ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌: ತನಿಖಾ ಆಯೋಗ ರಚನೆ ಕುರಿತ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಘಟನೆಯಲ್ಲಿ 23 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸ್‌ ವಾಹನಗಳು ಜಖಂಗೊಂಡಿವೆ. ಲಾಠಿ ಚಾರ್ಜ್‌ ಆಗಿಲ್ಲ ಎಂದು ಹೇಳುತ್ತಿಲ್ಲ. ಲಾಠಿ ಚಾರ್ಜ್‌ ಮಾಡಿರುವುದು ಸಮರ್ಥನೀಯವೇ ಎಂಬುದು ಪ್ರಶ್ನೆಯಾಗಿದೆ ಎಂದ ಎಜಿ.
ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌: ತನಿಖಾ ಆಯೋಗ ರಚನೆ ಕುರಿತ ಆದೇಶ ಕಾಯ್ದಿರಿಸಿದ ಹೈಕೋರ್ಟ್‌
Published on

ಬೆಳಗಾವಿಯ ಸುವರ್ಣ ಸೌಧದ ಸಮೀಪ ಸಮೀಪ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮತ್ತು ಲಿಂಗಾಯತ ಉಪ ಪಂಗಡಗಳಿಗೆ ಒಬಿಸಿ ಮೀಸಲಾತಿ ಕೋರಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿ ಚಾರ್ಜ್‌ ಮಾಡಿರುವುದನ್ನು ತನಿಖಾ ಆಯೋಗ ರಚಿಸಿ ಅದರ ಮೂಲಕ ತನಿಖೆ ನಡೆಸಬೇಕು ಎಂದು ಕೋರಿರುವ ಅರ್ಜಿಯ ಆದೇಶವನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಸೋಮವಾರ ಕಾಯ್ದಿರಿಸಿದೆ.

ಸುವರ್ಣ ಸೌಧದ ಮುಂದೆ 10.12.2024ರಂದು ನಡೆದ ಲಾಠಿ ಚಾರ್ಜ್‌ ಘಟನೆಯನ್ನು ತನಿಖಾ ಆಯೋಗಕ್ಕೆ ವಹಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಬಾಗಲಕೋಟೆಯ ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪೂರ್ಣಗೊಳಿಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಸುವರ್ಣ ವಿಧಾನಸೌಧದ ಸುತ್ತ ನಿಷೇಧಾಜ್ಞೆ ಜಾರಿ ಮಾಡಿದ್ದು, ನಿಗದಿತ ಸ್ಥಳ ತೊರೆಯದಂತೆ ಪ್ರತಿಭಟನಾಕಾರರಿಗೆ ಎಡಿಜಿಪಿ ಸೂಚಿಸುತ್ತಿರುವ ವಿಡಿಯೋ ಮತ್ತು ಚಿತ್ರಗಳಿವೆ. ಪ್ರತಿಭಟನಾಕಾರರು ಕಲ್ಲು ಮತ್ತು ಚಪ್ಪಲಿಗಳನ್ನು ಪೊಲೀಸರತ್ತ ಎಸೆದಿದ್ದಾರೆ. ಮದ್ಯ ಸೇವಿಸಿ, ಪೊಲೀಸರ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋಗಳಿವೆ. ಪ್ರತಿಭಟನೆಗೆ ನಿಗದಿಯಾಗಿದ್ದ ಸ್ಥಳಕ್ಕೆ ಮರಳುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಪೊಲೀಸರಿಂದ ಲಾಠಿ ಕಸಿದುಕೊಂಡು ಅದರಿಂದ ಪೊಲೀಸರಿಗೆ ಹಲ್ಲೆ ಮಾಡುವ ದೃಶ್ಯಗಳಿವೆ. ರಾಷ್ಟ್ರೀಯ ಹೆದ್ದಾರಿ ತಡೆದು, ಫೆನ್ಸ್‌ ದಾಟುತ್ತಿರುವ ವಿಡಿಯೊಗಳಿವೆ. ಈ ಸಂಬಂಧ ಪೆನ್‌ಡ್ರೈವ್‌ ಅನ್ನು ನ್ಯಾಯಾಲಯಕ್ಕೆ ನೀಡಿದ್ದೇವೆ” ಎಂದರು.

“ನ್ಯಾಯಾಲಯದ ಆದೇಶದ ಪ್ರಕಾರ ಶಾಂತಿಯುತವಾಗಿ ಪ್ರತಿಭಟಿಸಲು ಪ್ರತಿಭಟನಾಕಾರರಿಗೆ ಅನುಮತಿಸಲಾಗಿತ್ತು. ಇದನ್ನು ಮೀರಿ ಪ್ರತಿಭಟನೆಯಲ್ಲಿ ಕೆಲವು ಗಲಭೆಕೋರರು ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. ಇದರಿಂದ 23 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸ್‌ ವಾಹನಗಳು ಜಖಂಗೊಂಡಿವೆ. ಲಾಠಿ ಚಾರ್ಜ್‌ ಆಗಿಲ್ಲ ಎಂದು ಹೇಳುತ್ತಿಲ್ಲ. ಲಾಠಿ ಚಾರ್ಜ್‌ ಮಾಡಿರುವುದು ಸಮರ್ಥನೀಯವೇ ಎಂಬುದು ಪ್ರಶ್ನೆಯಾಗಿದೆ” ಎಂದರು.

“ಇತ್ತೀಚೆಗೆ ರಸ್ತೆಯಲ್ಲಿ ಪ್ರತಿಭಟಿಸುವುದು ಹವ್ಯಾಸವಾಗಿದೆ. ಇದರಿಂದ ಕಾನೂನು ಮತ್ತು ಸುವ್ಯವಸ್ಥೆಯಾಗುತ್ತದೆ. ರಸ್ತೆಯಲ್ಲಿ ಪ್ರತಿಭಟಿಸುವುದು ನಮ್ಮ ಹಕ್ಕು ಎನ್ನುತ್ತಾರೆ. ನನ್ನ ಪ್ರಕಾರ ಈ ಅರ್ಜಿಗೆ ದಂಡ ವಿಧಿಸುವ ಮೂಲಕ ವಜಾ ಮಾಡಬೇಕು. ಏಕೆಂದರೆ ಮಂತ್ರಿಗಳು, ಶಾಸಕರು ಹೋಗಿ ಪ್ರತಿಭಟನಾನಿರತರನ್ನು ಭೇಟಿ ಮಾಡಿದ್ದಾರೆ” ಎಂದರು.

ಸ್ವಾಮೀಜಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ನಿಷೇಧಾಜ್ಞೆ ವಿಧಿಸಿರುವಾಗಲೇ ನಿರ್ದಿಷ್ಟ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ನ್ಯಾಯಾಲಯವು ನಮಗೆ ಅನುಮತಿಸಿತ್ತು. ಸಚಿವರು ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನಾಕಾರರು ಹೊರಟಿದ್ದರು. ಆ ಸಂದರ್ಭದಲ್ಲಿ ಲಾಠಿ ಚಾರ್ಜ್‌ ಮಾಡಲಾಗಿದೆ. ಪ್ರತಿಭಟನೆಯಲ್ಲಿ ಧಾರ್ಮಿಕ ಮುಖಂಡರು, ಶಾಸಕರು ಮತ್ತು ಮಾಜಿ ಶಾಸಕರು ಭಾಗವಹಿಸಿದ್ದರು. ಹೀಗಿರುವಾಗ ಅಲ್ಲಿ ಮದ್ಯ ಸೇವಿಸುತ್ತಿದ್ದರು, ಕಲ್ಲು ಎಸೆದಿದ್ದಾರೆ ಎಂದು ಸರ್ಕಾರ ಹೇಳಬಾರದು. ನಾವು ಎಲ್ಲಾ ವಿಡಿಯೋಗಳನ್ನು ಪರಿಶೀಲಿಸಿದ್ದು, ಎಲ್ಲವೂ ಲಾಠಿ ಚಾರ್ಜ್‌ ಆದ ಬಳಿಕದ ವಿಡಿಯೋಗಳಾಗಿವೆ. ಕಾರ್ಯಕಾರಿ ಮ್ಯಾಜಿಸ್ಟ್ರೇಟ್‌ ಉಪಸ್ಥಿತಿಯ ಬಗ್ಗೆ ಸರ್ಕಾರದ ಆಕ್ಷೇಪಣೆಯಲ್ಲಿ ವಿವರಿಸಲಾಗಿಲ್ಲ. ಹಿರಿಯ ಪೊಲೀಸ್‌ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರುವುದರಿಂದ ನಿಷ್ಪಕ್ಷಪಾತವಾದ ತನಿಖೆ ಅಗತ್ಯವಾಗಿದೆ. ಪ್ರತಿಭಟನೆ ಮೂಲಭೂತ ಹಕ್ಕಾಗಿದ್ದು, ಲಾಠಿ ಚಾರ್ಜ್‌ ಮೂಲಕ ಅದನ್ನು ಹತ್ತಿಕ್ಕಬಾರದಿತ್ತು” ಎಂದರು.

ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಇದೊಂದು ರೀತಿಯಲ್ಲಿ ವಿಡಿಯೋ ವರ್ಸಸ್ ವಿಡಿಯೋ ಆಗಿದೆ. ಅರ್ಜಿದಾರರು ಒಂದಷ್ಟು ವಿಡಿಯೋಗಳನ್ನು ಕೊಟ್ಟಿದ್ದಾರೆ. ಈ ಘಟನೆಯ ಕುರಿತು ನೇರವಾಗಿ ನಾನೇನಾದರೂ ಹೇಳಿದರೆ ಪೊಲೀಸರ ಆತ್ಮಸ್ಥೈರ್ಯ ಕುಂದಬಹುದು” ಎಂದಿತು. ಅಂತಿಮವಾಗಿ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಆದೇಶ ಕಾಯ್ದಿರಿಸಿತು.

Kannada Bar & Bench
kannada.barandbench.com