ಲಖಿಂಪುರ್ ಖೇರಿ ಹಿಂಸಾಚಾರ: ಆರೊಪಿಗಳ ಸೆರೆ, ಎಫ್ಐಆರ್ ಬಗ್ಗೆ ಸ್ಥಿತಿಗತಿ ವರದಿ ಕೇಳಿದ ಸುಪ್ರೀಂ

ಘಟನೆಯನ್ನು ದುರದೃಷ್ಟಕರ ಎಂದಿರುವ ನ್ಯಾಯಾಲಯ ಎಫ್ಐಆರ್ ಮತ್ತು ಘಟನೆಗೆ ಸಂಬಂಧಿಸಿದಂತೆ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಬಾಕಿ ಇರುವ ಅರ್ಜಿಗಳ ಕುರಿತು ವಿವರ ಒದಗಿಸುವಂತೆ ಉತ್ತರಪ್ರದೇಶ ಸರ್ಕಾರದ ಪರ ವಕೀಲರಿಗೆ ಪೀಠ ಸೂಚಿಸಿತು.
Lakhimpur Kheri and Supreme Court
Lakhimpur Kheri and Supreme Court

ರೈತರು ಸೇರಿದಂತೆ ಎಂಟು ಜನರ ಸಾವಿಗೆ ಕಾರಣವಾಗಿದ್ದ ಲಖಿಂಪುರ್ ಖೇರಿ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲಾಗಿದೆಯೇ, ಆರೋಪಿಗಳನ್ನು ಬಂಧಿಸಲಾಗಿದೆಯೇ ಎಂಬ ಕುರಿತಂತೆ ಸ್ಥಿತಿಗತಿ ವರದಿ ಸಲ್ಲಿಸಲು ಸುಪ್ರೀಂಕೋರ್ಟ್‌ ಉತ್ತರಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ತೇನಿ ಪುತ್ರ ಆಶಿಶ್‌ ಮಿಶ್ರಾ ಅವರ ಕಾರು ಹರಿದಿತ್ತು.

ಘಟನೆಯನ್ನು ದುರದೃಷ್ಟಕರ ಎಂದಿರುವ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠ ಎಫ್‌ಐಆರ್‌ ಮತ್ತು ಘಟನೆಗೆ ಸಂಬಂಧಿಸಿದಂತೆ ಅಲಾಹಾಬಾದ್‌ ಹೈಕೋರ್ಟ್‌ನಲ್ಲಿ ಪ್ರಕರಣದ ಸಂಬಂಧ ಬಾಕಿ ಇರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ಕುರಿತು ವಿವರ ಒದಗಿಸುವಂತೆ ಉತ್ತರಪ್ರದೇಶ ಸರ್ಕಾರವನ್ನು ಪ್ರತಿನಿಧಿಸುವ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಗರಿಮಾ ಪ್ರಸಾದ್‌ ಅವರಿಗೆ ನಿರ್ದೇಶನ ನೀಡಿತು.

"ರೈತರು ಮತ್ತಿತರ ವ್ಯಕ್ತಿಗಳು ಕೂಡ ಹತ್ಯೆಗೀಡಾಗಿದ್ದಾರೆ. ಯಾರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಮತ್ತು ಯಾರನ್ನು ಬಂಧಿಸಲಾಗಿದೆ ಎಂದು ನಾವು ತಿಳಿದುಕೊಳ್ಳಬೇಕು. ದಯವಿಟ್ಟು ಈ ಕುರಿತು ಸ್ಥಿತಿಗತಿ ವರದಿ ಸಲ್ಲಿಸಿ" ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೂ ಒಳಗೊಂಡ ಪೀಠ ಹೇಳಿತು. ಶುಕ್ರವಾರ ಪುನಃ ಪ್ರಕರಣದ ವಿಚಾರಣೆ ನಡೆಯಲಿದೆ. ಇದು ದುರದೃಷ್ಟಕರ ಘಟನೆಯಾಗಿದೆ. ಆದರೆ ಈಗಾಗಲೇ ನ್ಯಾಯಾಂಗ ತನಿಖೆಗೆ ಕ್ರಮ ಕೈಗೊಳ್ಳಲಾಗಿದ್ದು ಎಫ್‌ಐಆರ್ ದಾಖಲಾಗಿದೆ ಎಂದು ಎಎಜಿ ಗುರುವಾರ ನ್ಯಾಯಾಲಯಕ್ಕೆ ತಿಳಿಸಿದರು.

ಎಫ್‌ಐಆರ್‌ ಸೂಕ್ತ ರೀತಿಯಲ್ಲಿ ದಾಖಲಾಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ ನ್ಯಾಯಾಂಗ ತನಿಖೆಗಾಗಿ ರಚಿಸಲಾದ ಆಯೋಗದ ವಿವರವನ್ನು ಕೇಳಿತು. ಆಗ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯಲಿದೆ ಎಂದು ಎಎಜಿ ಪ್ರತಿಕ್ರಿಯಿಸಿದರು. ಮೃತ ಲವಪ್ರೀತ್‌ ಸಿಂಗ್‌ ಎಂಬುವವರ ತಾಯಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಅರಿತ ನ್ಯಾಯಾಲಯ ಅವರ ಆರೈಕೆಗಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿತು.

ಹಿಂಸಾಚಾರದ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ಇಬ್ಬರು ವಕೀಲರು ಸಿಜೆಐ ಎನ್‌ ವಿ ರಮಣ ಅವರಿಗೆ ಪತ್ರ ಬರೆದು ಸಿಬಿಐ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಕೋರಿದ್ದರು. ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿ ಪ್ರಕರಣವನ್ನು ಪರಿಗಣಿಸುವಂತೆ ಸೂಚಿಸಿತ್ತು. ಆದರೆ, ರೆಜೆಸ್ಟ್ರಿಯು ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಸ್ವಯಂ ಪ್ರೇರಿತ ಪ್ರಕರಣವಾಗಿ ದಾಖಲಿಸಿಕೊಂಡಿದೆ ಎನ್ನುವ ವಿಷಯವನ್ನೂ ಸಹ ವಿಚಾರಣೆ ವೇಳೆ ಪೀಠವು ಹೇಳಿತು.

Related Stories

No stories found.
Kannada Bar & Bench
kannada.barandbench.com