ವೆಬ್ ಸರಣಿ ʼಕಾಲೇಜ್ ರೊಮಾನ್ಸ್ʼನಲ್ಲಿ ಅಶ್ಲೀಲ ಸಂಭಾಷಣೆ: ಎಫ್ಐಆರ್ ದಾಖಲಿಸಲು ದೆಹಲಿ ಹೈಕೋರ್ಟ್ ಆದೇಶ

ಆಧುನಿಕ ಸಂಸ್ಕೃತಿಯ ಹೆಸರಿನಲ್ಲಿ ಶಾಲೆ, ಬೀದಿ ಹಾಗೂ ಮನೆಗಳಲ್ಲಿ ಅದೇ ಅಸಭ್ಯ ಮತ್ತು ಅಶ್ಲೀಲ ಭಾಷೆ ಮಾತನಾಡಿದರೆ ಅದು ಸಮಾಜಕ್ಕೆ ದುರದೃಷ್ಟಕರ ಸಂಗತಿಯಾಗಲಿದೆ ಎಂದು ಎಚ್ಚರಿಸಿದ ನ್ಯಾಯಾಲಯ.
Poster of College Romance and Delhi High Court
Poster of College Romance and Delhi High Court

ಬೇಡಿಕೆ ಮೇರೆಗೆ ವೀಡಿಯೊ ಸೇವೆ ಒದಗಿಸುವ ಟಿವಿಎಫ್‌ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿರುವ 'ಕಾಲೇಜ್ ರೊಮ್ಯಾನ್ಸ್' ವೆಬ್ ಸರಣಿಯಲ್ಲಿ ಬಳಸಲಾದ ಭಾಷೆ ಅಶ್ಲೀಲವೂ, ಅನೈತಿಕವೂ ಹಾಗೂ ಅಸಭ್ಯವೂ ಆಗಿದ್ದು ಯುವಜನರ ಮನಸ್ಸನ್ನು ಕಲುಷಿತಗೊಳಿಸುತ್ತದೆ ಎಂದು ದೆಹಲಿ ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ.

“ಪ್ರಕರಣದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಇಯರ್‌ ಫೋನ್‌ ಸಹಾಯದಿಂದ ವೆಬ್‌ ಸರಣಿಯ ಸಂಚಿಕೆಗಳನ್ನು ನೋಡಬೇಕಾಯಿತು. ಏಕೆಂದರೆ ಸುತ್ತ ನೆರೆದಿದ್ದವರು ಆಘಾತ, ಗಾಬರಿಗೊಳಗಾಗದೆ ಆ ಬಗೆಯ ಅಶ್ಲೀಲ ಸಂಭಾಷಣೆಗಳನ್ನು ಕೇಳಲು ಸಾಧ್ಯವಿರಲಿಲ್ಲ. ಖಂಡಿತವಾಗಿಯೂ, ಇದು ರಾಷ್ಟ್ರದ ಯುವಕರು ಅಥವಾ ಈ ದೇಶದ ನಾಗರಿಕರು ಬಳಸುವ ಭಾಷೆಯಲ್ಲ ಮತ್ತು ಈ ಭಾಷೆಯನ್ನು ನಮ್ಮ ದೇಶದಲ್ಲಿ  ಮಾತನಾಡುವ ದೈನಂದಿನ ಭಾಷೆ ಎಂದು ಕರೆಯಲಾಗದು” ಎಂದು ನ್ಯಾ. ಸ್ವರ್ಣ ಕಾಂತ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದರು.  

ಹೀಗಾಗಿ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67 (ಎಲೆಕ್ಟ್ರಾನಿಕ್‌ ಸ್ವರೂಪದಲ್ಲಿ ಕಾಮಪ್ರಚೋದಕ ವಿಚಾರಗಳ ಪ್ರಕಟಣೆ ಅಥವಾ ಪ್ರಸಾರ), 67A (ಲೈಂಗಿಕ ಅಶ್ಲೀಲ ಕ್ರಿಯೆ ಉಳ್ಳ ವಿಷಯ ಪ್ರಕಟಣೆ ಅಥವಾ ಪ್ರಸಾರಕ್ಕೆ ಶಿಕ್ಷೆ) ಅಡಿಯಲ್ಲಿ ಟಿವಿಎಫ್‌ ಸಂಸ್ಥೆ, ಸರಣಿಯ ನಿರ್ದೇಶಕರಾದ ಸಿಮರ್‌ಪ್ರೀತ್ ಸಿಂಗ್ ಹಾಗೂ ನಟರಾದ ಅಪೂರ್ವ ಅರೋರಾ ಅವರು ಕ್ರಮ ಎದುರಿಸಬೇಕಾಗುತ್ತದೆ ಎಂದು ಏಕಸದಸ್ಯ ಪೀಠ ತೀರ್ಪು ನೀಡಿತು.

ಮೂವರೂ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಸುವಂತೆ ದೆಹಲಿ ಪೊಲೀಸರಿಗೆ ಈ ಹಿಂದೆ  ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನೀಡಿದ್ದ ಆದೇಶವನ್ನು ಪೀಠ ಎತ್ತಿ ಹಿಡಿಯಿತು.

ವಿಚಾರಣೆ ವೇಳೆ ನ್ಯಾಯಾಲಯ “ಆಧುನಿಕ ಸಂಸ್ಕೃತಿಯ ಹೆಸರಿನಲ್ಲಿ ಶಾಲೆ, ಬೀದಿ ಹಾಗೂ ಮನೆಗಳಲ್ಲಿ ಅದೇ ಅಸಭ್ಯ ಮತ್ತು ಅಶ್ಲೀಲ ಭಾಷೆ ಮಾತನಾಡಿದರೆ ಅದು ಸಮಾಜಕ್ಕೆ ದುರದೃಷ್ಟಕರ ಸಂಗತಿಯಾಗಲಿದೆ" ಎಂದು ಕೂಡ ಎಚ್ಚರಿಕೆ ನೀಡಿದೆ.

"ಇಂದು ಸಾಮಾನ್ಯ ಕಾಲೇಜು ಸಂಸ್ಕೃತಿ ಹಾಗೂ ಜೀವನಶೈಲಿಯ ಭಾಗ ಎಂದು ಕರೆಯಲಾಗುತ್ತಿರುವ ಭಾಷೆ ಏನಿದೆ ಅದು ನಾಳೆ ಶಾಲಾ ಮಕ್ಕಳಿಗೂ ಪಸರಿಸಲಿದೆ. ಏಕೆಂದರೆ ಅದಕ್ಕೆ ಯಾವುದೇ ತಡೆ ಇಲ್ಲ. ಇದರಿಂದಾಗಿ ಮುಂದೆ ಅದನ್ನು ಸಾಮಾನ್ಯ ಶಾಲಾ ಸಂಸ್ಕೃತಿ ಎನ್ನಬಹುದು. ನವ ಪೀಳಿಗೆಯು ಯಾವಾಗಲೂ ತನಗಿಂತ ಹಿರಿಯ ಪೀಳಿಗೆಯಿಂದ ಕಲಿಯುತ್ತದೆ. ಒಂದೊಮ್ಮೆ ಇದೇ ರೀತಿಯ ಅಶ್ಲೀಲವೂ, ಅಸಭ್ಯವೂ ಆದ ಭಾಷೆಯನ್ನು ನವ ವಿದ್ಯಾರ್ಥಿಗಳು ಶಾಲೆಗಳಲ್ಲಿ, ಬೀದಿಗಳಲ್ಲಿ, ಮನೆಗಳಲ್ಲಿ ಬಳಸತೊಡಗಿದರೆ ಆ ದಿನ ಸಮಾಜದ ವಿಷಾದದ ದಿನವಾಗಲಿದೆ,"

Related Stories

No stories found.
Kannada Bar & Bench
kannada.barandbench.com