ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ್ತು ಇತರರು ಕೇತಗಾನಹಳ್ಳಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆ ಎನ್ನಲಾದ ಆರೋಪಕ್ಕೆ ಸಂಬಂಧಿಸದಂತೆ ರಾಮನಗರ ಜಿಲ್ಲಾಧಿಕಾರಿ ನಡೆಸಿರುವ ತನಿಖಾ ವರದಿಯನ್ನು ಸಲ್ಲಿಸಲಾಗಿದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ತಿಳಿಸಿದೆ.
ರಾಮನಗರ ತಾಲ್ಲೂಕಿನ ಕೇತಗಾನಹಳ್ಳಿಯಲ್ಲಿ ತಮ್ಮ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸುವಂತೆ ಕುಮಾರಸ್ವಾಮಿ ಅವರಿಗೆ ತಹಶೀಲ್ದಾರ್ ಜಾರಿ ಮಾಡಿದ್ದ ನೋಟಿಸ್‌ಗೆ ತಡೆ ನೀಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್ ಮತ್ತು ಕೆ ರಾಜೇಶ್ ರೈ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ಕುಮಾರಸ್ವಾಮಿ ಅವರ ಪರ ವಕೀಲರು ಹಿರಿಯ ವಕೀಲ ಉದಯ್ ಹೊಳ್ಳ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಬೇಕು ಎಂದು ಕೋರಿದರು.
ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕಿರಣ್ ರೋಣ್ ಅವರು “ನ್ಯಾಯಾಲಯವು ಈ ಹಿಂದೆ ನಿರ್ದೇಶಿಸಿರುವ ಪ್ರಕಾರ ರಾಮನಗರ ಜಿಲ್ಲಾಧಿಕಾರಿಯು ಸರ್ಕಾರಿ ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ನಡೆಸಿರುವ ತನಿಖಾ ವರದಿಯನ್ನು ಸಲ್ಲಿಸಲಾಗಿದೆ” ಎಂದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
ರಾಮನಗರದ ಕೇತಗಾನಹಳ್ಳಿಯಲ್ಲಿನ ಸರ್ವೇ ನಂಬರ್ 8, 9, 10, 16, 17 ಮತ್ತು 79ಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನಡೆಸಿರುವ ತನಿಖಾ ವರದಿಯನ್ನು ಮುಂದಿನ ವಿಚಾರಣೆಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು.