ಭೂ ಹಗರಣ: ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌, ಎಂಎಲ್‌ಸಿ ಶಂಕರ್‌ ವಿರುದ್ಧದ ಖಾಸಗಿ ದೂರು ರದ್ದುಪಡಿಸಿದ ಹೈಕೋರ್ಟ್‌

ಕಲ್ಕೆರೆ ಗ್ರಾಮದ ಎಲ್ಲೆಯಲ್ಲಿರುವ ಸರ್ವೆ ನಂ.375/2ರ 22.43 ಎಕರೆ ಜಮೀನಿನ ಮಾರಾಟ ಪ್ರಮಾಣ ಪತ್ರವನ್ನು ನಕಲಿ ಸಹಿ ಮೂಲಕ ಸೃಷ್ಟಿಸಿ, ಅಂದೇ ಸಚಿವ ಬಸವರಾಜ್‌ ಹೆಸರಿಗೆ ನೋಂದಣಿ ಮಾಡಿಸಲಾಗಿತ್ತು ಎಂಬುದು ಆರೋಪ.
Minister Byrati Basavaraj and Karnataka HC
Minister Byrati Basavaraj and Karnataka HCFB
Published on

ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ವಿಧಾನ ಪರಿಷತ್‌ ಸದಸ್ಯ ಆರ್‌ ಶಂಕರ್‌ ಹಾಗೂ ಮಾದಪ್ಪ ಎಂಬವರ ವಿರುದ್ಧದ ಖಾಸಗಿ ದೂರನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ರದ್ದುಪಡಿಸಿದೆ.

ಪ್ರಕರಣ ಕುರಿತ ಕೆ ಆರ್ ಪುರ ಪೊಲೀಸರ ಬಿ ರಿಪೋರ್ಟ್ ತಿರಸ್ಕರಿಸಿದ್ದ 82ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಮತ್ತು ಖಾಸಗಿ ದೂರಿನ ವಿಚಾರಣೆ ನಡೆಸುತ್ತಿದ್ದ 42ನೇ ಎಸಿಎಂಎಂ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ಸಚಿವರಾದ ಬೈರತಿ ಬಸವರಾಜ್‌, ಎಂಎಲ್‌ಸಿ ಆರ್ ಶಂಕರ್, ಎಂ ಮಾದಪ್ಪ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯ ವಿಚಾರಣೆಯನ್ನು ನಡೆಸಿ, ಆಗಸ್ಟ್‌ 16ರಂದು ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ನೇತೃತ್ವದ ಏಕಸದಸ್ಯ ಪೀಠ ಪ್ರಕಟಿಸಿತು.

"2003ರಲ್ಲಿ ನಡೆದಿದೆ ಎನ್ನಲಾದ ಘಟನೆಯ ಕುರಿತು 2018ರಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾನೂನು ಪ್ರಕ್ರಿಯೆಯ ದುರ್ಬಳಕೆ ವಿಚಾರದಲ್ಲಿ ಇದೊಂದು ಕ್ಲಾಸಿಕ್‌ ಪ್ರಕರಣವಾಗಿದೆ. ಸಿವಿಲ್‌ ನ್ಯಾಯಾಲಯದಲ್ಲಿ ಹಿನ್ನಡೆ ಅನುಭವಿಸಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ದೂರುದಾರರು ಕ್ರಿಮಿನಲ್‌ ನ್ಯಾಯಾಲಯದ ಕದ ತಟ್ಟಿದ್ದಾರೆ" ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ದೂರುದಾರ ಮಾದಪ್ಪ ಅವರ ತಂದೆ ದಿವಂಗತ ಅಣ್ಣಯ್ಯಪ್ಪ ಅವರದ್ದು ಕೃಷಿಕ ಅವಿಭಾಜ್ಯ ಕುಟುಂಬವಾಗಿದೆ. ಅಣ್ಣಯ್ಯಪ್ಪ ಅವರು ಬದುಕಿರುವವರೆಗೂ ಆಸ್ತಿ ವಿಭಜನೆ ನಡೆದಿರಲಿಲ್ಲ. ಅದಾಗ್ಯೂ ಅಣ್ಣಯ್ಯಪ್ಪನವರು ಬದುಕಿರುವಾಗಲೇ ಸಂಬಂಧಿಗಳಾದ ಮಾದಪ್ಪ ಮತ್ತು ಪಿಳ್ಳಮಾದಪ್ಪ ಎಂಬವರು ಬೈರತಿ ಬಸವರಾಜ್‌, ಆರ್‌ ಶಂಕರ್‌ ಮತ್ತು ಅರುಣ್‌ ಅವರ ಜೊತೆಗೂಡಿ ದಿವಂಗತ ಅಣ್ಣಯ್ಯಪ್ಪ ಅವರ ನಕಲಿ ಸಹಿ ಸೃಷ್ಟಿಸಿ ಕಲ್ಕೆರೆ ಗ್ರಾಮದ ಎಲ್ಲೆಯಲ್ಲಿರುವ ಸರ್ವೆ ನಂ.375/2ರಲ್ಲಿ 22.43 ಎಕರೆ ಜಮೀನಿನ ಮಾರಾಟ ಪ್ರಮಾಣ ಪತ್ರವನ್ನು 2003 ಮೇ 21ರಂದು ಸೃಷ್ಟಿಸಿದ್ದಾರೆ. ಅಂದೇ ಮೂರನೇ ಆರೋಪಿಯಾದ ಸಚಿವ ಬೈರತಿ ಬಸವರಾಜ್‌ ಅವರ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

Also Read
[ಭೂ ಹಗರಣ] ಸಚಿವ ಬೈರತಿ ಬಸವರಾಜ್‌, ಎಂಎಲ್‌ಸಿ ಶಂಕರ್‌ ವಿರುದ್ದದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ

ಈ ದೂರಿನ ಕುರಿತು 2018ರ ಡಿ.13ರಂದು ಎಸಿಎಂಎಂ ಕೋರ್ಟ್ ನೀಡಿದ ಆದೇಶನುಸಾರ ತನಿಖೆ ನಡೆಸಿದ್ದ ಕೆ ಆರ್‌ ಪುರ ಪೊಲೀಸರು ʼಬಿʼ ರಿಪೋರ್ಟ್ ಸಲ್ಲಿಸಿದ್ದರು. 82ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ವಿಶೇಷ ನ್ಯಾಯಾಲಯ (ಜನಪ್ರತಿನಿಧಿಗಳ ನ್ಯಾಯಾಲಯ) 2021ರ ಸೆಪ್ಟೆಂಬರ್‌ 9ರಂದು ಬಿ ರಿಪೋರ್ಟ್ ಅನ್ನು ತಿರಸ್ಕರಿಸಿತ್ತು. ನಂತರ ಪ್ರಕರಣ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. ಈ ನ್ಯಾಯಾಲಯ ಖಾಸಗಿ ದೂರನ್ನು ವಿಚಾರಣೆಗೆ ಅಂಗೀಕರಿಸಿ 2021ರ ನವೆಂಬರ್‌ 25ರಂದು ಬೈರತಿ ಬಸವರಾಜ್, ಆರ್ ಶಂಕರ್, ಮಾದಪ್ಪ ಮತ್ತು ಪಿಳ್ಳಮಾದಪ್ಪ, ನಿವೃತ್ತ ಹಿರಿಯ ಸಬ್‌ ರಿಜಿಸ್ಟ್ರಾರ್‌ ಅರುಣ್‌ ಕಲ್ಗುಚ್ಕರ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಈ ಆದೇಶ ಬದಿಗೆ ಸರಿಸಲು ಕೋರಿ ಬಸವರಾಜ್‌ ಮತ್ತು ಇತರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದನ್ನು ಈಗ ನ್ಯಾಯಾಲಯ ರದ್ದುಪಡಿಸಿದೆ.

Kannada Bar & Bench
kannada.barandbench.com