ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ರೈತರ ಮೇಲೆ ವಾಹನ ಹರಿಸಿದ ಪ್ರಕರಣದ ತನಿಖೆಯ ಮೇಲ್ವಿಚಾರಣೆಗೆ ನಿವೃತ್ತ ನ್ಯಾಯಮೂರ್ತಿ ಅವರ ಹೆಸರನ್ನು ಅಂತಿಮಗೊಳಿಸಲು ಸುಪ್ರೀಂ ಕೋರ್ಟ್ ಒಂದು ದಿನದ ಕಾಲಾವಕಾಶ ತೆಗೆದುಕೊಂಡಿದೆ. ಕೇಂದ್ರ ಸಚಿವ ಅಜಯ್ ಮಿಶ್ರಾ ಟೇನಿ ಪುತ್ರ ಆಶಿಶ್ ಮಿಶ್ರಾ ಪ್ರಮುಖ ಆರೋಪಿಯಾಗಿರುವ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಡೆಸಿತು.
ಎಫ್‌ಐಆರ್ ದಾಖಲಿಸುವಂತೆ ಮತ್ತು ಪ್ರಕರಣದಲ್ಲಿ ಅಪರಾಧಿಗಳಾದವರಿಗೆ ಶಿಕ್ಷೆ ವಿಧಿಸುವಂತೆ ಕೋರಿ ವಕೀಲರಿಬ್ಬರು ಬರೆದಿದ್ದ ಪತ್ರಗಳನ್ನು ಆಧರಿಸಿ ದಾಖಲಿಸಿಕೊಂಡಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ತ್ರಿಸದಸ್ಯ ಪೀಠವು ನಡೆಸಿತು.
ತನಿಖೆಯ ಮೇಲ್ವಿಚಾರಣೆಗೆ ನ್ಯಾಯಮೂರ್ತಿಯನ್ನು ಸುಪ್ರೀಂ ಕೋರ್ಟ್ ನೇಮಕ ಮಾಡುವುದಕ್ಕೆ ಉತ್ತರ ಪ್ರದೇಶದ ಆಕ್ಷೇಪವಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ ತಿಳಿಸಿದರು. ಇದೇ ವೇಳೆ, ವಿಶೇಷ ತನಿಖಾ ದಳದಲ್ಲಿರುವ ಬಹುತೇಕ ಅಧಿಕಾರಿಗಳು ಲಖೀಂಪುರ ಖೇರಿಗೆ ಸೇರಿದವರಾಗಿದ್ದು, ಅವರನ್ನೂ ರಾಜ್ಯ ಸರ್ಕಾರ ಬದಲಿಸಬೇಕಿದೆ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಸ್ಪಷ್ಟಪಡಿಸಿದರು.
ತನಿಖೆಯನ್ನು ನಡೆಸಲು ಉತ್ತರ ಪ್ರದೇಶೇತರ ಐಪಿಎಸ್ ಕೇಡರ್ ಅಧಿಕಾರಿಯನ್ನು ನೇಮಿಸುವಂತೆಯೂ ನ್ಯಾಯಾಲಯ ಸೂಚಿಸಿತು. “ಐಪಿಎಸ್ ಕೇಡರ್ ಅಧಿಕಾರಿಗಳ ಹೆಸರುಗಳನ್ನು ನೀವು ಸಲ್ಲಿಸಿ. ಆದರೆ, ಅವರು ಉತ್ತರ ಪ್ರದೇಶದವರಾಗಿರಬಾರದು” ಎಂದು ನ್ಯಾ. ಸೂರ್ಯಕಾಂತ್ ಹೇಳಿದರು.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಾಕೇಶ್ ಜೈನ್ ಅವರನ್ನು ನ್ಯಾಯಾಂಗ ಆಯೋಗಕ್ಕೆ ಮುಖ್ಯಸ್ಥರನ್ನಾಗಿ ನೇಮಿಸುವ ಸಂಬಂಧ ಚಿಂತನೆ ನಡೆಸಲಾಗುತ್ತಿದೆ ಎಂದು ಪೀಠ ಹೇಳಿದೆ. ಆದರೆ, ಈ ಸಂಬಂಧ ಆದೇಶ ಹೊರಡಿಸುವುದಕ್ಕೂ ಮುನ್ನ ನ್ಯಾ. ಜೈನ್ ಅವರ ಜೊತೆ ಮಾತನಾಡಬೇಕಿದೆ ಎಂದಿದೆ.
ಮಂಗಳವಾರ ಸಂಜೆಯ ವೇಳೆಗೆ ವಿಶೇಷ ತನಿಖಾ ತಂಡಕ್ಕೆ ನೇಮಿಸಲು ಅಧಿಕಾರಿಗಳ ಹೆಸರಿನ ಪಟ್ಟಿಯನ್ನು ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದ್ದು, ಬುಧವಾರ ಹೊರಡಿಸಲಿರುವ ಆದೇಶದಲ್ಲಿ ಅಧಿಕಾರಿಗಳ ಹೆಸರುಗಳನ್ನು ಸೇರಿಸಲಾಗುವುದು ಎಂದಿದೆ.