ಸಂಸದ ಮೊಹಮ್ಮದ್ ಫೈಜಲ್ ಶಿಕ್ಷೆ ಅಮಾನತು: ಸುಪ್ರೀಂ ಕೋರ್ಟ್ ಮೊರೆ ಹೋದ ಲಕ್ಷದ್ವೀಪ ಆಡಳಿತ

ಉಪ ಚುನಾವಣೆ ತಪ್ಪಿಸುವುದಕ್ಕೋಸ್ಕರ ಚುನಾಯಿತ ರಾಜಕಾರಣಿಗಳ ಪ್ರತಿಯೊಂದು ಅಪರಾಧ ಮತ್ತು ಶಿಕ್ಷೆಯನ್ನು ಅಮಾನತುಗೊಳಿಸಬೇಕು ಎನ್ನುವಂತಿದೆ ಕೇರಳ ಹೈಕೋರ್ಟ್ ಆದೇಶ ಎಂಬುದಾಗಿ ಅರ್ಜಿದಾರರು ಕಳವಳ ವ್ಯಕ್ತಪಡಿಸಿದ್ದಾರೆ.
Mohammed Faizal and Supreme Court
Mohammed Faizal and Supreme Court Facebook

ಕೊಲೆಯತ್ನ ಪ್ರಕರಣವೊಂದರಲ್ಲಿ ಎನ್‌ಸಿಪಿ ನಾಯಕ, ಲಕ್ಷದ್ವೀಪ ಸಂಸದ ಪಿ ಪಿ ಮೊಹಮ್ಮದ್‌ ಫೈಜಲ್‌ ಅವರಿಗೆ  ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಅಮಾನತುಗೊಳಿಸಿದ ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಲಕ್ಷದ್ವೀಪ ಕೇಂದ್ರಾಡಳಿತ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. [ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶ ಸರ್ಕಾರ ಮತ್ತು ಮೊಹಮ್ಮದ್‌ ಫೈಜಲ್‌ ಇನ್ನಿತರರ ನಡುವಣ ಪ್ರಕರಣ]

ಉಪ ಚುನಾವಣೆಯ ಆರ್ಥಿಕ ಹೊರೆ ತಪ್ಪಿಸುವುದಕ್ಕಾಗಿ ಚುನಾಯಿತ ರಾಜಕಾರಣಿಗಳ ಪ್ರತಿಯೊಂದು ಅಪರಾಧ ಮತ್ತು ಶಿಕ್ಷೆಯನ್ನು ಅಮಾನತುಗೊಳಿಸಬೇಕು ಎಂಬುದಾಗಿ ಕೇರಳ ಹೈಕೋರ್ಟ್‌ ಆದೇಶ ಹೇಳುತ್ತಿದೆ ಎಂದು ವಕೀಲ ಅಕ್ಷಯ್ ಅಮೃತಾಂಶು ಅವರ ಮೂಲಕ ಸಲ್ಲಿಸಿದ ಮನವಿ ಕಳವಳ ವ್ಯಕ್ತಪಡಿಸಿದೆ.

Also Read
ಕೊಲೆ ಯತ್ನ ಪ್ರಕರಣ: ಜೈಲು ಶಿಕ್ಷೆ ಪ್ರಶ್ನಿಸಿ ಕೇರಳ ಹೈಕೋರ್ಟ್ ಮೊರೆ ಹೋದ ಲಕ್ಷದ್ವೀಪ ಸಂಸದ

ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಇಂದು ಪ್ರಕರಣವನ್ನು ಪ್ರಸ್ತಾಪಿಸಿದರು. ಫೆಬ್ರವರಿ 6 ರಂದು ಪ್ರಕರಣದ ವಿಚಾರಣೆ ಆರಂಭಿಸುವುದಾಗಿ ನ್ಯಾಯಾಲಯ ಸಮ್ಮತಿ ಸೂಚಿಸಿದೆ.

ಲಕ್ಷದ್ವೀಪ ಮನವಿಯ ಪ್ರಮುಖಾಂಶಗಳು

  • ಪ್ರಜಾಪ್ರಭುತ್ವ ಸಿದ್ಧಾಂತ, ಚುನಾವಣೆಗಳ ಪಾರದರ್ಶಕತೆ, ರಾಜಕೀಯ ಅಪರಾಧೀಕರಣದ ಅಗತ್ಯತೆ ಮತ್ತು ಪ್ರಜಾಪ್ರತಿನಿಧಿ ಕಾಯಿದೆಯ ಧ್ಯೇಯವನ್ನು ಹೈಕೋರ್ಟ್‌ ಆದೇಶ ನಿರ್ಲಕ್ಷಿಸಿದೆ.

  • ಈ ಪ್ರಕರಣದಲ್ಲಿ ಶಿಕ್ಷೆಯನ್ನು ಅಮಾನತುಗೊಳಿಸಲು ಯಾವುದೇ ಅಸಾಧಾರಣ ಸಂದರ್ಭಗಳಿಲ್ಲ ಎಂದು ಸರ್ಕಾರ ತನ್ನ ಮೇಲ್ಮನವಿಯಲ್ಲಿ ಸಲ್ಲಿಸಿದೆ.

  • ಶಿಕ್ಷೆಯ ಆದೇಶ ಅಮಾನತುಗೊಳಿಸಲು ಚುನಾವಣಾ ವೆಚ್ಚ ಮತ್ತು ಉಳಿದ ಅಧಿಕಾರಾವಧಿ ಮಾನದಂಡವಾಗುವುದಿಲ್ಲ.

  • ಶಿಕ್ಷೆಗೊಳಗಾದ ಚುನಾಯಿತ ಪ್ರತಿನಿಧಿಗಳನ್ನು ಅನರ್ಹಗೊಳಿಸುವ ಮತ್ತು ಅದನ್ನು ಖಾತ್ರಿಪಡಿಸಿಕೊಳ್ಳುವ ಪ್ರಜಾಪ್ರತಿನಿಧಿ ಕಾಯಿದೆ-1951ರ ಉದ್ದೇಶವನ್ನು ಆಕ್ಷೇಪಾರ್ಹ ತೀರ್ಪು ಸಂಪೂರ್ಣ ನಿರ್ಲಕ್ಷಿಸಿದೆ.

  • 2024ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂಬುದಕ್ಕೆ ಹೈಕೋರ್ಟ್‌ ಅನಗತ್ಯ ಒತ್ತು ನೀಡಿದೆ.

  • ಕೊಲೆ ಯತ್ನದಲ್ಲಿ ಶಿಕ್ಷೆ ವಿಧಿಸಿರುವುದು ಸಂಸದರ ನಡೆ ಮೇಲಿನ ಗಂಭೀರ ಪ್ರತಿಫಲನವಾಗಿದೆ. ಹಾಗಾಗಿ ಶಿಕ್ಷೆ ವಿಧಿಸಿದ ನಂತರ ಅವರಿಗೆ ಮುಗ್ಧತೆಯ ಊಹೆಯ ಲಾಭ ದೊರೆಯಬಾರದು.

  • ಹೀಗಾಗಿ ಕೇರಳ ಹೈಕೋರ್ಟ್‌ ತೀರ್ಪಿಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಬೇಕು.

Related Stories

No stories found.
Kannada Bar & Bench
kannada.barandbench.com