ಜಾಧವ್‌ ಭೂಕಬಳಿಕೆ ಪ್ರಕರಣ: ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಪಡೆಯಲು ವಿಳಂಬ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ದಂಡ

ನಿವೃತ್ತ ಮುಖ್ಯ ಕಾರ್ಯದರ್ಶಿ ಸರ್ಕಾರದ 66 ಎಕರೆ ಭೂಮಿ ಕಬಳಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ 2019ರಲ್ಲಿ ದೂರು ದಾಖಲಾಗಿದ್ದರೂ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಆಸಕ್ತಿ ತೋರುತ್ತಿಲ್ಲ ಎಂದು ಬೇಸರಿಸಿದ ಪೀಠ .
Justice H P Sandesh and Karnataka HC
Justice H P Sandesh and Karnataka HC
Published on

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರ ತಾಯಿ ಹೆಸರಿನಲ್ಲಿ ಸರ್ಕಾರಿ ಜಮೀನು ಕಬಳಿಸಲು ನಕಲಿ ದಾಖಲೆ ಸೃಷ್ಟಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರ ವಿರುದ್ಧ ಪ್ರಾಸಿಕ್ಯೂಷನ್‌ಗಾಗಿ ಪೂರ್ವಾನುಮತಿ ಪಡೆಯಲು ವಿಳಂಬ ಮಾಡಿದ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.

ಭ್ರಷ್ಟಾಚಾರ ತನಿಖಾ ದಳ (ಎಸಿಬಿ) ದಾಖಲಿಸಿರುವ ಎಫ್‌ಐಆರ್ ರದ್ದಪಡಿಸುವಂತೆ ಕೋರಿ ಆರೋಪಿ ಬೆಂಗಳೂರಿನ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಸರ್ವೇಯರ್ ಆಗಿರುವ ಡಿ ಬಿ ಗಂಗಯ್ಯ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

“ಸಾಕಷ್ಟು ಕಾಲಾವಕಾಶ ನೀಡಿದ್ದರೂ ಪ್ರಕರಣದ ಎಂಟನೇ ಆರೋಪಿಯಾದ ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.

ರಾಜ್ಯ ಸರ್ಕಾರವು ಒಂದು ವಾರದಲ್ಲಿ ದಂಡದ ಮೊತ್ತವನ್ನು ಠೇವಣಿ ಇಡಬೇಕು. ದಂಡದ ಹಣವನ್ನು ಆರೋಪಿ ವಿರುದ್ಧ ಪ್ರಾಸಿಕ್ಯೂಷನ್‌ಗಾಗಿ ಪೂರ್ವಾನುಮತಿ ಪಡೆಯಲು ದಾಖಲೆಗಳನ್ನು ಕೇಂದ್ರ ಮತ್ತು ರಾಜ್ಯ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯಕ್ಕೆ ರವಾನಿಸದ ಅಧಿಕಾರಿಗಳಿಂದ ವಸೂಲಿ ಮಾಡಬೇಕು. ಒಂದು ವೇಳೆ ದಂಡ ಮೊತ್ತವನ್ನು ಪಾವತಿಸದೆ ಹೋದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಗಂಭೀರ ಕ್ರಮ ಜರುಗಿಸಲಾಗುವುದು ಎಂದು ಹೈಕೋರ್ಟ್ ಎಚ್ಚರಿಸಿದೆ.

ಸಾಕಷ್ಟು ಕಾಲಾವಕಾಶ ಕಲ್ಪಿಸಿದ್ದರೂ ಎಂಟನೇ ಆರೋಪಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಪಡೆಯಲು ಸರ್ಕಾರ ಯಾವುದೇ ಪ್ರಯತ್ನ ಮಾಡಿಲ್ಲ. ಇದು ಜಡತ್ವದ ನಡೆ. ನಿವೃತ್ತ ಮುಖ್ಯ ಕಾರ್ಯದರ್ಶಿಯು ಸರ್ಕಾರದ 66 ಎಕರೆ ಭೂಮಿಯನ್ನು ಕಬಳಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ 2019ರಲ್ಲಿ ದೂರು ದಾಖಲಾಗಿದ್ದರೂ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಆಸಕ್ತಿ ತೋರುತ್ತಿಲ್ಲ. ಸರ್ಕಾರದ ಆಸ್ತಿಯನ್ನು ಸಂರಕ್ಷಿಸಲು ಕ್ರಮ ಕೈಗೊಂಡಿಲ್ಲ. ಈ ನಡೆ ಸರಿಯಲ್ಲ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಆನೇಕಲ್ ತಾಲ್ಲೂಕಿನ ರಾಮನಾಯಕನಹಳ್ಳಿ ಗ್ರಾಮದ ಸರ್ವೇ 29ರ 66 ಸರ್ಕಾರಿ ಜಮೀನನ್ನು ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ್‌ ಜಾಧವ್ ಅವರ ತಾಯಿ ಒತ್ತುವರಿ ಮಾಡಿದ್ದರು. ಅರವಿಂದ ಜಾಧವ್ ಅವರು ಕೆಲ ಸರ್ಕಾರಿ ಅಧಿಕಾರಿಗಳೊಂದಿಗೆ ಸೇರಿ ಅಧಿಕಾರ ದುರ್ಬಳಕೆ ಮಾಡಿಕೊಂಡು, ಸರ್ಕಾರಿ ಜಮೀನಿಗೆ ಸಂಬಂಧಿಸಿದ ಕಂದಾಯ ದಾಖಲೆಗಳಲ್ಲಿ ತಮ್ಮ ತಾಯಿ ಹೆಸರು ನಮೂದಿಸಿದ್ದಾರೆ ಎಂದು ಆರೋಪಿಸಿ 2016ರ ಆಗಸ್ಟ್‌ 23ರಂದು ಎಸ್ ಭಾಸ್ಕರನ್ ಎಂಬವರು ಎಸಿಬಿಗೆ ದೂರು ನೀಡಿದ್ದರು. ತನಿಖೆಯಲ್ಲಿ ಅರ್ಜಿದಾರ ಡಿ ಬಿ ಗಂಗಯ್ಯ ಪಾತ್ರ ಕಂಡು ಬಂದ ಹಿನ್ನೆಲೆಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದ ಎಸಿಬಿ 2018ರ ಸೆಪ್ಟೆಂಬರ್‌ 15ರಂದು ಎಫ್‌ಐಆರ್ ದಾಖಲಿಸಿತ್ತು. ಇದನ್ನು ರದ್ದುಪಡಿಸುವಂತೆ ಕೋರಿ ಗಂಗಯ್ಯ ಅವರು ಹೈಕೋರ್ಟ್‌ಗೆ 2020ರಲ್ಲಿ ಅರ್ಜಿ ಸಲ್ಲಿಸಿದ್ದರು.

Also Read
ನಿವೃತ್ತ ಮುಖ್ಯ ಕಾರ್ಯದರ್ಶಿ ಜಾಧವ್‌ ತಾಯಿಗೆ ಭೂಮಿ ಮಂಜೂರು ಪ್ರಕರಣ: ಅಧಿಕಾರಿ ಜಯಪ್ರಕಾಶ್‌ಗೆ ನಿರೀಕ್ಷಣಾ ಜಾಮೀನು

ಕಳೆದ ಎರಡು ವರ್ಷಗಳಿಂದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಕಾಲ ಕಾಲಕ್ಕೆ ಎಸಿಬಿಯಿಂದ ತನಿಖಾ ವರದಿ ತರಿಸಿಕೊಂಡು ಪರಿಶೀಲನೆ ನಡೆಸಿತ್ತು. ಜೊತೆಗೆ ಪ್ರಕರಣದಲ್ಲಿ ಆರೋಪಿಗಳಾದ ಸರ್ಕಾರಿ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಪಡೆಯುವ ವಿಚಾರವನ್ನು ಮೇಲ್ವಿಚಾರಣೆ ನಡೆಸುತ್ತಿತ್ತು.
ಪ್ರಕರಣದ ಎಂಟನೇ ಆರೋಪಿಯು ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿಯಾಗಿದ್ದಾರೆ. ಅವರ ವಿರುದ್ಧ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯದಿಂದ ಪೂರ್ವಾನುಮತಿ ಪಡೆಯಬೇಕಿತ್ತು. ಆದರೆ, ಹಲವು ತಿಂಗಳಿಂದ ಈ ಕುರಿತ ಸಂಬಂಧಪಟ್ಟ ಆ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ಸರ್ಕಾರ ಕಳುಹಿಸಿಕೊಟ್ಟಿರಲಿಲ್ಲ. ಆರು ವಾರದಲ್ಲಿ ಎಂಟನೇ ಆರೋಪಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಪಡೆಯಲಾಗುವುದು ಎಂದು 2022ರ ಏಪ್ರಿಲ್‌ 20ರಂದು ಸರ್ಕಾರ ಹೈಕೋರ್ಟ್‌ಗೆ ಭರವಸೆ ನೀಡಿತ್ತು.

Kannada Bar & Bench
kannada.barandbench.com