ಲತಾ ಮಂಗೇಶ್ಕರ್ ಸ್ಮಾರಕಕ್ಕಾಗಿ ಕೂಗು: ಶಿವಾಜಿ ಪಾರ್ಕ್ ರಕ್ಷಣೆಗಾಗಿ ಬಾಂಬೆ ಹೈಕೋರ್ಟ್‌ಗೆ ಮನವಿ

ಲತಾ ಮಂಗೇಶ್ಕರ್ ಅವರ ಬಗ್ಗೆ ಆಳವಾದ ಗೌರವ ಇದ್ದರೂ ಮೈದಾನದಲ್ಲಿ ಇಂತಹ ಸ್ಮಾರಕ ನಿರ್ಮಿಸುವುದು ತಪ್ಪು ನಿದರ್ಶನಕ್ಕೆ ಕಾರಣವಾಗುತ್ತದೆ ಎಂದು ಅರ್ಜಿದಾರರಾದ ಪ್ರಕಾಶ್ ಬೆಳವಡೆ ತಿಳಿಸಿದ್ದಾರೆ.
ಲತಾ ಮಂಗೇಶ್ಕರ್ ಸ್ಮಾರಕಕ್ಕಾಗಿ ಕೂಗು: ಶಿವಾಜಿ ಪಾರ್ಕ್ ರಕ್ಷಣೆಗಾಗಿ ಬಾಂಬೆ ಹೈಕೋರ್ಟ್‌ಗೆ ಮನವಿ

ಮುಂಬೈನ ದಾದರ್‌ನಲ್ಲಿರುವ ಆಟದ ಮೈದಾನ ಶಿವಾಜಿ ಪಾರ್ಕ್‌ನಲ್ಲಿ ಕಳೆದ ವಾರ ನಿಧನರಾದ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರ ಸ್ಮಾರಕ ನಿರ್ಮಿಸುವಂತೆ ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಉದ್ಯಾನವನ್ನು ರಕ್ಷಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಾಗಿದೆ [ಪ್ರಕಾಶ್‌ ತುಕಾರಂ ಬೆಳವಡೆ ಮತ್ತು ಮುನ್ಸಿಪಲ್ ಕಾರ್ಪೋರೇಶನ್ ಆಫ್ ಗ್ರೇಟರ್ ಮುಂಬೈ ಇನ್ನಿತರರ ನಡುವಣ ಪ್ರಕರಣ].

ಲತಾ ಮಂಗೇಶ್ಕರ್‌ ಅವರ ಬಗ್ಗೆ ಆಳವಾದ ಗೌರವ ಇದ್ದರೂ ಉದ್ಯಾನದೊಳಗೆ ಇಂತಹ ಸ್ಮಾರಕ ನಿರ್ಮಿಸುವುದು ತಪ್ಪು ನಿದರ್ಶನಕ್ಕೆ ಕಾರಣವಾಗುತ್ತದೆ ಎಂದು ವಕೀಲರಾದ ಪಿ ಜೆ ಸಾಲ್ಸಿಂಗಿಕರ್ ಮತ್ತು ಸಾಯಿಲಿ ವಾನಿ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ಅರ್ಜಿದಾರರಾದ ಪ್ರಕಾಶ್ ಬೆಳವಡೆ ತಿಳಿಸಿದ್ದಾರೆ.

ಮನವಿಯಲ್ಲಿರುವ ಪ್ರಮುಖ ಸಂಗತಿಗಳು

  • ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆ ಶಿವಾಜಿ ಪಾರ್ಕ್‌ನಲ್ಲಿ ನಡೆದಿದ್ದು ಈಗ ಅವರ ಸ್ಮಾರಕವನ್ನು ಉದ್ಯಾನವನದಲ್ಲಿ ನಿರ್ಮಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ಶಿವಸೇನಾ ಸ್ಥಾಪಕ ಬಾಳಾ ಸಾಹೇಬ್‌ ಠಾಕ್ರೆ ಅವರ ಅಂತ್ಯಕ್ರಿಯೆ ಬಳಿಕ ಸ್ಥಳವನ್ನು ಸ್ಮೃತಿಶಾಲೆಯಾಗಿ ಪರಿವರ್ತಿಸಿ ಅವರ ಪುಣ್ಯತಿಥಿಯಂದು ಜನ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

  • ಶಿವಾಜಿ ಪಾರ್ಕ್‌ನಲ್ಲಿ ಆಗಾಗ ಅಂತ್ಯಕ್ರಿಯೆ ನಡೆಸುವುದು, ಸ್ಮಾರಕ ಸ್ಥಾಪಿಸುವುದು ತಪ್ಪು ನಿದರ್ಶನಗಳಿಗೆ ಕಾರಣವಾಗುತ್ತದೆ. ಜೊತೆಗೆ ಇಡೀ ಉದ್ಯಾನದ ವ್ಯಾಪ್ತಿಯನ್ನು ಕಡಿಮೆ ಮಾಡುತ್ತದೆ.

  • ನಗರದ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಕಡಿಮೆಯಾಗುತ್ತಿರುವ ಬಯಲು ಸ್ಥಳಗಳಿಂದಾಗಿ ಆಟದ ಮೈದಾನ ಮತ್ತು ಉದ್ಯಾನವನಗಳಿಗೆ ಧಕ್ಕೆಯಾಗುತ್ತಿದೆ. ಮಕ್ಕಳು ಬೆರೆಯಲು ಕಲಿಯುವುದರಿಂದ ಅವರ ಕೌಶಲ್ಯ ಬೆಳೆಯುವುದರಿಂದ ಮತ್ತು ಸಮುದಾಯದ ಪ್ರಜ್ಞೆಯನ್ನು ಬೆಳೆಸುವುದರಿಂದ ಉದ್ಯಾನ, ಆಟದ ಮೈದಾನಗಳು ಸಮಾಜದ ಆರೋಗ್ಯಕರ ಬೆಳವಣಿಗೆಗೆ ಪ್ರಮುಖ ಅಂಗಗಳು.

  • ಆದ್ದರಿಂದ, ಆಟದ ಮೈದಾನವನ್ನು ರಕ್ಷಿಸುವಂತಹ ನಿಯಮಗಳನ್ನು ರೂಪಿಸಲು ಮತ್ತು ಸಾರ್ವಜನಿಕ ಅಂತ್ಯಕ್ರಿಯೆಗಳು ಮತ್ತು ಸ್ಮಾರಕಗಳಿಗೆ ಇತರ ಸ್ಥಳಗಳನ್ನು ಮೀಸಲಿಡಲು ಪಾಲಿಕೆಗೆ ಆದೇಶ ನೀಡಬೇಕು.

  • ಐತಿಹಾಸಿಕ ಮಹತ್ವ ಇರುವ ಮೈದಾನದ ಸುತ್ತಮುತ್ತಲಿನ ಸಸ್ಯ ಮತ್ತು ಪ್ರಾಣಿಗಳನ್ನು ರಕ್ಷಿಸಲು ನಿರ್ಬಂಧಗಳ ಅಗತ್ಯವಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಶಿವಾಜಿ ಪಾರ್ಕ್‌ ಮಹತ್ವ

ಮುಂಬೈನ ಬಹುದೊಡ್ಡ ಮೈದಾನಗಳಲ್ಲಿ ಒಂದಾದ ಶಿವಾಜಿ ಪಾರ್ಕ್‌ ಭಾರತೀಯ ಕ್ರಿಕೆಟ್‌ನ ತೊಟ್ಟಿಲು ಎಂದೇ ಜನಜನಿತ. ಬ್ರಿಟಿಷರ ಕಾಲದಲ್ಲಿ ರೂಪುಗೊಂಡ ಈ ಮೈದಾನ ಸ್ವಾತಂತ್ರ್ಯ ಹೋರಾಟ, ಮಹಾರಾಷ್ಟ್ರ ಏಕೀಕರಣ ಚಳವಳಿಗೂ ಸಾಕ್ಷಿಯಾಗಿತ್ತು. ಮಹಾರಾಷ್ಟ್ರದ ಪ್ರಮುಖ ರಾಜಕೀಯ ಪಕ್ಷವಾದ ಶಿವಸೇನೆ ಇಲ್ಲಿ ಹಲವು ರಾಜಕೀಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಸುತ್ತಮುತ್ತ. ರಾಜ್‌ ಠಾಕ್ರೆ, ಸಚಿನ್‌ ತೆಂಡೂಲ್ಕರ್‌, ಮಿಲಿಂದ್‌ ಸೋಮನ್ ಸೇರಿದಂತೆ ಸಾಂಸ್ಕೃತಿಕ, ರಾಜಕೀಯ ಹಾಗೂ ಕ್ರೀಡಾಕ್ಷೇತ್ರಕ್ಕೆ ಸೇರಿದ ಖ್ಯಾತನಾಮರ ಮನೆಗಳಿವೆ.

Related Stories

No stories found.