ಕೇಂದ್ರದಿಂದ ಹೊಸ ನ್ಯಾಯಾಧಿಕರಣ ಮಸೂದೆ ಮಂಡನೆ: ಸುಪ್ರೀಂ ವಿಧಿಸಿದ್ದ ಕನಿಷ್ಠ ಅಧಿಕಾರಾವಧಿ ಆದೇಶ ಬದಿಗೆ

2010ರಿಂದಲೂ ನ್ಯಾಯಾಧಿಕರಣದ ಅಧ್ಯಕ್ಷರು ಮತ್ತು ಸದಸ್ಯರ ಅವಧಿಯನ್ನು 5 ವರ್ಷಗಳಿಗೆ ನಿಗದಿಗೊಳಿಸುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದ್ದರೂ ಕೇಂದ್ರ ಸರ್ಕಾರವು ಅದನ್ನು 4 ವರ್ಷಗಳಿಗೆ ಸೀಮಿತಗೊಳಿಸಿದೆ.
Tribunals
Tribunals

ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿರುವ ನೂತನ ನ್ಯಾಯಾಧಿಕರಣ ಸುಧಾರಣಾ (ತರ್ಕಬದ್ಧಗೊಳಿಸುವಿಕೆ ಮತ್ತು ಸೇವಾ ಷರತ್ತುಗಳು) ಮಸೂದೆ 2020ರಲ್ಲಿ ನ್ಯಾಯಾಧಿಕರಣದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಅಧಿಕಾರವಧಿಗೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪುಗಳನ್ನು ಬದಿಗೆ ಸರಿಸಲೆಂದು ಮಂಡಿಸಲಾಗಿದೆ.

ಸುಪ್ರೀಂ ಕೋರ್ಟ್‌ ಕಳೆದ ಒಂದು ದಶಕದಲ್ಲಿ ಕನಿಷ್ಠ ಮೂರು ತೀರ್ಪುಗಳಲ್ಲಿ ನ್ಯಾಯಾಧಿಕರಣದ ಅಧ್ಯಕ್ಷರು ಮತ್ತು ಸದಸ್ಯರ ಸೇವಾವಧಿಯನ್ನು ಐದು ವರ್ಷಕ್ಕೆ ನಿಗದಿಗೊಳಿಸುವಂತೆ ಆದೇಶಿಸಿತ್ತು. ಆದರೆ, ಕೇಂದ್ರ ಸರ್ಕಾರವು ಅದನ್ನು ನಾಲ್ಕು ವರ್ಷಗಳಿಗೆ ಸೀಮಿತಗೊಳಿಸಿದೆ. 2020ರ ನವೆಂಬರ್‌ 27ರಂದು ಹೊರಡಿಸಲಾಗದ ತೀರ್ಪಿನಲ್ಲೂ ಸುಪ್ರೀಂ ಕೋರ್ಟ್‌ ಸೇವಾವಧಿಯನ್ನು ಐದು ವರ್ಷಕ್ಕೆ ನಿಗದಿ ಮಾಡುವಂತೆ ಸ್ಪಷ್ಟವಾಗಿ ಆದೇಶಿಸಿತ್ತು.

ನ್ಯಾಯಾಲಯ ಈ ಎಲ್ಲಾ ತೀರ್ಪುಗಳಲ್ಲಿ ಉಲ್ಲೇಖಿಸಿರುವುದನ್ನು ಹೊಸ ಮಸೂದೆಯಲ್ಲಿ ಕೈಬಿಡಲಾಗಿದ್ದು, ಆರ್ಥಿಕ ಕಾಯಿದೆ -2017ರ ಸೆಕ್ಷನ್‌ 184ರಲ್ಲಿ ಉಪ ಸೆಕ್ಷನ್‌ 11ರ ನೂತನ ನಿಬಂಧನೆಯನ್ನು ಅಡಕಗೊಳಿಸಲು ಮಸೂದೆಯು ಬೇಡುತ್ತದೆ. ಈ ಹೊಸ ನಿಬಂಧನೆಯನ್ವಯ ಯಾವುದೇ ನ್ಯಾಯಾಲಯದ ಯಾವುದೇ ತೀರ್ಪು ಅಥವಾ ಆದೇಶಕ್ಕಿಂತ ಉನ್ನತ ಆದ್ಯತೆಯನ್ನು ನಿಬಂಧನೆಯು ಪಡೆಯುತ್ತದೆ.

“ಉಪ ಸೆಕ್ಷನ್‌ 11 ಯಾವುದೇ ನ್ಯಾಯಾಲಯದ ತೀರ್ಪು, ಆದೇಶ ಅಥವಾ ಯಾವುದೇ ಕಾನೂನು ಅಸ್ತಿತ್ವದಲ್ಲಿದ್ದರೂ ಅದನ್ನು ಮೀರಿ (i) ನ್ಯಾಯಾಧಿಕರಣದ ಅಧ್ಯಕ್ಷರು ನಾಲ್ಕು ವರ್ಷಗಳವರೆಗೆ ಅಥವಾ ಅವರಿಗೆ ಎಪತ್ತು ವರ್ಷ ವಯಸ್ಸಾಗುವವರೆಗೆ ಅಲ್ಲಿ ಮುಂದುವರೆಯಲಿದ್ದಾರೆ; (ii) ನ್ಯಾಯಾಧಿಕರಣದಲ್ಲಿ ಸದಸ್ಯರಾಗಿ ನೇಮಕವಾಗುವವರು ನಾಲ್ಕು ವರ್ಷ ಅಥವಾ ಅವರಿಗೆ ಅರವತ್ತೇಳು ವರ್ಷಗಳಾಗುವವರೆಗೆ ಮುಂದುವರೆಯಲಿದ್ದಾರೆ, ಇದರಲ್ಲಿ ಯಾವುದು ಮೊದಲೋ ಅದು ಅನ್ವಯಿಸಲಿದೆ

ಮದ್ರಾಸ್‌ ವಕೀಲರ ಪರಿಷತ್ತು ವರ್ಸಸ್‌ ಭಾರತ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 2010ರಲ್ಲಿ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧಿಕರಣ ಮತ್ತು ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣದ ವಿಚಾರದಲ್ಲಿ ಸದಸ್ಯರುಗಳಿಗೆ ಅರ್ಹತೆಗೆ ಅನುಗುಣವಾಗಿ ಏಳು ಅಥವಾ ಐದು ವರ್ಷಗಳ ಸೇವಾವಧಿ ಇರಬೇಕು ಎಂದು ಆದೇಶಿಸಿತ್ತು.

2019ರಲ್ಲಿ ರೋಜರ್‌ ಮ್ಯಾಥ್ಯೂ ವರ್ಸಸ್‌ ಸೌತ್‌ ಇಂಡಿಯನ್‌ ಬ್ಯಾಂಕ್‌ ಪ್ರಕರಣದಲ್ಲಿ ಆರ್ಥಿಕ ಕಾಯಿದೆ 2017 ಮತ್ತು ನ್ಯಾಯಾಧಿಕರಣ, ಮೇಲ್ಮನವಿ ನ್ಯಾಯಾಧಿಕರಣ ಮತ್ತು ಇತರೆ ಪ್ರಾಧಿಕಾರಿಗಳಿಗೆ ಸಂಬಂಧಿಸಿದಂತೆ ಕಾಯಿದೆಯ ಸೆಕ್ಷನ್‌ 184ರ ಅಡಿ ಸರ್ಕಾರಕ್ಕೆ ದೊರೆತಿದ್ದ ಅಧಿಕಾರ ಬಳಸಿ ರೂಪಿಸಿದ್ದ ನೀತಿಗಳ ಸಿಂಧುತ್ವ ಪರಿಶೀಲಿಸುವಂತೆ ಸೂಚಿಸಿತ್ತು. ಅರ್ಥಿಕ ಕಾಯಿದೆಯ ಸೆಕ್ಷನ್‌ 184 ಅನ್ನು ಎತ್ತಿಹಿಡಿದಿದ್ದರೂ ಮೂರು ವರ್ಷಗಳ ಕನಿಷ್ಠ ಅವಧಿ ಕಲ್ಪಿಸುವುದರಿಂದ ಅರ್ಹತೆ ಇರುವವರಿಗೆ ನಿರಾಸೆ ಉಂಟು ಮಾಡಲಿದ್ದು, ಇಂಥ ನ್ಯಾಯಾಧಿಕರಣಗಳಲ್ಲಿ ನ್ಯಾಯಿಕ ಸದಸ್ಯರಾಗುವುದರಿಂದ ಅಭ್ಯರ್ಥಿಗಳನ್ನು ನಿರುತ್ಸಾಹಗೊಳಿಸಿದಂತಾಗುತ್ತದೆ ಎಂದಿತ್ತು. ಅಲ್ಲದೇ, ಆರ್‌ ಗಾಂಧಿ ತೀರ್ಪಿಗೆ ಅನುಗುಣವಾಗಿ ನಿಯಮ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಇದರ ಅನ್ವಯ ಕೇಂದ್ರ ಸರ್ಕಾರವು ಕೇಂದ್ರ ನ್ಯಾಯಾಧಿಕರಣ, ಮೇಲ್ಮನವಿ ನ್ಯಾಯಾಧಿಕರಣ ಮತ್ತು ಇತರೆ ಪ್ರಾಧಿಕಾರಗಳು (ಅರ್ಹತೆಗಳು, ಅನುಭವ ಮತ್ತು ಸದಸ್ಯರ ಸೇವಾಧಿಯ ಇತರೆ ಷರತ್ತುಗಳು) ನಿಯಮಗಳು 2020 ಅನ್ನು ರೂಪಿಸಿತ್ತು.

Also Read
ವೊಡಾಫೋನ್ ತೆರಿಗೆ ವಿವಾದ: ಕೇಂದ್ರ ಸರ್ಕಾರದ ವಿರುದ್ಧ ತೀರ್ಪಿತ್ತ ಅಂತರರಾಷ್ಟ್ರೀಯ ಶಾಶ್ವತ ಮಧ್ಯಸ್ಥಿಕೆ ನ್ಯಾಯಮಂಡಳಿ

ಇದರ ನಿಯಮಗಳ ಪ್ರಕಾರ ಅಧ್ಯಕ್ಷರು ನಾಲ್ಕು ವರ್ಷ ಅಥವಾ ಎಪತ್ತು ವರ್ಷಗಳಾಗುವವರೆಗೆ, ಉಪಾಧ್ಯಕ್ಷರು ನಾಲ್ಕು ವರ್ಷ ಅಥವಾ ಅರವತ್ತೈದು ವರ್ಷಗಳಾಗುವವರೆಗೆ ಅಧಿಕಾರವಧಿ ಹೊಂದಿರಲಿದ್ದಾರೆ ಎಂದಿತ್ತು. ಈ ನಿಯಮಗಳನ್ನು ಮತ್ತೆ ಮದ್ರಾಸ್‌ ವಕೀಲರ ಪರಿಷತ್ತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. 2020ರ ನವೆಂಬರ್‌ 20ರಂದು ಆರ್‌ ಗಾಂಧಿ ಮತ್ತು ರೋಜರ್‌ ಮ್ಯಾಥ್ಯು ಪ್ರಕರಣವನ್ನು ಆಧರಿಸಿ ನ್ಯಾಯಾಧಿಕರಣದ ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರವಧಿಯನ್ನು ಐದು ವರ್ಷಗಳಿಗೆ ನಿಗದಿಗೊಳಿಸುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಈಗ ಮತ್ತೊಮ್ಮೆ ಹೊಸ ನೀತಿಯಲ್ಲಿಯೂ ಸುಪ್ರೀಂ ಕೋರ್ಟ್‌ನ ಹಿಂದಿನ ಮೂರು ತೀರ್ಪುಗಳನ್ನು ಬದಿಗೆ ಸರಿಸಿ, ಸದಸ್ಯರ ಅಧಿಕಾರವಧಿಯನ್ನು ನಾಲ್ಕು ವರ್ಷಗಳಿಗೆ ಸೀಮಿತಗೊಳಿಸಿದೆ.

Related Stories

No stories found.
Kannada Bar & Bench
kannada.barandbench.com