ಸಂವಿಧಾನದ 370 ನೇ ವಿಧಿಯನ್ನು ದುರ್ಬಲಗೊಳಿಸುವ ಮತ್ತು ಜಮ್ಮು ಕಾಶ್ಮೀರ ರಾಜ್ಯವನ್ನು ಜಮ್ಮು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿರುವ ಕೇಂದ್ರ ಸರ್ಕಾರದ 2019 ರ ನಿರ್ಧಾರವನ್ನು ಪ್ರಶ್ನಿಸಿ ಲಡಾಖ್‌ನ ರಾಜಕೀಯ ನಾಯಕರು ಮತ್ತು ಪತ್ರಕರ್ತರು ಅರ್ಜಿ ಸಲ್ಲಿಸಿದ್ದಾರೆ.
ಖಮರ್ ಅಲಿ ಅಖೂನ್, ಅಸ್ಗರ್ ಅಲಿ ಕರ್ಬಲೈ ಮತ್ತು ಸಜ್ಜದ್ ಹುಸೇನ್ ಈ ಮನವಿ ಸಲ್ಲಿಸಿದ್ದಾರೆ. ಅಖೂನ್ ಅವರು ಕಾರ್ಗಿಲ್ ಕ್ಷೇತ್ರವನ್ನು ಪ್ರತಿನಿಧಿಸುವ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಧಾನಸಭಾ ಸದಸ್ಯರಾಗಿದ್ದರು. ಕರ್ಬಲೈಅವರು ಲಡಾಖ್‌ನ ಕಾರ್ಗಿಲ್ ಜಿಲ್ಲೆಯ ರಾಜಕೀಯ ಮತ್ತು ಸಾಮಾಜಿಕ ನಾಯಕರಾಗಿದ್ದರೆ ಹುಸೇನ್ ʼಗ್ರೇಟರ್ ಲಡಾಖ್ʼನ ಸಂಪಾದಕರಾಗಿದ್ದಾರೆ. ಲೋಕಸಭಾ ಸಂಸದರಾದ ಮೊಹಮ್ಮದ್ ಅಕ್ಬರ್ ಲೋನ್ ಮತ್ತು ಹಸ್ನೈನ್ ಮಸೂದಿ ಸಲ್ಲಿಸಿರುವ ಅರ್ಜಿಯಲ್ಲಿ ಮಧ್ಯಪ್ರವೇಶ ಕೋರಿ ಅರ್ಜಿದಾರರು ಮನವಿ ಸಲ್ಲಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ-2019ರ ಜೊತೆಗೆ ರಾಷ್ಟ್ರಪತಿ ಅವರ ಆದೇಶಗಳು ಸಂವಿಧಾನವು ಒದಗಿಸಿರುವ ಪ್ರಜಾಪ್ರಭುತ್ವ ಮಾದರಿಗೆ ಅನುಗುಣವಾಗಿಲ್ಲ. ಹೀಗಾಗಿ ಕೇಂದ್ರಾಡಳಿತ ಪ್ರದೇಶಗಳನ್ನು ಸ್ಥಾಪಿಸುವ ಸಾಂವಿಧಾನಿಕ ಯೋಜನೆಯನ್ನು ಅತಿಕ್ರಮಿಸುವ ಮೂಲಕ "ರಾಜ್ಯ" ವನ್ನು ಅಳಿಸಿಹಾಕುವ ಶೀತಲ ಪರಿಣಾಮವನ್ನು ಇವು ಬೀರುತ್ತವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅರ್ಜಿಯ ಪ್ರಮುಖಾಂಶಗಳು
ಮರುರಚನೆ ಕಾಯಿದೆಯ ಜೊತೆಗೆ ರಾಷ್ಟ್ರಪತಿ ಅವರ ಆದೇಶಗಳು ಶಾಸಕಾಂಗ ಮತ್ತು ಕಾರ್ಯಾಂಗದ ಅಂಗಗಳನ್ನು ಹಾಳುಗೆಡವಿವೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯದ ನಿವಾಸಿಗಳ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸಿದ್ದು, ಈಗ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿದೆ.
ರಾಷ್ಟ್ರಪತಿ ಆದೇಶಗಳು ಮತ್ತು ಮರುರಚನೆ ಕಾಯಿದೆ ಸಂವಿಧಾನದ 370 ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ ಮತ್ತು ಜನ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರ ಕಸಿದುಕೊಳ್ಳುತ್ತವೆ.
ಇದು ಸರ್ವಾಧಿಕಾರಿ ಆಡಳಿತವನ್ನು ಹೇರಲಿದೆ. ಅಲ್ಲದೆ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಸಂಪೂರ್ಣ ರದ್ದುಪಡಿಸಲಾಗಿದ್ದುಈ ಪ್ರದೇಶದ ನಿವಾಸಿಗಳನ್ನು ಈ ಪ್ರದೇಶದ ಜನಾದೇಶ ಹೊಂದಿರದ ಆಡಳಿತಗಾರರ ಮರ್ಜಿಗೆ ಬಿಡಲಾಗಿದೆ.
370ನೇ ವಿಧಿಯನ್ನು ರದ್ದುಗೊಳಿಸಿದ ತಕ್ಷಣವೇ ಸುಪ್ರೀಂಕೋರ್ಟ್‌ನಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದೆ. ನ್ಯಾಯಾಲಯ ಈ ಕುರಿತು ನೋಟಿಸ್ ನೀಡಿದ್ದರೂ ಅರ್ಜಿಗಳ ವಿಚಾರಣೆ ಇನ್ನೂ ಆರಂಭವಾಗಿಲ್ಲ.
1954 ರ ಸಂವಿಧಾನ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವ) ಆದೇಶವನ್ನು ರದ್ದುಪಡಿಸುವ ಸಲುವಾಗಿ ಆಗಸ್ಟ್ 5 ರಂದು, 2019 ರ ಸಂವಿಧಾನ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವ) ಆದೇಶವನ್ನು ಪರಿಚಯಿಸಲಾಯಿತು. 1954 ರ ಆದೇಶವು ಭಾರತದ ಸಂವಿಧಾನದ ಯಾವ ನಿಬಂಧನೆಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ ಎನ್ನುವುದನ್ನು ಪಟ್ಟಿ ಮಾಡಿತ್ತು.
ಬದಲಿಗೆ ಕೆಲವು ವಿನಾಯಿತಿಗಳು ಮತ್ತು ಮಾರ್ಪಾಡುಗಳೊಂದಿಗೆ ಭಾರತ ಸಂವಿಧಾನದ ಎಲ್ಲಾ ನಿಬಂಧನೆಗಳು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಅನ್ವಯಿಸುತ್ತದೆ ಎಂದು 2019 ರ ಆದೇಶ ತಿಳಿಸಿತು.