ಬಾಡಿಗೆಗೆ ನೀಡಿದ್ದ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಲೀಕನಿಗೆ ಅರಿವಿಲ್ಲದಿದ್ದಾಗ ಆತನ ವಿರುದ್ಧ ಮಾನವ ಕಳ್ಳಸಾಗಣೆ (ತಡೆ) ಕಾಯಿದೆ ಅಡಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಸ್ಪಷ್ಪಪಡಿಸಿದೆ.
ವೇಶ್ಯಾವಾಟಿಕೆ ಪ್ರಕರಣ ಸಂಬಂಧ ಚಂದ್ರ ಲೇಔಟ್ ಪೊಲೀಸರು ದಾಖಲಿಸಿರುವ ಪ್ರಕರಣ ಮತ್ತದರ ಸಂಬಂಧ ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ ಬಾಕಿ ಇರುವ ವಿಚಾರಣೆ ರದ್ದುಕೋರಿ ನಾಗರಬಾವಿಯ ನಿವಾಸಿ ಪ್ರಭುರಾಜ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.
ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯ ಕೇವಲ ಅರ್ಜಿದಾರರಿಗೆ ಮಾತ್ರ ಅನ್ವಯಿಸಲಿದ್ದು, ಪ್ರಕರಣದ ಇತರ ಆರೋಪಿಗಳ ವಿರುದ್ಧದ ವಿಚಾರಣೆಗೆ ಅನ್ವಯವಾಗುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಅರ್ಜಿದಾರ ಮಾಲೀಕತ್ವ ಹೊಂದಿರುವ ಜಾಗದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಆ ಜಾಗದ ಮಾಲೀಕನ ಅರಿವಿಗೆ ಇರಲಿಲ್ಲ ಎಂದು ಪೊಲೀಸರೇ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಮಾನವ ಕಳ್ಳಸಾಗಣೆ (ತಡೆ) ಕಾಯಿದೆಯ ಸೆಕ್ಷನ್ 3(2)(ಬಿ) ಪ್ರಕಾರ ಯಾವುದೇ ಜಾಗದ ಮಾಲೀಕನಿಗೆ ಆ ಜಾಗದಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ಅರಿವಿದ್ದಾಗ ಮಾತ್ರ ಆತನ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರು ಬಾಡಿಗೆ ನೀಡಿದ್ದ ಮನೆಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಪೊಲೀಸರೇ ಹೇಳಿದ್ದಾರೆ. ಹೀಗಿದ್ದರೂ, ಪ್ರಕರಣ ಮುಂದುವರಿಸಲು ಅವಕಾಶ ನೀಡಿದರೆ ಅರ್ಜಿದಾರರಿಗೆ ಕಿರುಕುಳ ನೀಡಿದಂತಾಗುತ್ತದೆ ಹಾಗೂ ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯವು ಮನೆ ಮಾಲೀಕರ ವಿರುದ್ಧದ ಪ್ರಕರಣ ರದ್ದುಪಡಿಸಿದೆ.
ನಾಗರಬಾವಿಯಲ್ಲಿರುವ ಮನೆಯನ್ನು ಅರ್ಜಿದಾರರು 2019ರ ಡಿಸೆಂಬರ್‌ನಲ್ಲಿ ವ್ಯಕ್ತಿಯೊಬ್ಬರಿಗೆ ಬಾಡಿಗೆ ನೀಡಿದ್ದರು. 2020ರ ಜನವರಿಯಲ್ಲಿ ಚಂದ್ರಲೇಔಟ್ ಠಾಣೆ ಪೊಲೀಸರು ಮನೆ ಮೇಲೆ ದಾಳಿ ನಡೆಸಿ, ತಪಾಸಣೆ ನಡೆಸಿದಾಗ ಅಲ್ಲಿ ಬಾಡಿಗೆದಾರ ವೇಶ್ಯಾವಾಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿತ್ತು.
ಪೊಲೀಸರು, ಬಾಡಿಗೆದಾರ ವ್ಯಕ್ತಿ ಹಾಗೂ ಮನೆ ಮಾಲೀಕರ ವಿರುದ್ಧ ಮಾನವ ಕಳ್ಳಸಾಗಣೆ (ತಡೆ) ಕಾಯಿದೆ ಮತ್ತು ಐಪಿಸಿ ಸೆಕ್ಷನ್ 370ರ ಅಡಿ ಎಫ್‌ಐಆರ್ ದಾಖಲಿಸಿದ್ದರು. ಪೊಲೀಸರು ನೀಡಿದ್ದ ನೋಟಿಸ್‌ಗೆ ಉತ್ತರಿಸಿದ್ದ ಮಾಲೀಕ, ಮನೆಯಲ್ಲಿ ಬಾಡಿಗೆದಾರ ವೇಶ್ಯಾವಾಟಿಕೆ ನಡೆಸುತ್ತಿರುವುದು ತಮ್ಮ ಅರಿವಿಗೆ ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು ಅರ್ಜಿದಾರನ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.