ಪ್ರತಿಭಟನಾ ನಿರತ ರೈತರೂ ಸೇರಿದಂತೆ 8 ಮಂದಿಯ ಸಾವಿಗೆ ಕಾರಣವಾದ ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಟೇನಿ ಅವರ ಪುತ್ರ ಆಶೀಶ್ ಮಿಶ್ರಾ ಅವರಿಗೆ ಅಲಾಹಾಬಾದ್ ಹೈಕೋರ್ಟ್ ನೀಡಿರುವ ಜಾಮೀನಿನ ವಿರುದ್ಧ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ಮಾ. 11ರಂದು ಸುಪ್ರೀಂ ಕೋರ್ಟ್ ಆಲಿಸಲಿದೆ.
ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಸಿಜೆಐ ಎನ್ ವಿ ರಮಣ ಅವರ ಪೀಠದ ಮುಂದೆ ಮನವಿಯನ್ನು ಆಲಿಸುವಂತೆ ಕೋರಿ ಶುಕ್ರವಾರ ಉಲ್ಲೇಖಿಸಿದರು. ಈ ವೇಳೆ ಸಿಜೆಐ ಅವರು ಪ್ರಕರಣವನ್ನು ಮಾ. 11ರಂದು ಆಲಿಸಲಾಗುವುದು ಎಂದರು.
ಆರೋಪಿಗೆ ನೀಡಲಾಗಿರುವ ಜಾಮೀನಿನ ಆಧಾರದಲ್ಲಿ ಪ್ರಕರಣದ ಇತರ ಆರೋಪಿಗಳು ಸಹ ಜಾಮೀನು ಕೋರಿಕೆಯನ್ನು ಸಲ್ಲಿಸುತ್ತಿದ್ದಾರೆ. ಹಾಗಾಗಿ, ಪ್ರಕರಣವನ್ನು ತುರ್ತಾಗಿ ಅಲಿಸಬೇಕು ಎಂದು ಪ್ರಶಾಂತ್ ಭೂಷಣ್ ಕೋರಿದರು. ಆಕ್ಷೇಪಿತ ಅದೇಶದ ಆಧಾರದಲ್ಲಿ ಹೈಕೋರ್ಟ್ ಇತರರಿಗೆ ಜಾಮೀನು ನೀಡದಂತೆ ಸೂಚಿಸಲು ಇದೇ ವೇಳೆ ಅವರು ಕೋರಿದರು.
ಈ ವೇಳೆ ಪೀಠವು ಈ ಕುರಿತು ಹೈಕೋರ್ಟ್ ಮುಂದೆ ಮೆಮೊ ಸಲ್ಲಿಸುವಂತೆ ಅರ್ಜಿದಾರರಿ ಸೂಚಿಸಿತು. "ನೀವು ಹೈಕೋರ್ಟ್ ಮುಂದೆ ಮೆಮೊ ಸಲ್ಲಿಸಿ. ನಾವು ಪ್ರಕರಣವನ್ನು ಮಾರ್ಚ್ 11ರಂದು ಪಟ್ಟಿ ಮಾಡಲಿದ್ದೇವೆ. ನನ್ನೊಂದಿಗೆ ಈ ಪ್ರಕರಣವನ್ನು ಆಲಿಸುವ ನ್ಯಾಯಮೂರ್ತಿಗಳು ಅಂದು ಲಭ್ಯವಿರುತ್ತಾರೆ" ಎಂದು ನ್ಯಾಯಮೂರ್ತಿಗಳು ಹೇಳಿದರು.
ಮೃತ ರೈತರ ಕುಟುಂಬಸ್ಥರು ಆರೋಪಿ ಆಶಿಶ್ ಮಿಶ್ರಾ ಅವರಿಗೆ ಜಾಮೀನು ನೀಡಿರುವುದನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.