ಲಖಿಂಪುರ್ ಖೇರಿ ಹಿಂಸಾಚಾರ: ಆಶಿಶ್ ಮಿಶ್ರಾ ಮತ್ತಿತರರ ವಿರುದ್ಧ ಆರೋಪ ನಿಗದಿಪಡಿಸಿದ ಉತ್ತರಪ್ರದೇಶ ನ್ಯಾಯಾಲಯ

ತಮ್ಮನ್ನು ಬಿಡುಗಡೆ ಮಾಡುವಂತೆ ಕೋರಿ ಮಿಶ್ರಾ ಮತ್ತು ಪ್ರಕರಣದ ಇತರ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ನಿನ್ನೆ ವಜಾಗೊಳಿಸಿತ್ತು.
Ashish Mishra, Lakhimpur Kheri Violence
Ashish Mishra, Lakhimpur Kheri Violence
Published on

ಕೃಷಿ ಕಾಯಿದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಸೇರಿದಂತೆ ಎಂಟು ಜನರ ಮೇಲೆ ವಾಹನ ಹರಿಸಿ ಅವರ ಸಾವಿಗೆ ಕಾರಣವಾಗಿದ್ದ ಲಖಿಂಪುರ್‌ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ  ಕೇಂದ್ರ ಸಚಿವ ಅಜಯ್ ಮಿಶ್ರಾ ಟೇನಿ ಅವರ ಪುತ್ರ ಆಶಿಶ್ ಮಿಶ್ರಾ  ವಿರುದ್ಧ ಉತ್ತರ ಪ್ರದೇಶದ ವಿಚಾರಣಾ ನ್ಯಾಯಾಲಯವೊಂದು ಮಂಗಳವಾರ ಕೊಲೆ ಆರೋಪ ನಿಗದಿಪಡಿಸಿದೆ.

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸುನೀಲ್ ಕುಮಾರ್ ವರ್ಮಾ ಅವರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಅಡಿಯಲ್ಲಿ ಮಿಶ್ರಾ ಮತ್ತು ಇತರ 13 ಆರೋಪಿಗಳ ವಿರುದ್ಧ ಕೊಲೆ ಮತ್ತು ವಿವಿಧ ಆರೋಪಗಳನ್ನು ನಿಗದಿಪಡಿಸಿದರು. ಡಿಸೆಂಬರ್ 16 ರಿಂದ ಪ್ರಕರಣದ ವಿಚಾರಣೆ ಆರಂಭವಾಗಲಿದೆ.

ಸೋಮವಾರ, ಇದೇ ನ್ಯಾಯಾಧೀಶರು ಮಿಶ್ರಾ ಮತ್ತು ಪ್ರಕರಣದ ಇತರ ಆರೋಪಿಗಳು ಸಲ್ಲಿಸಿದ್ದ ಬಿಡುಗಡೆ ಅರ್ಜಿಗಳನ್ನು ವಜಾಗೊಳಿಸಿದ್ದರು.

Also Read
ಲಖಿಂಪುರ್ ಖೇರಿ ಪ್ರಕರಣ: ಆಶಿಶ್ ಮಿಶ್ರಾಗೆ ಜಾಮೀನು ನಿರಾಕರಿಸಿದ ಅಲಾಹಾಬಾದ್ ಹೈಕೋರ್ಟ್

ಐಪಿಸಿ ಸೆಕ್ಷನ್ 147 (ಗಲಭೆ), 148 (ಮಾರಕ ಆಯುಧಗಳಿಂದ ಶಸ್ತ್ರಸಜ್ಜಿತವಾದ ಗಲಭೆ), 149 (ಸಾಮಾನ್ಯ ಉದ್ದೇಶದಿಂದ ಎಸಗಿದ ಅಪರಾಧ), 302 (ಕೊಲೆ), 307 (ಕೊಲೆ ಯತ್ನ), 326 (ಸ್ವಯಂಪ್ರೇರಿತವಾಗಿ ಮಾರಕಾಸ್ತ್ರಗಳಿಂದ ತೀವ್ರವಾಗಿ ಗಾಯಗೊಳಿಸುವುದು) 427 (ಹಾನಿ ಉಂಟುಮಾಡುವ ಕಿಡಿಗೇಡಿತನ), 120B (ಅಪರಾಧದ ಪಿತೂರಿ) ಹಾಗೂ ಮೋಟಾರು ವಾಹನಗಳ ಕಾಯಿದೆಯ ಸೆಕ್ಷನ್ 177ರ ಅಡಿಯಲ್ಲಿ ಆರೋಪಗಳನ್ನು ಮಿಶ್ರಾ ವಿರುದ್ಧ ಹೊರಿಸಲಾಗಿದೆ. ಮತ್ತೊಬ್ಬ ಆರೋಪಿ ವೀರೇಂದ್ರ ಶುಕ್ಲಾ ವಿರುದ್ಧ ಸಾಕ್ಷ್ಯಾಧಾರಗಳ ನಾಶಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಯಲಿದೆ.

ಚಾಲಕ ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ವಾಹನದ ವೇಗ ಹೆಚ್ಚಿಸಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ರಾಜೀವ್ ಸಿಂಗ್ ಫೆಬ್ರವರಿ 10ರಂದು ಮಿಶ್ರಾಗೆ ಜಾಮೀನು ನೀಡಿದ್ದರು. ಆದರೆ ಈ ತೀರ್ಪನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್‌ ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ಸೂಚಿಸಿ ಹೈಕೋರ್ಟ್‌ಗೆ ಮರಳಿಸಿತ್ತು. ಜುಲೈ 26ರಂದು ಹೈಕೋರ್ಟ್ ಮಿಶ್ರಾಗೆ ಜಾಮೀನು ನಿರಾಕರಿಸಿತ್ತು.

Kannada Bar & Bench
kannada.barandbench.com