ಸರ್ಕಾರಿ ಭೂಮಿ ಒತ್ತುವರಿ: ಇಬ್ಬರು ರೈತರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಭೂಕಬಳಿಕೆ ನಿಷೇಧ ನ್ಯಾಯಾಲಯ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಭದ್ರಾಪುರ ಗ್ರಾಮದ ಸರ್ವೇ ನಂ.19ರ ಸರ್ಕಾರಿ ಭೂಮಿಯ ಪೈಕಿ 25 ಗುಂಟೆಯನ್ನು 71 ವರ್ಷದ ಚನ್ನಯ್ಯ, 36 ಗುಂಟೆ ಜಮೀನನ್ನು 90 ವರ್ಷದ ಬಸಪ್ಪ ಒತ್ತುವರಿ ಮಾಡಿಕೊಂಡಿದ್ದರು.
Land Grabbing Prohibition Special Court
Land Grabbing Prohibition Special Court
Published on

ರಾಜ್ಯ ಸರ್ಕಾರದ 36 ಗುಂಟೆ ಹಾಗೂ 25 ಗುಂಟೆ ಜಮೀನನ್ನು ಒತ್ತುವರಿ ಮಾಡಿದ್ದ ಶಿವಮೊಗ್ಗ ಜಿಲ್ಲೆಯ 90 ವರ್ಷ ಹಾಗೂ 71 ವರ್ಷದ ಇಬ್ಬರು ರೈತರಿಗೆ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ಹಾಗೂ ಐದು ಸಾವಿರ ದಂಡ ವಿಧಿಸಿ ಈಚೆಗೆ ಆದೇಶಿಸಿದೆ.

ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ಕೋಡಲೇ ವಶಕ್ಕೆ ಪಡೆದು ಎರಡು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಶಿಕಾರಿಪುರ ತಾಲ್ಲೂಕಿನ ತಹಶೀಲ್ದಾರ್‌ಗೆ ಎರಡನೇ ವಿಶೇಷ ನ್ಯಾಯಾಲಯದ ನ್ಯಾಯಾಂಗ ಸದಸ್ಯ ಪಾಟೀಲ ನಾಗಲಿಂಗನಗೌಡ ಮತ್ತು ಕಂದಾಯ ಸದಸ್ಯ ಕೆ ಎಚ್‌ ಅಶ್ವತ್ಥ ನಾರಾಯಣಗೌಡ ಅವರ ಪೀಠ ಜುಲೈ 25ರಂದು ಆದೇಶಿಸಿದೆ.

1ನೇ ಆರೋಪಿ ಚನ್ನಯ್ಯ, 2ನೇ ಆರೋಪಿ ಬಸಪ್ಪ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ವಿಶೇಷ ನ್ಯಾಯಾಲಯವು ಸಾಕ್ಷ್ಯಗಳ ವಿಚಾರಣೆ ನಡೆಸಿ, ಆರೋಪಿತರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಒಂದೊಮ್ಮೆ ದಂಡದ ಮೊತ್ತ ಪಾವತಿಸಲು ಅಪರಾಧಿಗಳು ವಿಫಲರಾದರೆ ಹೆಚ್ಚುವರಿಯಾಗಿ 3 ತಿಂಗಳು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿಲಾಗಿದೆ.

ಪ್ರಕರಣದ ಹಿನ್ನೆಲೆ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಭದ್ರಾಪುರ ಗ್ರಾಮದ ಸರ್ವೇ ನಂ. 19ರ ಸರ್ಕಾರಿ ಭೂಮಿಯ ಪೈಕಿ 25 ಗುಂಟೆಯನ್ನು 71 ವರ್ಷದ ಚನ್ನಯ್ಯ, 36 ಗುಂಟೆ ಜಮೀನನ್ನು 90 ವರ್ಷದ ಬಸಪ್ಪ ಒತ್ತುವರಿ ಮಾಡಿಕೊಂಡಿದ್ದರು.

ಈ ಸಂಬಂಧ ಗ್ರಾಮಸ್ಥರು ತಹಶೀಲ್ದಾರ್‌ಗೆ ದೂರು ನೀಡಿದ್ದರು. ಇದರ ಭಾಗವಾಗಿ ಶಿಕಾರಿಪುರ ಟೌನ್‌ ಪೊಲೀಸರು ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಸೆಕ್ಷನ್‌ 192(ಎ)(1)ರ ಅಡಿ ಅಪರಾಧಕ್ಕೆ ಶಿಕಾರಿಪುರ ತಾಲ್ಲೂಕಿನ ಹಿರಿಯ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಆನಂತರ ಸದರಿ ನ್ಯಾಯಾಲಯವು ಪ್ರಕರಣವನ್ನು ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.

Kannada Bar & Bench
kannada.barandbench.com