ಹೆದ್ದಾರಿ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಹೆಚ್ಚಿನ ಪರಿಹಾರ ಮೊತ್ತ ನೀಡಿದ್ದ ಮಧ್ಯಸ್ಥಿಕೆದಾರರಾದ ಜಿಲ್ಲಾಧಿಕಾರಿ ಕ್ರಮ ಪ್ರಶ್ನಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸಲ್ಲಿಸಿದ್ದ ಅರ್ಜಿಯನ್ನು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇತ್ತೀಚೆಗೆ ವಜಾಗೊಳಿಸಿದೆ. ಇದೇ ವೇಳೆ ಅದು ಮಧ್ಯಸ್ಥಿಕೆದಾರರು ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ [ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವರ್ಸಸ್ ಸಾವಿತ್ರಿ ಪಿ ಭಟ್ ಹಾಗೂ ಮಧ್ಯಸ್ಥಿಕೆದಾರರಾದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನಡುವಣ ಪ್ರಕರಣ].
ಪರಿಹಾರದ ಮೊತ್ತ ನಿರ್ಧರಿಸುವಾಗ ಮಧ್ಯಸ್ಥಿಕೆದಾರರಾದ ಜಿಲ್ಲಾಧಿಕಾರಿ ರಾಷ್ಟ್ರೀಯ ಹೆದ್ದಾರಿ ಕಾಯಿದೆಯ ಸೆಕ್ಷನ್ .3G(7)ಗೆ ಅನುಗುಣವಾಗಿ ಮಾನದಂಡಗಳನ್ನು ಅನ್ವಯಿಸಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದಾಗ ತನ್ನ ತಕರಾರು ಸಲ್ಲಿಸಲು ಮಧ್ಯಸ್ಥಿಕೆದಾರ ಅವಕಾಶ ನೀಡಿಲ್ಲ ಎಂಬ ಎನ್‌ಎಚ್‌ಎಐ ವಾದದಲ್ಲಿ ಹುರುಳಿಲ್ಲ. ಆದೇಶವನ್ನು ಪ್ರಶ್ನಿಸಲು ಸೂಕ್ತವಾದ ಯಾವುದೇ ಸ್ಥಾಪಿತ ಸಾಕ್ಷ್ಯಾಧಾರಗಳನ್ನು ಎನ್ಎಚ್ಎಐ ಒದಗಿಸಿಲ್ಲ ಎಂದು ನ್ಯಾಯಾಧೀಶರಾದ ಎಚ್ ಎಸ್ ಮಲ್ಲಿಕಾರ್ಜುನ ಸ್ವಾಮಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ತಮಿಳುನಾಡು, ಆಂಧ್ರಪ್ರದೇಶದೊಂದಿಗೆ ಬಂದರು ನಗರಿ ಮಂಗಳೂರನ್ನು ಬೆಸೆಯುವ, ಅದರಲ್ಲಿಯೂ ಮುಖ್ಯವಾಗಿ ಬೆಂಗಳೂರು- ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರ ರಸ್ತೆ ವಿಸ್ತರಣೆ ಕಾರ್ಯಕ್ಕಾಗಿ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ 65 ವರ್ಷ ವಯಸ್ಸಿನ ಸಾವಿತ್ರಿ ಪಿ ಭಟ್ ಅವರ 3.48 ಸೆಂಟ್ಸ್ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ವಿಶೇಷ ಭೂಸ್ವಾಧೀನಾಧಿಕಾರಿ ನೀಡಿದ್ದ ಪರಿಹಾರ ಮೊತ್ತಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮತ್ತು ಹೆಚ್ಚಿನ ಪರಿಹಾರ ಕೋರಿ ಸಾವಿತ್ರಿ ಅವರು ಮಧ್ಯಸ್ಥಿಕೆದಾರರಾದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರ ಮೊರೆ ಹೋಗಿದ್ದರು.
ಈ ಸಂಬಂಧ 3.4.2023ರಂದು ಆದೇಶ ಹೊರಡಿಸಿದ ಜಿಲ್ಲಾಧಿಕಾರಿಗಳು ಪರಿಹಾರ ಮೊತ್ತವನ್ನು ಪ್ರತಿ ಸೆಂಟ್ಸ್‌ಗೆ ರೂ.1,82,096/-ರಷ್ಟು ಹೆಚ್ಚಿಗೆ ಪರಿಹಾರ ನೀಡಬೇಕು ಎಂದು ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಎನ್‌ಎಚ್‌ಎಐ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿತ್ತು.
ಜಿಲ್ಲಾಧಿಕಾರಿಗಳು ನೀಡಿರುವ ಪರಿಹಾರ ಆದೇಶ ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆಯ ನಿಯಮಾವಳಿಗಳನುಸಾರ ಬದಿಗೆ ಸರಿಸಲು ಅರ್ಹವಾಗಿದೆ. ತನ್ನ ಆಕ್ಷೇಪಗಳಿಗೆ ಮಧ್ಯಸ್ಥಿಕೆದಾರರು ಕಿವಿಗೊಟ್ಟಿಲ್ಲ. ಆದೇಶ ಸಂಪೂರ್ಣವಾಗಿ ಊಹೆಗಳನ್ನು ಆಧರಿಸಿದೆ. ಅವರು ಭೂಮಿಯ ಸ್ವರೂಪವನ್ನು ಪರಿಗಣಿಸಿಲ್ಲ ಎಂಬುದು ಎನ್‌ಎಚ್‌ಎಐ ವಾದವಾಗಿತ್ತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರತಿವಾದಿ ಅರ್ಜಿದಾರರು ಬೊಟ್ಟು ಮಾಡಿರುವಯಾವುದೇ ದೋಷಗಳು ಸ್ಪಷ್ಟವಾಗಿಲ್ಲ ಹೀಗಾಗಿ ಅರ್ಜಿ ನಿರ್ವಹಣಾಯೋಗ್ಯವಲ್ಲ. ಎನ್‌ಎಚ್‌ಎಐ ನೀಡಿದ ಮೊತ್ತ ತುಂಬಾ ಕಡಿಮೆಯಾಗಿದ್ದು ಮತ್ತೆ ಅದು ತೀರ್ಪನ್ನು ಪ್ರಶ್ನಿಸಿರುವುದು ಅನ್ಯಾಯ ಮತ್ತು ನೈಸರ್ಗಿಕ ನ್ಯಾಯಕ್ಕೆ ವಿರುದ್ಧ ಎಂದಿದ್ದರು.