ರೈತರು ಸೇರಿದಂತೆ ಎಂಟು ಜನರ ಸಾವಿಗೆ ಕಾರಣವಾದ ಲಖಿಂಪುರ್ ಖೇರಿ ಹಿಂಸಾಚಾರದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಗೆ ಅಲಾಹಾಬಾದ್ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ.
ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಸಲ್ಲಿಸಿದ್ದ ಜಾಮೀನು ಅರ್ಜಿಯ ತೀರ್ಪನ್ನು ಕಳೆದ ತಿಂಗಳು ನ್ಯಾ. ರಾಜೀವ್ ಸಿಂಗ್ ಅವರು ಕಾಯ್ದಿರಿಸಿದ್ದರು. ಆದೇಶ ಪ್ರತಿಯನ್ನು ನಿರೀಕ್ಷಿಸಲಾಗುತ್ತಿದೆ.
ಕಳೆದ ವರ್ಷ ಅಕ್ಟೋಬರ್ 3 ರಂದು, ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರು ಸೇರಿದಂತೆ ಎಂಟು ಮಂದಿಯ ಮೇಲೆ ಆಶಿಶ್ ಅವರ ವಾಹನ ಹರಿದು ಹಿಂಸಾಚಾರ ಭುಗಿಲೆದ್ದಿತ್ತು. ನಂತರ ಅವರನ್ನು ಬಂಧಿಸಿದ್ದ ಉತ್ತರ ಪ್ರದೇಶ ಪೊಲೀಸ್ ವಿಶೇಷ ತನಿಖಾ ತಂಡ ಸ್ಥಳೀಯ ನ್ಯಾಯಾಲಯಕ್ಕೆ 5,000 ಪುಟಗಳ ಆರೋಪಪಟ್ಟಿ ಸಲ್ಲಿಸಿತ್ತು. ಪ್ರಕರಣದಲ್ಲಿ ಮಿಶ್ರಾ ಪ್ರಮುಖ ಆರೋಪಿ ಎಂದು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿತ್ತು. ಜಾಮೀನು ಕೋರಿ ಆಶಿಶ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಕಳೆದ ನವೆಂಬರ್‌ನಲ್ಲಿ ತಿರಸ್ಕರಿಸಿತ್ತು. ಪರಿಣಾಮ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.