ವಕೀಲರ ನೊಂದಾವಣಿ ಪ್ರಕ್ರಿಯೆಯನ್ನು ತುರ್ತಾಗಿ ಆರಂಭಿಸಲು ಕೇರಳ ವಕೀಲರ ಪರಿಷತ್ (ಬಿಸಿಕೆ) ಮತ್ತು ಭಾರತೀಯ ವಕೀಲರ ಪರಿಷತ್‌ಗೆ (ಬಿಸಿಐ) ನಿರ್ದೇಶಿಸುವಂತೆ ಕೋರಿ ರಾಜ್ಯದ ವಿವಿಧ ಕಾಲೇಜುಗಳ 25 ಪದವೀಧರರು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ಆರ್ ಆರ್ದ್ರಾ ಮೆನನ್ ವರ್ಸಸ್ ಅಧ್ಯಕ್ಷರು ಮತ್ತು ಇತರರು].
ಕೇರಳ ವಕೀಲರ ಪರಿಷತ್ ಮೇ 21ರಂದು ವಕೀಲರ ನೋಂದಣಿ ಮಾಡಲು ಯೋಜಿಸಿತ್ತು. ಅದರೆ, ದೇಶದಲ್ಲಿ ಎಲ್ಲ ರಾಜ್ಯಗಳ ಎಲ್ಲಾ ವಕೀಲರ ಪರಿಷತ್‌ಗಳಿಗೆ ಏಕರೂಪ ನೋಂದಣಿ ಶುಲ್ಕ ನಿಗದಿಪಡಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಆನ್‌ಲೈನ್ ನೋಂದಣಿ ನಿಲ್ಲಿಸಲಾಗಿದೆ ಎಂದು ಅರ್ಜಿದಾರರು ವಿವರಿಸಿದ್ದಾರೆ.
ಕಾನೂನು ಸಮುದಾಯದ ನಿಯಂತ್ರಣ, ಮೇಲ್ವಿಚಾರಣೆ ಹಾಗೂ ಏಳಿಗೆಯ ಜವಾಬ್ದಾರಿ ಹೊಂದಿರುವ ಕೇರಳ ವಕೀಲರ ಪರಿಷತ್, ಅರ್ಜಿದಾರರ ಜೀವಿಸುವ ಹಕ್ಕು, ವೃತ್ತಿ ನಿರ್ವಹಣೆ ಮಾಡುವ ಹಕ್ಕು, ವೃತ್ತಿ ನಡೆಸಲು ನೋಂದಣಿ ಹಕ್ಕಿಗೆ ತಡೆ ಮಾಡುತ್ತಿದೆ. ಕೇರಳ ವಕೀಲರ ಪರಿಷತ್ ಅನ್ನು ಹಲವು ಬಾರಿ ಸಂಪರ್ಕಿಸಿದರೂ ಸಹಾನುಭೂತಿ ತೋರದೇ ಆಲಸ್ಯ ತೋರಿದೆ ಎಂದು ಆಕ್ಷೇಪಿಸಲಾಗಿದೆ.
ಕೋರ್ಸ್ ಪೂರ್ಣಗೊಂಡಿರುವುದರಿಂದ ನೋಂದಣಿಗಾಗಿ ಕಾಯುತ್ತಿರುವುದಾಗಿ ಅರ್ಜಿದಾರರು ವಿವರಿಸಿದ್ದು, ಬಿಸಿಐ ಮತ್ತು ಕೆಬಿಸಿಗೆ ಹಲವು ಮನವಿ ಸಲಿಸಿದರೂ ಯಾವುದೇ ಕ್ರಮವಾಗಿಲ್ಲ ಎಂದಿದ್ದಾರೆ. ನೋಂದಣಿ ಮಾಡಿಕೊಳ್ಳದೆ ಇರುವುರಿಂದ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಬಿಸಿಐ ಏಕರೂಪದ ನೋಂದಣಿ ಶುಲ್ಕ ನಿಗದಿಪಡಿಸುವವರೆಗೆ ವಕೀಲರಾಗಿ ನೋಂದಣಿ ಮಾಡಿಸಲು ಬಯಸುವ ಪದವೀಧರರ ಅರ್ಜಿಗಳನ್ನು ₹750 ಶುಲ್ಕ ಪಡೆದು ತಾತ್ಕಾಲಿಕವಾಗಿ ಸ್ವೀಕರಿಸಲು ಕೇರಳ ವಕೀಲರ ಪರಿಷತ್‌ಗೆ ಈಚೆಗೆ ಹೈಕೋರ್ಟ್‌ನ ವಿಭಾಗೀಯ ಪೀಠ ಆದೇಶಿಸಿತ್ತು.