ದೇಶದ್ರೋಹದ ದುರುಪಯೋಗ ತಡೆಯಲು ರಕ್ಷಣಾ ಕ್ರಮಗಳನ್ನು ಸೂಚಿಸಲಾಗಿದೆ: ಕಾನೂನು ಆಯೋಗದ ಅಧ್ಯಕ್ಷ ನ್ಯಾ. ರಿತು ರಾಜ್ ಅವಸ್ಥಿ

ಬಾರ್ ಅಂಡ್ ಬೆಂಚ್ ಜಾಲತಾಣದ ಇಂಗ್ಲಿಷ್ ಆವೃತ್ತಿಗೆ ನ್ಯಾ. ಅವಸ್ಥಿ ಅವರು ಕೆಲ ದಿನಗಳ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಹಂಚಿಕೊಂಡ ಸಂಗತಿಗಳ ಸಂಕ್ಷಿಪ್ತ ವಿವರ ಇಲ್ಲಿದೆ.
Justice Ritu Raj Awasthi
Justice Ritu Raj Awasthi

ಕರ್ನಾಟಕ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ನೇತೃತ್ವದ ಭಾರತೀಯ ಕಾನೂನು ಆಯೋಗ ಇತ್ತೀಚೆಗೆ ದೇಶದ್ರೋಹವನ್ನು ಅಪರಾಧೀಕರಿಸುವ ಕಾನೂನನ್ನು  ಉಳಿಸಿಕೊಳ್ಳಬೇಕು ಎಂದು ಶಿಫಾರಸು ಮಾಡುವ ವರದಿ ಸಲ್ಲಿಸಿದೆ. ಈ ವರದಿ ಕಾನೂನು ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.

ಕರ್ನಾಟಕದ ಸರ್ಕಾರಿ ಶಾಲೆಗಳಿಗೆ ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಈ ಹಿಂದಿನ ಬಿಜೆಪಿ ಸರ್ಕಾರ ವಿಧಿಸಿದ್ದ ನಿಷೇಧವನ್ನು ಎತ್ತಿಹಿಡಿದಿದ್ದ ಕರ್ನಾಟಕ ಹೈಕೋರ್ಟ್‌ ಪೀಠದ ನೇತೃತ್ವ ವಹಿಸಿದ್ದವರು ನ್ಯಾಯಮೂರ್ತಿ ಅವಸ್ಥಿ.

Also Read
ನಾಲ್ಕು ವರ್ಷಗಳ ಬಳಿಕ ಕಾನೂನು ಆಯೋಗ ರಚನೆ: ಅಧ್ಯಕ್ಷರಾಗಿ ನ್ಯಾ. ರಿತು ರಾಜ್ ಅವಸ್ಥಿ ನೇಮಕ

ಅವರ ನೇತೃತ್ವದ ಕಾನೂನು ಆಯೋಗ ಪ್ರಸ್ತುತ ಏಕರೂಪ ನಾಗರಿಕ ಸಂಹಿತೆ, ಒಂದು ರಾಷ್ಟ್ರ ಒಂದು ಚುನಾವಣೆ, ಸಂಪೂರ್ಣ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಪರಿಶೀಲನೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯ ಅನುಷ್ಠಾನ ಮತ್ತು ಭಾರತೀಯ ಟೆಲಿಗ್ರಾಫ್ ಕಾಯಿದೆಯಡಿ ಪರಿಹಾರ ಸೇರಿದಂತೆ ಇತರ ವಿಷಯಗಳನ್ನು ಪರಿಶೀಲಿಸುತ್ತಿದೆ.

ಬಾರ್ & ಬೆಂಚ್‌ದೇಬಯಾನ್‌ ರಾಯ್ ಅವರಿಗೆ ನ್ಯಾ. ಅವಸ್ಥಿ ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ,  ದೇಶದ್ರೋಹ ಕುರಿತಂತೆ ಕಾನೂನು ಆಯೋಗದ ಇತ್ತೀಚಿನ ವರದಿ, ಏಕರೂಪ ನಾಗರಿಕ ಸಂಹಿತೆಯ ಸಂಭವನೀಯ ಕರಡು, ಹಿಜಾಬ್ ಪ್ರಕರಣದ ಸುತ್ತ ವಿವಿಧ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಂದರ್ಶನದಲ್ಲಿ ಅವರು ನೀಡಿದ ಹೇಳಿಕೆಗಳ ಸಂಗ್ರಹ ರೂಪ ಇಲ್ಲಿದೆ.

ನ್ಯಾ. ಅವಸ್ಥಿ ಅವರ ಸಂದರ್ಶನದ ಪ್ರಮುಖಾಂಶಗಳು

 • ಕಾನೂನು ಆಯೋಗದ ಅಧ್ಯಕ್ಷರಾಗಿ ಕೆಲಸ ಮಾಡುವುದು ತುಂಬಾ ಆಸಕ್ತಿದಾಯಕ ಸಂಗತಿಯಾಗಿದೆ. (ನಿವೃತ್ತರಾದ ಮೇಲೆ ಆಯೋಗದ ಅಧ್ಯಕ್ಷರಾಗಿದ್ದರಿಂದ) ನ್ಯಾಯಪೀಠವನ್ನು ಕಳೆದುಕೊಂಡಿಲ್ಲ ಎಂದು ನಾನು ಹೇಳುವುದಿಲ್ಲ, ಅದು ನನ್ನ ಮೂಲ ಕೆಲಸ. ನಾನು 22 ವರ್ಷಗಳ ಕಾಲ ವಕೀಲನಾಗಿದ್ದೆ ಮತ್ತು 13 ವರ್ಷಗಳಿಗಿಂತ ಹೆಚ್ಚು ಕಾಲ ನ್ಯಾಯಾಧೀಶನಾಗಿದ್ದೆ. ಹಾಗಾಗಿ ನಾನು ಕೆಲಸ ಕಳೆದುಕೊಂಡಿಲ್ಲ ಎಂದು ಹೇಳಲಾಗದು. ಇಲ್ಲಿಯೂ (ಕಾನೂನು ಆಯೋಗದಲ್ಲಿಯೂ) ವಿಭಿನ್ನ ಸವಾಲುಗಳಿವೆ.

 • ಮೊದಲಿನಿಂದಲೂ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ಏಕರೂಪ ನಾಗರಿಕ ಸಂಹಿತೆ ರಚನೆಗೆ ಒತ್ತಾಯಿಸುತ್ತಿವೆ, ಆದ್ದರಿಂದ ಇದು ಅಗತ್ಯವಿಲ್ಲ ಎಂದು ಹೇಳಲು ಸಾಧ್ಯವಿಲ್ಲ.

 • ಏಕರೂಪ ನಾಗರಿಕ ಸಂಹಿತೆ ವಿಚಾರ ಕುರಿತಂತೆ ಆಯೋಗ ಪರಿಶೀಲನೆ ನಡೆಸುತ್ತದೆ. ಅದು ಜಾರಿಗೆ ಬರುತ್ತದೋ ಇಲ್ಲವೋ ನಮಗೆ ಗೊತ್ತಿಲ್ಲ. ನಾವು ಸಂಹಿತೆ ರಚಿಸುವಂತೆ ಸಲ್ಲಿಸುವ ವರದಿಯನ್ನು ಸರ್ಕಾರ ಒಪ್ಪುತ್ತದೆ ಎಂಬುದನ್ನು ಕೂಡ ಹೇಳಲು ಸಾಧ್ಯವಿಲ್ಲ.

 • ನಾವು ಮೊದಲು ಏಕರೂಪ ನಾಗರಿಕ ಸಂಹಿತೆಯನ್ನುಅಸ್ತಿತ್ವಕ್ಕೆ ತರಬಹುದೇ ಎಂಬುದನ್ನು ಯೋಚಿಸುತ್ತೇವೆ. ನಂತರ ಹೇಗೆ ಸಂಹಿತೆಯನ್ನು ಜಾರಿಗೆ ತರಬಹುದು ಎಂಬ ಬಗ್ಗೆ ಚಿಂತಿಸುತ್ತೇವೆ.

 • ಆಯೋಗದ ಪಾತ್ರವು ಸಲಹೆ ರೂಪದ್ದಾಗಿದ್ದು(ವರದಿಗಳಿಗೆ) ಯಾವುದೇ ಇತ್ಯಾತ್ಮಕ ಶಕ್ತಿ ಇರುವುದಿಲ್ಲ. ಇದು ಕೆಲ ಮನವೊಲಿಸುವ ಗುಣಗಳನ್ನು ಹೊಂದಿದ್ದು ನಿಸ್ಸಂದೇಹವಾಗಿ ವರದಿಯನ್ನು ಪರಿಶೀಲಿಸುವುದು ಮತ್ತು ಅಗತ್ಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುವುದು ಸರ್ಕಾರಕ್ಕೆ ಸಂಬಂಧಿಸಿದೆ.

 • ದೇಶದ್ರೋಹದ ಕಾನೂನಿನ ಬಗ್ಗೆ ನಾವು ಏನು ಕಂಡುಕೊಂಡಿದ್ದೇವೆ ಮತ್ತು ಏನು ಮಾಡಿದ್ದೇವೆ ಎಂಬುದನ್ನು ಆಯೋಗದ 39ನೇ, 41ನೇ ಹಾಗೂ 42ನೇ ವರದಿಗಳು ಹೇಳುತ್ತವೆ.

 • ದೇಶದ್ರೋಹದ ದುರುಪಯೋಗ ತಡೆಯಲು ರಕ್ಷಣಾ ಕ್ರಮಗಳನ್ನು ಕಾನೂನು ಆಯೋಗ ಸೂಚಿಸಿದೆ.

 • ದೇಶದ್ರೋಹದ ಕಾನೂನಿಗೆ ಸಂಬಂಧಿಸಿದಂತೆ ಶಿಕ್ಷೆಯ ಹೆಚ್ಚಳಕ್ಕೆ ಆಯೋಗ ಸೂಚಿಸಿಲ್ಲ. ಇದನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ…

 • ಶಾಲಾ ಸಮವಸ್ತ್ರ ಹಿಜಾಬ್‌ಗೆ ಅವಕಾಶ ನೀಡದಿರುವಾಗ ಹಿಜಾಬ್‌ ಧರಿಸಿ ಎಂದು ನೀವು ಒತ್ತಾಯಿಸುವಂತಿಲ್ಲ ಎಂದು ಹೇಳಿದ್ದೇವೆ. ಸಮವಸ್ತ್ರಗಳನ್ನು ಜಾರಿಗೆ ತಂದ ಇತಿಹಾಸ ಮತ್ತು ಸಂದರ್ಭವನ್ನು ನಾವು ವಿವರವಾಗಿ ನೋಡಿದ್ದೇವೆ. ನೀವು ಸಮವಸ್ತ್ರಕ್ಕಿಂತ ಭಿನ್ನವಾದ ಉಡುಪನ್ನು ಹೊಂದಿದ್ದರೆ ಆ ಗುಂಪನ್ನು ಇತರರಿಗಿಂತ ಭಿನ್ನ ಎಂದು ಗುರುತಿಸುತ್ತೀರಿ. ಅದು ಸಮವಸ್ತ್ರದ ಎಲ್ಲೆಯನ್ನು ಮೀರುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ.

 • ಆದ್ದರಿಂದ ನಿಮ್ಮ ಪ್ರತ್ಯೇಕ ಅಸ್ಮಿತೆ ಸಾರುವ ಏನನ್ನು ಬೇಕಾದರೂ ಧರಿಸಲು ನೀವು ಒತ್ತಾಯಿಸುವಂತಿಲ್ಲ. ಏಕೆಂದರೆ ಏಕರೂಪತೆಯ ಉದ್ದೇಶ ಹೊಂದಿರುವ ಸಮವಸ್ತ್ರದ ಧ್ಯೇಯವನ್ನು ಅದು ವಿಫಲಗೊಳಿಸುತ್ತದೆ.  

 • ಸಮವಸ್ತ್ರದ ಉದ್ದೇಶ ಏಕರೂಪತೆಯಾಗಿರುವುದರಿಂದ ನೀವು ಬಟ್ಟೆಯ ಆಧಾರದ ಮೇಲೆ ಅವರನ್ನು ಗುರುತಿಸಲು ಸಾಧ್ಯವಿಲ್ಲ.

 • ಹಿಜಾಬ್‌ ಪ್ರಕರಣ ಕುರಿತು ತೀರ್ಪು ನೀಡುವಾಗ ಯಾವುದೇ ಒತ್ತಡವನ್ನು ಅನುಭವಿಸಲಿಲ್ಲ.

 • (ಹಿಜಾಬ್‌ ಧರಿಸುವುದು ಸಾರ್ವಜನಿಕ ಸುವ್ಯವಸ್ಥೆ ಅಥವಾ ನೈತಿಕತೆಗೆ ಹೇಗೆ ವಿರುದ್ಧವಾಗಿದೆ ಎಂಬುದನ್ನು ಹೈಕೋರ್ಟ್‌ ತೀರ್ಪು ಪರಿಶೀಲಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಸುಧಾಂಶು ಧುಲಿಯಾ ಅಭಿಪ್ರಾಯಪಟ್ಟಿದ್ದಾರೆ ಮತ್ತು ವಿವಿಧ ಧರ್ಮ ಮತ್ತು ಸಂಸ್ಕೃತಿಗಳ ಬಗ್ಗೆ ಸಹಾನುಭೂತಿ ಇರಲಿ ಎಂದು ಕಿವಿಮಾತು ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ-) ಪ್ರಕರಣ ಸುಪ್ರೀಂ ಕೋರ್ಟ್‌ ಅಂಗಳದಲ್ಲಿದೆ ನಾನು ಈ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ

 • (ನ್ಯಾಯಾಂಗದ ಮೇಲೆ ಕಾರ್ಯಾಂಗ ಪ್ರಭಾವ ಬೀರುತ್ತದೆಯೇ ಎಂಬ ಕುರಿತಾದ ಪ್ರಶ್ನೆಗೆ- ) ಅಧಿಕಾರಿಗಳು ನನ್ನ ಮೇಲೆ ಪ್ರಭಾವ ಬೀರಲು ಯತ್ನಿಸಿದ ಯಾವುದೇ ಸಂದರ್ಭಗಳಿಲ್ಲ. ಇದು ವ್ಯಕ್ತಿಯ ಮೇಲೆ ಅವಲಂಬಿತ. ಯಾರೂ ನನ್ನ ಮೇಲೆ ಪ್ರಭಾವ ಬೀರಲು ಅಥವಾ ನನ್ನ ಬಳಿಗೆ ಬರಲು ಯತ್ನಿಸಿಲ್ಲ.

 • (ದ್ವೇಷ ಭಾಷಣ ಕುರಿತಂತೆ) ಈ ಬೆದರಿಕೆಯನ್ನು ಕಡಿಮೆ ಮಾಡುವಂತಹ ಕೆಲ ಕಾರ್ಯಗಳನ್ನು ಮಾಡಬೇಕಿದೆ. ಇದೊಂದು ಬೆದರಿಕೆ. ಇದು ಸಮಾಜಕ್ಕೆ ಒಳ್ಳೆಯದಲ್ಲ.

 • ನಿವೃತ್ತಿಯ ನಂತರ ನ್ಯಾಯಮೂರ್ತಿಗಳಿಗೆ ಅಸೈನ್ಮೆಂಟ್‌ಗಳು, ನ್ಯಾಯಾಧಿಕರಣ, ಆಯೋಗಗಳು  ಹಾಗೂ ನ್ಯಾಯಾಂಗ ಕೆಲಸವಿರುವ ಹುದ್ದೆಗಳನ್ನು ನೀಡಲಾಗುತ್ತದೆ ಎಂಬುದು ನಮ್ಮ ವ್ಯವಸ್ಥೆಯಲ್ಲಿ ಈಗ ಸ್ಥಾಪಿತವಾಗಿದೆ.

ಸಂದರ್ಶನದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.  

Related Stories

No stories found.
Kannada Bar & Bench
kannada.barandbench.com