ಲಕ್ಷದ್ವೀಪ ನೂತನ ಕರಡು ಪ್ರಶ್ನಿಸಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ: ಪ್ರತಿವಾದಿಗಳ ಪ್ರತಿಕ್ರಿಯೆ ಕೇಳಿದ ನ್ಯಾಯಾಲಯ

ಕರಡು ಮತ್ತು ಪ್ರಾಣಿ ಸಂರಕ್ಷಣಾ ನಿಯಮಾವಳಿ ಕುರಿತು ದ್ವೀಪದ ನಾಗರಿಕರಿಗೆ ತಮ್ಮ ಅಭಿಪ್ರಾಯ ಮತ್ತು ಆಕ್ಷೇಪಣೆ ವ್ಯಕ್ತಪಡಿಸಲು ಸಾಕಷ್ಟು ಅವಕಾಶ ನೀಡಿಲ್ಲ ಎಂದು ಆತಂಕ ವ್ಯಕ್ತಪಡಿಸಿ ಶುಕ್ರವಾರ ಹೈಕೋರ್ಟ್‌ನಲ್ಲಿ ಮತ್ತೊಂದು ಅರ್ಜಿ ಸಲ್ಲಿಸಲಾಗಿದೆ.
ಲಕ್ಷದ್ವೀಪ ನೂತನ ಕರಡು ಪ್ರಶ್ನಿಸಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ: ಪ್ರತಿವಾದಿಗಳ ಪ್ರತಿಕ್ರಿಯೆ ಕೇಳಿದ ನ್ಯಾಯಾಲಯ

ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ನಿಯಂತ್ರಣ ಕರಡು - 2021 (ಎಲ್‌ಡಿಎಆರ್‌) ಮತ್ತು ಇತರ ಆಡಳಿತಾತ್ಮಕ ಕ್ರಮಗಳಿಗೆ ತಡೆ ನೀಡಬೇಕೆಂದು ಕೋರಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಪ್ರತಿವಾದಿಗಳನ್ನು ನ್ಯಾಯಾಲಯ ಕೇಳಿದೆ.

ಗೋಮಾಂಸ ನಿಷೇಧ, ಗೂಂಡಾ ಕಾಯಿದೆ ಜಾರಿ, ಪಂಚಾಯ್ತಿ ಸದಸ್ಯರು ಎರಡಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡುವಂತಿಲ್ಲ ಇತ್ಯಾದಿ ನಿಯಮಾವಳಿಗಳನ್ನು ಇತ್ತೀಚೆಗೆ ಲಕ್ಷದ್ವೀಪದಲ್ಲಿ ಜಾರಿಗೊಳಿಸಲಾಗಿತ್ತು. ಕರಡು ಹಾಗೂ ಆಡಳಿತಾತ್ಮಕ ಕ್ರಮಗಳಿಗೆ ತಡೆ ನೀಡಲು ನ್ಯಾಯಮೂರ್ತಿಗಳಾದ ವಿನೋದ್ ಚಂದ್ರನ್ ಮತ್ತು ಎಂ ಆರ್ ಅನಿತಾ ಅವರಿದ್ದ ಪೀಠ ನಿರಾಕರಿಸಿತು. ಬದಲಿಗೆ ಪ್ರತಿವಾದಿಗಳ ಪ್ರತಿಕ್ರಿಯೆಗೆ ಸೂಚಿಸಿ ಪ್ರಕರಣವನ್ನು ಎರಡು ವಾರಗಳ ನಂತರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.

ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಅನೂಪ್ ವಿ ನಾಯರ್ ಅವರು ತಡೆಯಾಜ್ಞೆ ನೀಡುವಂತೆ ವಿನಂತಿಸಿದರು. ಆದರೆ ಅರ್ಜಿಯಲ್ಲಿ ನೀತಿ ನಿರೂಪಣೆಯ ಪ್ರಶ್ನೆಗಳಿವೆ. ಅಧಿಕಾರಿಗಳು ಮೊದಲು ತಮ್ಮ ಉತ್ತರ ನೀಡಬೇಕಿದೆ ಎಂದು ನ್ಯಾಯಮೂರ್ತಿ ವಿನೋದ್‌ ಅಭಿಪ್ರಾಯಪಟ್ಟರು.

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಕೆ ಪಿ ನೌಶಾದ್ ಅಲಿ ಅವರು ಅರ್ಜಿ ಸಲ್ಲಿಸಿದ್ದು ದ್ವೀಪದ ಪಾರಂಪರಿಕ ಬದುಕು ಮತ್ತು ಸಂಸ್ಕೃತಿಯನ್ನು ನಾಶ ಮಾಡುವ ಉದ್ದೇಶದಿಂದ ಆಡಳಿತಾಂಗ ವಿವಿಧ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ವಾದಿಸಿದ್ದಾರೆ.

ಅರ್ಜಿಯ ಪ್ರಮುಖ ಅಂಶಗಳು ಹೀಗಿವೆ:

1. ಅಭಿವೃದ್ಧಿ ಯೋಜನೆಗಳಿಗಾಗಿ ಖಾಸಗಿಯವರಿಂದ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ನಿಯಮ ಜಾರಿಗೆ ತರಲಾಗಿದ್ದು ಇದು ಸಂವಿಧಾನದ 21ನೇ ವಿಧಿಗೆ ವಿರುದ್ಧವಾಗಿದೆ. ಕರಡಿನ 92 ಮತ್ತು 93 ಸೆಕ್ಷನ್‌ಗಳ ಅಡಿಯಲ್ಲಿ ವಲಯಗಳ ಬದಲಾವಣೆಗೆ ಎಲ್‌ಎಡಿಆರ್ ಅಡಿಯಲ್ಲಿ ದ್ವೀಪವಾಸಿಗಳಿಗೆ ಭಾರಿ ಅಭಿವೃದ್ಧಿ ಶುಲ್ಕಗಳು ಮತ್ತು ಲೆವಿ ಶುಲ್ಕ ವಿಧಿಸಲಾಗುತ್ತದೆ. ಇದು ದ್ವೀಪವಾಸಿಗಳು ತಲೆಮಾರುಗಳಿಂದ ಅಭ್ಯಾಸ ಮಾಡಿಕೊಂಡು ಬಂದಿರುವ ಜೀವನ ವಿಧಾನಕ್ಕೆ ಧಕ್ಕೆ ತರುತ್ತದೆ.

2. ಜಾರಿಗೆ ತರಲು ಮುಂದಾಗಿರುವ 2021ರ ಲಕ್ಷದ್ವೀಪ ಜಾನುವಾರು ಸಂರಕ್ಷಣಾ ನಿಯಮಾವಳಿ ದ್ವೀಪದ ಜನರ ಆಹಾರ, ಸಂಸ್ಕೃತಿ ಮತ್ತು ವನೋಪಾಯ ಸೇರಿದಂತೆ ಅವರ ಆಯ್ಕೆ ಪರಿಗಣಿಸಲು ವಿಫಲವಾಗಿದೆ. ಇದು ಹಿಂಬಾಗಿಲಿನಿಂದ ಗೋಮಾಂಸ ನಿಷೇಧಿಸುವ ಯತ್ನ ಎಂಬ ಆತಂಕವಿದೆ. ಈ ವರ್ಷದ ಆರಂಭದಲ್ಲಿ ದ್ವೀಪದ ಶಾಲಾ ಊಟದಲ್ಲಿ ಮಾಂಸಾಹಾರ ತೆಗೆದುಹಾಕಲಾಗಿದೆ.

3. ಇಬ್ಬರಿಗಿಂತ ಹೆಚ್ಚು ಮಕ್ಕಳಿರುವ ವ್ಯಕ್ತಿಗಳು ಪಂಚಾಯತ್‌ ಸದಸ್ಯರಾಗುವಂತಿಲ್ಲ ಎಂದು 2021ರ ಲಕ್ಷದ್ವೀಪ ಪಂಚಾಯ್ತಿ ನಿಯಂತ್ರಣ ಕರಡು ಸೂಚಿಸಿದ್ದು ಇದರ ಹಿಂದೆ ದ್ವೀಪದ ಪ್ರಮುಖ ನಾಯಕರು ಚುನಾವಣೆಯಲ್ಲಿ ಪಾಲ್ಗೊಳ್ಳುವುದನ್ನು ತಡೆಯುವುದಾಗಿದೆ. ದ್ವೀಪದ ಸ್ಥಳೀಯ ಸಂಸ್ಥೆಗಳು ಇಂತಹ ಬೇಡಿಕೆ ಇಟ್ಟಿಲ್ಲ.

4. ಗೂಂಡಾ ಕಾಯಿದೆ ಎಂದು ಕರೆಯಲಾಗುವ 2021ರ ಸಮಾಜ ವಿರೋಧಿ ಚಟುವಟಿಕೆಗಳ ತಡೆ ಕಾಯಿದೆಯಡಿ (ಪಾಸಾ) ದ್ವೀಪದ ವ್ಯಕ್ತಿಯನ್ನು ಸಾರ್ವಜನಿಕವಾಗಿ ಪ್ರಕಟಗೊಳಿಸದೆ ವಿಚಾರಣೆ ನಡೆಸದೆ ಬಂಧಿಸಬಹುದಾಗಿದ್ದು ಇದು ದ್ವೀಪವಾಸಿಗಳ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದ್ದು ಸಿಎಎ ಮತ್ತು ಎನ್‌ಆರ್‌ಸಿ ಸಮಯದಲ್ಲಿ ಪ್ರತಿಭಟಿಸಿದ ವ್ಯಕ್ತಿಗಳ ವಿರುದ್ಧ ಇದನ್ನು ಬಳಸುವ ಆತಂಕವಿದೆ.

5. ಕೋವಿಡ್‌ ಪತ್ತೆ ಹಚ್ಚಲು ಕೈಗೊಳ್ಳುವ ಆರ್‌ಟಿ ಪಿಸಿಆರ್‌ ಪರೀಕ್ಷೆಯಲ್ಲಿ ಋಣಾತ್ಮಕ ಫಲಿತಾಂಶ ದೊರೆತ ಯಾರು ಬೇಕಾದರೂ ದ್ವೀಪ ಪ್ರವೇಶಿಸಬಹುದು ಎಂದು ಆಡಳಿತ ವ್ಯವಸ್ಥೆ ಏಕಪಕ್ಷೀಯವಾಗಿ ಸಾರಿದ್ದರಿಂದ ದ್ವೀಪದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಿದೆ.

6. ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ನೂರಾರು ಅರೆಕಾಲಿಕ ಮತ್ತು ಗುತ್ತಿಗೆ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಬಿಸಿಯೂಟ ನೌಕರರ ಉದ್ಯೋಗವನ್ನು ರದ್ದುಗೊಳಿಸಲಾಗಿದೆ. ಪಶುಸಂಗೋಪನೆ ಮತ್ತು ಕೃಷಿ ಇಲಾಖೆಯಿಂದ ಹಲವು ಕೆಲಸಗಾರರನ್ನು ಹೊರಹಾಕಲಾಗಿದೆ.

7. ಆಡಳಿತ ವ್ಯವಸ್ಥೆಯಿಂದ ದ್ವೀಪವಾಸಿಗಳನ್ನು ಹೊರಹಾಕಲಾಗಿದ್ದು ಪಶುಸಂಗೋಪನಾ ಇಲಾಖೆಯಿಂದ ನಿರ್ವಹಿಸಲಾಗುವ ಡೈರಿ ಫಾರಂಗಳನ್ನು ಸರ್ಕಾರ ಮುಚ್ಚಿದೆ.

8. ಹೆಚ್ಚಿನ ಸಂಖ್ಯೆಯ ದ್ವೀಪವಾಸಿಗಳು ಆದಾಯಕ್ಕಾಗಿ ಮೀನುಗಾರಿಕೆ ಅವಲಂಬಿಸಿದ್ದಾರೆ. ಆದರೆ ಆಡಳಿತ ವ್ಯವಸ್ಥೆ ಮೀನುಗಾರರ ಶೆಡ್‌ಗಳನ್ನು ನೆಲಸಮ ಮಾಡಿದೆ.

9. ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರಣಗಳಿಂದಾಗಿ, ಲಕ್ಷದ್ವೀಪದಲ್ಲಿ ಮದ್ಯ ಸೇವನೆಗೆ ನಿರ್ಬಂಧವಿತ್ತು. ಆದರೆ ಹಲವು ಮನವಿಗಳ ಹೊರತಾಗಿಯೂ, ಮದ್ಯದ ಮೇಲಿನ ನಿರ್ಬಂಧವನ್ನು ಆಡಳಿತ ವ್ಯವಸ್ಥೆ ಏಕಪಕ್ಷೀಯವಾಗಿ ತೆಗೆದುಹಾಕಿದೆ.

10. ಸರಕು ಸಾಗಣೆಗೆ ದ್ವೀಪವಾಸಿಗಳು ಇನ್ನು ಮುಂದೆ ಕೇರಳದ ಬೇಪೋರ್‌ ನಗರವನ್ನು ಅವಲಂಬಿಸದೆ ಮಂಗಳೂರು ಬಂದರನ್ನು ಅವಲಂಬಿಸಬೇಕು ಎಂದು ಹೇರಲಾಗಿರುವ ನಿಯಮ ದಶಕಗಳಿಂದ ದ್ವೀಪ ಬೇಪೋರ್‌ನೊಂದಿಗೆ ಇರಿಸಿಕೊಂಡಿರುವ ಒಡನಾಟದ ಮೇಲೆ ಪರಿಣಾಮ ಬೀರುತ್ತದೆ.

ಕರಡು ಮತ್ತು ಪ್ರಾಣಿ ಸಂರಕ್ಷಣಾ ನಿಯಮಾವಳಿಗಳ ಕುರಿತು ದ್ವೀಪದ ನಾಗರಿಕರಿಗೆ ತಮ್ಮ ಅಭಿಪ್ರಾಯ ಮತ್ತು ಆಕ್ಷೇಪಣೆ ವ್ಯಕ್ತಪಡಿಸಲು ಸಾಕಷ್ಟು ಅವಕಾಶ ನೀಡಿಲ್ಲ ಎಂದು ಆತಂಕ ವ್ಯಕ್ತಪಡಿಸಿ ಶುಕ್ರವಾರ ಹೈಕೋರ್ಟ್‌ನಲ್ಲಿ ಮತ್ತೊಂದು ಅರ್ಜಿ ಸಲ್ಲಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com