[ಲಖೀಂಪುರ್‌ ಖೇರಿ] ಸಾಕ್ಷಿ ಮೇಲೆ ಹಲ್ಲೆಯಾಗಿದೆ ಎಂದ ಭೂಷಣ್‌; ಮಿಶ್ರಾ ಜಾಮೀನು ವಿರೋಧಿಸಿದ ಅರ್ಜಿ ವಿಚಾರಣೆ ಮಾ.15ಕ್ಕೆ

ನ್ಯಾಯಾಲಯವು ಈ ಮುಂಚೆ ಪ್ರಕರಣವನ್ನು ಇಂದು ಪಟ್ಟಿ ಮಾಡಲು ಸೂಚಿಸಿತ್ತು. ಅದರೆ ಅದು ವಿಚಾರಣಾ ಪಟ್ಟಿಯಲ್ಲಿ ಇಂದು ಕಂಡು ಬರಲಿಲ್ಲ.
Lakhimpur Kheri and Supreme Court
Lakhimpur Kheri and Supreme Court

ಪ್ರತಿಭಟನಾನಿರತ ರೈತರ ಸಾವಿಗೆ ಕಾರಣವಾದ ಲಖೀಂಪುರ್‌ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯ ಪ್ರಮುಖ ಸಾಕ್ಷಿಯೊಬ್ಬರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಶುಕ್ರವಾರ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಪ್ರಮುಖ ಆರೋಪಿಯಾದ ಆಶಿಶ್‌ ಮಿಶ್ರಾ ಅವರಿಗೆ ನೀಡಿರುವ ಜಾಮೀನು ವಿರೋಧಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ತುರ್ತು ಪಟ್ಟಿ ಮಾಡಲು ನ್ಯಾಯಾಲಯವು ಸಮ್ಮತಿಸಿದ್ದು ಪ್ರಕರಣವನ್ನು ಮಾ.15ರಂದು ಆಲಿಸಲಿದೆ.

ಘಟನೆಯನ್ನು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರು ಇಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಅವರ ಮುಂದೆ ಉಲ್ಲೇಖಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಅವರು, ಅರ್ಜಿ ವಿಚಾರಣೆಯನ್ನು ಮಂಗಳವಾರ, ಮಾರ್ಚ್‌ 15ಕ್ಕೆ ಪಟ್ಟಿ ಮಾಡಲಾಗುವುದು ಎಂದು ತಿಳಿಸಿದರು. ನ್ಯಾಯಾಲಯವು ಈ ಮುಂಚೆ ಪ್ರಕರಣವನ್ನು ಇಂದು ಪಟ್ಟಿ ಮಾಡಲು ಸೂಚಿಸಿತ್ತು. ಅದರೆ ಅದು ವಿಚಾರಣಾ ಪಟ್ಟಿಯಲ್ಲಿ ಇಂದು ಕಂಡು ಬರಲಿಲ್ಲ.

ಈ ಬಗ್ಗೆ ನ್ಯಾಯಾಲಯದ ಗಮನಸೆಳೆದ ಭೂಷಣ್‌ ಅವರು, "ಮನವಿಯನ್ನು ನ್ಯಾಯಾಲಯ ಇಂದು ಆಲಿಸಬೇಕಿತ್ತು. ಕಳೆದ ರಾತ್ರಿ ಘಟನೆಯ ಪ್ರಮುಖ ಸಾಕ್ಷಿಯೊಬ್ಬರ ಮೇಲೆ ಹಲ್ಲೆಯಾಗಿದೆ," ಎಂದು ತಿಳಿಸಿದರು. ಆಗ ಸಿಜೆಐ ಅವರು, "ಕಚೇರಿಯಿಂದ ತಪ್ಪಾಗಿದೆ. ಮಂಗಳವಾರ ಪ್ರಕರಣವನ್ನು ಪಟ್ಟಿ ಮಾಡಲಾಗುವುದು," ಎಂದರು.

ಉತ್ತರ ಪ್ರದೇಶದ ಲಖೀಂಫುರ್‌ ಖೇರಿ ಬಳಿ ಪ್ರತಿಭಟನಾನಿರತ ರೈತರ ಮೇಲೆ ವಾಹನವನ್ನು ಹರಿಸಿ ಕೊಂದ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್‌ ಮಿಶ್ರಾ ಟೇನಿ ಅವರ ಪುತ್ರ ಆಶೀಶ್‌ ಮಿಶ್ರಾ ಪ್ರಮುಖ ಅರೋಪಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವು ಐದು ಸಾವಿರ ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದು ಮಿಶ್ರಾ ಅವರನ್ನು ಮುಖ್ಯ ಆರೋಪಿಯನ್ನಾಗಿಸಿದೆ. ಇದೇ ಪ್ರಕರಣದಲ್ಲಿ ಅಲಾಹಾಬಾದ್‌ ಹೈಕೋರ್ಟ್‌ ಮಿಶ್ರಾಗೆ ಫೆ.10ರಂದು ಜಾಮೀನು ಮಂಜೂರು ಮಾಡಿತ್ತು.

Kannada Bar & Bench
kannada.barandbench.com