
ನಿಗದಿತ ಅವಧಿ ಮುಗಿದ ಬಳಿಕ ವಿದ್ಯಾರ್ಥಿಗಳ ಮಾಹಿತಿಯನ್ನು ಈಮೇಲ್ ಮಾಡುವ ಮೂಲಕ ನಿಯಮ ಉಲ್ಲಂಘಿಸಿರುವ ಕಲಬುರ್ಗಿಯ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ₹2.75 ಲಕ್ಷ ದಂಡವನ್ನು ಈಚೆಗೆ ವಿಧಿಸಿರುವ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಮತಿಸಿದೆ.
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲ್ಲೂಕಿನ ಎಸ್‌ವಿಇ ಟ್ರಸ್ಟ್‌ನ ಶ್ರೀ ವೀರಭದ್ರೇಶ್ವರ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ 11 ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.
“ಶ್ರೀ ವೀರಭದ್ರೇಶ್ವರ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು 2.75 ಲಕ್ಷ ರೂಪಾಯಿಯನ್ನು ಕಲಬುರ್ಗಿ ಪೀಠದ ವಕೀಲರ ಸಂಘದ ಗ್ರಂಥಾಲಯ ನಿಧಿಗೆ ಪಾವತಿಸುವುದಕ್ಕೆ ಒಳಪಟ್ಟು ಹೋಮಿಯೋಪತಿ ಕೋರ್ಸ್‌ಗೆ 2021-22ನೇ ಶೈಕ್ಷಣಿಕ ವರ್ಷಕ್ಕೆ ಅರ್ಜಿದಾರ ಅಭ್ಯರ್ಥಿಗಳ ಪ್ರವೇಶಾತಿಯನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಒಪ್ಪಿಗೆ ನೀಡಬೇಕು. ದಂಡದ ಹಣವನ್ನು ಕಂಪ್ಯೂಟರ್‌ಗಳು, ಸ್ಕ್ಯಾನರ್ ಮತ್ತು ಪ್ರಿಂಟರ್‌ಗಳನ್ನು ಖರೀದಿಸಿ ಅದನ್ನು ವಕೀಲರ ಗುಮಾಸ್ತರು ಎಲೆಕ್ಟ್ರಾನಿಕ್ ಫೈಲಿಂಗ್ ಮಾಡಲು ತರಬೇತಿಗೆ ಬಳಸಬೇಕು. ದಂಡದ ಮೊತ್ತವನ್ನು ಒಂದು ತಿಂಗಳಲ್ಲಿ ಪಾವತಿಸಬೇಕು. ಆರ್‌ಜಿಎಚ್‌ಎಸ್‌ವಿಯು ವಿದ್ಯಾರ್ಥಿಗಳಿಂದ ಶುಲ್ಕ ಮತ್ತು ದಂಡ ಸ್ವೀಕರಿಸಿ ಅವರು ಪರೀಕ್ಷೆ ಬರೆಯಲು ವಿಶ್ವವಿದ್ಯಾಲಯ ಅನುಮತಿಸಬೇಕು” ಎಂದು ನ್ಯಾಯಾಲಯ ಹೇಳಿದೆ.
“2022ರ ಮೇ 10ರಂದು ತಾಂತ್ರಿಕ ಸಮಸ್ಯೆ ಎಂದು ಹೇಳಿದರೂ ಮೇ 11ರಿಂದ ಆಗಸ್ಟ್ 14ರವರೆಗೆ ಪೋರ್ಟಲ್ ಲಭ್ಯತೆ ಬಗ್ಗೆ ಏನನ್ನೂ ಹೇಳಲಾಗಿಲ್ಲ. ಈ ಅವಧಿಯಲ್ಲಿ ಮಾಹಿತಿ ಅಪ್‌ಲೋಡ್ ಮಾಡಬಹುದಿತ್ತು. ಈಗಿನ ಕಾಲದಲ್ಲಿ ಕಾಲೇಜು ಆಡಳಿತವು ಈಮೇಲ್, ಅಂಚೆ, ಕೊರಿಯರ್ ಮೂಲಕ ವಿದ್ಯಾರ್ಥಿಗಳ ಮಾಹಿತಿ ಕಳುಹಿಸಿಕೊಡಬಹುದಿತ್ತು. ಆಗಸ್ಟ್ 14ರಂದು ಕಾಲೇಜಿನಿಂದ ಮಾಹಿತಿ ಕಳುಹಿಸಿದ್ದು, ಇದನ್ನು ಏಕೆ ಹಿಂದೆ ಕಳುಹಿಸಿಲ್ಲ ಎಂದರೆ ಮೇ 10ಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿರಲಿಲ್ಲ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಅಂತಿಮ ದಿನಾಂಕದ ನಂತರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.
“ನನ್ನ ಖಚಿತ ಅಭಿಪ್ರಾಯದ ಪ್ರಕಾರ ಕಾಲೇಜು ಆಡಳಿತವು ವಿದ್ಯಾರ್ಥಿಗಳ ಬದುಕು ಮತ್ತು ಅವರ ಪೋಷಕರ ಆಕಾಂಕ್ಷೆಗಳ ಜೊತೆ ಆಟವಾಡಿದೆ. ವಿದ್ಯಾರ್ಥಿಗಳಿಗೆ ಅಂತಿಮ ಪ್ರವೇಶ ದಿನದ ಬಗ್ಗೆ ಮಾಹಿತಿ ಇಲ್ಲ ಮತ್ತು ಆನಂತರ ಪ್ರವೇಶ ಪಡೆದರೆ ಕಾನೂನು ಸಮಸ್ಯೆಗೆ ನಾಂದಿಯಾಗುತ್ತದೆ ಎಂಬುದರ ಗಮನ ಇಲ್ಲದಿರುವುದರಿಂದ ಅವರನ್ನು ದಾರಿ ತಪ್ಪಿಸಲಾಗಿದೆ. ಅವಧಿ ಮುಗಿದ ನಂತರ ಅವರು ಪರೀಕ್ಷೆ ತೆಗೆದುಕೊಳ್ಳಲು ಅನುಮತಿ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಮಾನಸಿಕ ಕಿರಿಕಿರಿ ಅನುಭವಿಸುವಂತಾಗಿದೆ. ಈ ನೆಲೆಯಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ರಕ್ಷಿಸಬೇಕಿದೆ” ಎಂದು ನ್ಯಾಯಾಲಯವು ಹೇಳಿದೆ.
ಅರ್ಜಿದಾರರ ಪರ ವಕೀಲ ಅಭಿಷೇಕ್ ಮಾಲಿಪಾಟೀಲ್ ಅವರು “ತಾಂತ್ರಿಕ ಕಾರಣದಿಂದ ನಿಗದಿತ ದಿನಾಂಕದೊಳಗೆ ಎಲ್ಲಾ ವಿದ್ಯಾರ್ಥಿಗಳ ಮಾಹಿತಿ ಅಪ್ ಮಾಡಲಾಗಿಲ್ಲ. ಕಾಲೇಜಿನಲ್ಲಿ 60 ವಿದ್ಯಾರ್ಥಿಗಳಿಗೆ ಅನುಮತಿ ಇರುವುದರಿಂದ ಇದನ್ನು ಪರಿಗಣಿಸಬೇಕು” ಎಂದು ಕೋರಿದ್ದರು.
ಇದಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರತಿನಿಧಿಸಿದ್ದ ವಕೀಲ ಆರ್ ಜೆ ಭೂಸರೆ ಅವರು “ಮೊದಲನೇ ಅರ್ಜಿದಾರರು 2022ರ ಮೇ 10 ಅಲ್ಲದೇ ಇದ್ದರೂ ಕನಿಷ್ಠ ಪಕ್ಷ 11ರಂದಾದರೂ ಮಾಹಿತಿ ಕಳುಹಿಸಬಹುದಿತ್ತು. ಸಾಕಷ್ಟು ವಿಳಂಬದ ನಂತರ 11 ವಿದ್ಯಾರ್ಥಿಗಳ ಮಾಹಿತಿಯ ಈಮೇಲ್ ಕಳುಹಿಸಲಾಗಿದೆ. ಹೀಗಾಗಿ, ವಿಶ್ವವಿದ್ಯಾಲಯವು ಅದನ್ನು ಪುರಸ್ಕರಿಸಲಾಗದು” ಎಂದಿದ್ದರು.
ಪ್ರಕರಣದ ಹಿನ್ನೆಲೆ: ಎಸ್‌ವಿಇ ಟ್ರಸ್ಟ್‌ನ ಶ್ರೀ ವೀರಭದ್ರೇಶ್ವರ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹೋಮಿಯೋಪಥಿ ಕೋರ್ಸ್ ಕಲಿಯಲು 60 ವಿದ್ಯಾರ್ಥಿಗಳಿಗೆ ಅನುಮತಿಸಲಾಗಿತ್ತು. 2022ರ ಮೇ 10 ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಕೊನೆಯ ದಿನವಾಗಿತ್ತು. ಆದರೆ, ಈ ದಿನದ ಒಳಗೆ 49 ವಿದ್ಯಾರ್ಥಿಗಳ ಮಾಹಿತಿ ಅಪ್‌ಲೋಡ್ ಮಾಡಲಾಗಿತ್ತು. 2022ರ ಆಗಸ್ಟ್ 14ರಂದು ಬಾಕಿ 11 ವಿದ್ಯಾರ್ಥಿಗಳ ಮಾಹಿತಿ ಅಪ್ ಮಾಡಲಾಗಿತ್ತು. ಅವಧಿ ಮುಗಿದ ಮೇಲೆ 11 ವಿದ್ಯಾರ್ಥಿಗಳ ಮಾಹಿತಿ ಅಪ್‌ಲೋಡ್ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯವು ಅವರಿಗೆ ಪರೀಕ್ಷೆಗೆ ಒಪ್ಪಿಗೆ ನೀಡರಲಿಲ್ಲ ಎಂದು ಅರ್ಜಿ ಸಲ್ಲಿಸಲಾಗಿತ್ತು.