

ಅಂಧ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ಬ್ರೈಲ್ ಕಿಟ್ ವಿತರಿಸುವ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲು ಕರ್ನಾಟಕ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಲ್ಯಾಪ್ ಟಾಪ್ ಹಾಗೂ ಬ್ರೈಲ್ ಕಿಟ್ ವಿತರಣೆ ಯೋಜನೆ-2025ರಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು 60 ದಿನಗಳವರೆಗೆ ವಿಸ್ತರಿಸಬೇಕು ಅದಕ್ಕಾಗಿ ಸೇವಾಸಿಂಧು ಪೋರ್ಟಲ್ ತೆರೆದಿಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲ ಎನ್ ಶ್ರೇಯಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠವು ಅಂಧ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ಬ್ರೈಲ್ ಕಿಟ್ ವಿತರಿಸುವ ಯೋಜನೆಯಡಿ ಆನ್‌ಲೈನ್ ನಲ್ಲಿ ಅರ್ಜಿ ಆಹ್ವಾನಿಸಿ 2025ರ ಸೆಪ್ಟೆಂಬರ್ 26ರಂದು ಪೋರ್ಟಲ್ ತೆರೆಯಾಗಿತ್ತು. ಮೊದಲಿಗೆ ಸೆಪ್ಟೆಂಬರ್ 30 ಕೊನೆ ದಿನಾಂಕ ಎಂದು ಘೋಷಿಸಲಾಗಿತ್ತು. ಬಳಿಕ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 15ಕ್ಕೆ ವಿಸ್ತರಿಸಲಾಯಿತು. ಎರಡನೇ ಬಾರಿಗೆ ಕೊನೆಯ ದಿನಾಂಕವನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿತ್ತು. ಈಗ ಮತ್ತೇ 60 ದಿನ ವಿಸ್ತರಿಸುವಂತೆ ಅರ್ಜಿದಾರರು ಕೋರಿದ್ದಾರೆ. ಆದರೆ, ಈಗಾಗಲೇ ಎರಡು ಬಾರಿ ದಿನಾಂಕ ವಿಸ್ತರಣೆಯಾಗಿದೆ. ಹಾಗಾಗಿ ಮತ್ತೇ ದಿನಾಂಕ ವಿಸ್ತರಿಸುವ ಮನವಿ ಪರಿಗಣಿಸಲು ಸಾಧ್ಯವಿಲ್ಲ. ಆದರೆ, ಯಾವುದೇ ಕಾರಣದಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇದ್ದ ವಿದ್ಯಾರ್ಥಿಗಳು ವೈಯುಕ್ತಿಕವಾಗಿ ನ್ಯಾಯಾಲಯದ ಮುಂದೆ, ಆ ಕಾರಣಗಳನ್ನು ಪರಿಶೀಲಿಸಬಹುದು ಎಂದು ಹೇಳಿ ಅರ್ಜಿಯನ್ನು ಇತ್ಯರ್ಥಪಡಿಸಿತು.