರಸ್ಕರಿಸಿದೆ.

“ವಿಚಾರಣಾಧೀನ ನ್ಯಾಯಾಲಯವು ಕಾನೂನಾತ್ಮಕ ದಾಖಲೆಗಳ ಕೊರೆತೆ ಹಿನ್ನೆಲೆಯಲ್ಲಿ ಆರೋಪಿಗಳನ್ನು ನೈತಿಕವಾಗಿ ಅಪರಾಧಿಗಳು ಎಂದು ಘೋಷಿಸಿರುವ ಸಾಧ್ಯತೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಪ್ರಕರಣ ಸಂಬಂಧ ಪ್ರಾಸಿಕ್ಯೂಷನ್ ಸಲ್ಲಿಸಿರುವ ಸಾಕ್ಷ್ಯಾಧಾರ ಸಂಶಯಾಸ್ಪದವಾಗಿವೆ. ಸತ್ಯಾಂಶ ಹೊರಗೆಡವುದರಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣ ವಿಫಲವಾಗಿದೆ” ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ.

ವಿಚಾರಣಾಧೀನ ನ್ಯಾಯಾಲಯವು ವಿಚಾರಣೆ ವೇಳೆ ಸಾಕ್ಷ್ಯಾಧಾರಗಳು ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಸಹಕಾರ ನೀಡಿಲ್ಲ ಎಂದು ತಿಳಿಸಿದೆ. ಆದರೆ, ಪ್ರತಿವಾದಿಗಳು ಕ್ರಿಮಿನಲ್ ನ್ಯಾಯಶಾಸ್ತ್ರದ ತತ್ವದ ವಿರುದ್ಧವಾದ ತನ್ನ ಪ್ರಕರಣವನ್ನು ಸಾಬೀತುಪಡಿಸಬೇಕಿತ್ತು ಎಂದು ಪೀಠ ಹೇಳಿದೆ.

ಸರ್ಕಾರಿ ಅಭಿಯೋಜಕರು ವಾದದಲ್ಲಿ ಆರೋಪಿಗಳು ಸಾಕ್ಷಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳುವ ಮೂಲಕ ಸಾಕ್ಷಿಗಳ ಅಪಖ್ಯಾತಿಗೊಳಿಸಲು ವ್ಯರ್ಥ ಪ್ರಯತ್ನ ಮಾಡಿದ್ದಾರೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಆದ್ದರಿಂದ, ಮೇಲ್ಮನವಿಯನ್ನು ಪುರಸ್ಕರಿಸಿದ್ದು, ಆರೋಪಿಗಳನ್ನು ನಿರಪರಾಧಿಗಳು ಎಂಬುದಾಗಿ ಘೋಷಿಸಿರುವುದಾಗಿ ಪೀಠ ತಿಳಿಸಿದೆ.

ಮೇಲ್ಮನವಿದಾರರ ಪರ ವಕೀಲರು, ತಮ್ಮ ಅರ್ಜಿಯಲ್ಲಿ ಘಟನೆ ಸಂಬಂಧ ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಇಲ್ಲ. ಆದರೂ ಪ್ರತಿಕೂಲ ಸಾಕ್ಷ್ಯಗಳನ್ನು ಪರಿಗಣಿಸಿ ಶಿಕ್ಷೆ ಪ್ರಕಟಿಸಲಾಗಿದೆ. ವಿಚಾರಣಾಧೀನ ನ್ಯಾಯಾಲಯ ಪ್ರಾಸಿಕ್ಯೂಷನ್‌ ನೀಡಿದ ದಾಖಲೆಗಳನ್ನು ಪರಿಗಣಿಸಿ ಎಲ್ಲಾ ಆರೋಪಿಗಳಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ ಎಂದು ವಾದಿಸಿದ್ದರು.

ಸರ್ಕಾರಿ ಅಭಿಯೋಜಕರು, ಪ್ರತ್ಯಕ್ಷದರ್ಶಿ ಸಾಕ್ಷಿಗಳನ್ನು ಕರೆತರುವುದಕ್ಕೆ ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಆದರೆ, ಅವರು ಸತ್ಯವನ್ನು ನ್ಯಾಯಾಧೀಶರ ಮುಂದೆ ಹೇಳುವುದರಿಂದ ತಪ್ಪಿಸಿಕೊಂಡಿದ್ದಾರೆ. ಅಲ್ಲದೆ, ಘಟನೆ ಬಳಿಕ ಗ್ರಾಮದಲ್ಲಿ ಪಂಚಾಯಿತಿ ನಡೆದಿದ್ದು, ಸಾಕ್ಷ್ಯಗಳಿಗೆ ಒಂದಷ್ಟು ಹಣ ಕೊಟ್ಟು ಹೇಳಿಕೆಗಳನ್ನು ನೀಡದಂತೆ ಮಾಡಲಾಗಿದೆ. ಅಲ್ಲದೆ, ಸಾಕ್ಷಿಯ ಮಗನಿಗೆ ಉಚಿತ ಶಿಕ್ಷಣ ಕೊಡಿಸುವುದಾಗಿ ಭರವಸೆ ನೀಡಲಾಗಿದೆ.  ಇದೇ ಕಾರಣದಿಂದ ಸಾಕ್ಷಿದಾರರು ಘಟನೆಯ ವಿರುದ್ಧ ಹೇಳಿಕೆ ನೀಡಿದ್ದರು ಎಂದು ಪೀಠಕ್ಕೆ ವಿವರಿಸಿದ್ದರು.

ಪ್ರಕರಣದ ಹಿನ್ನೆಲೆ: ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ವ್ಯಕ್ತಿಯು ಮೃತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಚಾರ ಗೊತ್ತಾಗಿ ಮೂರನೇ ಆರೋಪಿಯ ತಂದೆ-ತಾಯಿಯು (ಪ್ರಕರಣದ ಒಂದನೇ ಮತ್ತು ಎರಡನೇ ಆರೋಪಿಗಳು) ಮಹಿಳೆಗೆ ಎಚ್ಚರಿಕೆ ನೀಡಿದ್ದರು. ಆನಂತರ ಆರೋಪಿಗಳು ಸಂತ್ರಸ್ತೆಯನ್ನು ಮನೆಗೆ ಕರೆದು ಬೆಂಕಿ ಹಚ್ಚಿದ್ದರು. ಬೆಂಕಿಗೆ ಶೇ.90 ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದ ಮಹಿಳೆಯು ಒಂದು ವಾರದ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾಧೀನ ನ್ಯಾಯಾಲಯವು ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಿಲ್ಲದಿದ್ದರೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 15 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿತ್ತು.

Related Stories

No stories found.
Kannada Bar & Bench
kannada.barandbench.com