ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ: ಕಾನೂನು ಸಚಿವರಿಂದ ಅನುಮೋದನೆಯ ಭರವಸೆ ದೊರೆತಿದೆ ಎಂದ ಸಿಜೆಐ

ಈ ವರ್ಷದ ಮೇ ತಿಂಗಳಿನಿಂದ, 106ಕ್ಕೂ ಹೆಚ್ಚು ನ್ಯಾಯಮೂರ್ತಿಗಳು ಹಾಗೂ 9 ಮುಖ್ಯ ನ್ಯಾಯಮೂರ್ತಿಗಳನ್ನು ವಿವಿಧ ಹೈಕೋರ್ಟ್‌ಗಳಿಗೆ ಕೊಲಿಜಿಯಂ ಶಿಫಾರಸು ಮಾಡಿದೆ ಎಂದು ಸಿಜೆಐ ಹೇಳಿದರು.
Law Minister Kiren Rijiju and CJI NV Ramana
Law Minister Kiren Rijiju and CJI NV Ramana

ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಸಂಬಂಧ ಸುಪ್ರೀಂಕೋರ್ಟ್‌ ಕೊಲಿಜಿಯಂ ಮಾಡಿದ್ದ ಶಿಫಾರಸುಗಳಿಗೆ ಶೀಘ್ರವೇ ಅನುಮೋದನೆ ನೀಡುವುದಾಗಿ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಭರವಸೆ ನೀಡಿದ್ದಾರೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಶನಿವಾರ ನವದೆಹಲಿಯಲ್ಲಿ ತಿಳಿಸಿದರು.

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ (ಎನ್‌ಎಎಲ್‌ಎಸ್‌ಎ) ವತಿಯಿಂದ ಆರು ವಾರಗಳ ಕಾಲ ದೇಶದೆಲ್ಲೆಡೆ ನಡೆಯಲಿರುವ 'ಅಖಿಲ ಭಾರತ ಕಾನೂನು ಅರಿವು ಅಭಿಯಾನ'ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವರ್ಷದ ಮೇ ತಿಂಗಳಿನಿಂದ, 106ಕ್ಕೂ ಹೆಚ್ಚು ನ್ಯಾಯಮೂರ್ತಿಗಳು ಹಾಗೂ 9 ಮುಖ್ಯ ನ್ಯಾಯಮೂರ್ತಿಗಳನ್ನು ವಿವಿಧ ಹೈಕೋರ್ಟ್‌ಗಳಿಗೆ ಕೊಲಿಜಿಯಂ ಶಿಫಾರಸು ಮಾಡಿದೆ ಎಂದು ಸಿಜೆಐ ಹೇಳಿದರು.

"ಸರ್ಕಾರ ಕೆಲ ಶಿಫಾರಸ್ಸುಗಳಿಗೆ ಅನುಮೋದನೆ ನೀಡಿದ್ದು ಒಂದೆರಡು ದಿನಗಳಲ್ಲಿ ಉಳಿದವಕ್ಕೆ ಒಪ್ಪಿಗೆ ದೊರೆಯಲಿದೆ ಎಂದು ಕಾನೂನು ಸಚಿವರು ನನಗೆ ಮಾಹಿತಿ ನೀಡಿದ್ದಾರೆ. ಈ ಖಾಲಿ ಹುದ್ದೆಗಳಿಗೆ ಅನುಮೋದನೆ ನೀಡುವ ಮುಖೇನ ತ್ವರಿತ ನ್ಯಾಯದಾನಕ್ಕೆ ಅವಕಾಶ ಮಾಡಿಕೊಡುತ್ತಿರುವುದಕ್ಕಾಗಿ ಕೇಂದ್ರಕ್ಕೆ ನನ್ನ ಧನ್ಯವಾದಗಳು" ಎಂದು ಸಿಜೆಐ ತಿಳಿಸಿದರು. ಮುಂದುವರೆದು ನ್ಯಾ. ರಮಣ ಅವರು, “ಈ ನೇಮಕಾತಿಗಳಿಂದಾಗಿ ಬಾಕಿ ಇರುವ ಪ್ರಕರಣಗಳನ್ನು ಕೆಲ ಮಟ್ಟಿಗೆ ನಿಭಾಯಿಸಬಹುದು” ಎಂದು ವಿಶ್ವಾಸ ವ್ಯಕ್ತಪಡಿಸಿದರು.

Also Read
ಕರ್ನಾಟಕ ಹೈಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ರಿತು ರಾಜ್ ಅವಸ್ಥಿ: ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು

ಕೋವಿಡ್‌ ವಿವಿಧ ಸಂಸ್ಥೆಗಳಿಗೆ ಸಮಸ್ಯೆ ಸೃಷ್ಟಿಸಿದ್ದು ನ್ಯಾಯಾಂಗ ಕೂಡ ಇದಕ್ಕೆ ಹೊರತಾಗಿಲ್ಲ ಎಂದು ಅವರು ಹೇಳಿದರು. "ಸಾವಿರಾರು ಪ್ರಕರಣಗಳು ವಿವಿಧ ವೇದಿಕೆಗಳಲ್ಲಿ ಬಾಕಿ ಇವೆ. ದೊಡ್ಡ ಪ್ರಮಾಣದಲ್ಲಿ ಖಾಲಿ ಇರುವ ಹುದ್ದೆಗಳು, ನ್ಯಾಯಾಲಯಗಳು ಕೆಲಸ ನಿರ್ವಹಿಸದೇ ಇರುವುದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವರ್ಚುವಲ್‌ ವಿಚಾರಣೆಗೆ ಬೇಕಾದ ಸೌಲಭ್ಯಗಳ ಕೊರತೆ ಇರುವುದು ಕಾರಣವಾಗಿದೆ. ಸಾಂಕ್ರಾಮಿಕ ರೋಗವು ಕೆಲವೊಂದು ಆಳವಾಗಿ ಬೇರೂರಿರುವ ಸಮಸ್ಯೆಗಳನ್ನು ಹೊರಗಾಣಿಸಿದೆ” ಎಂದು ಅವರು ಹೇಳಿದರು.

ದುರ್ಬಲ ವರ್ಗಗಳು ಸೇರಿದಂತೆ ಎಲ್ಲರಿಗೂ ನ್ಯಾಯ ಒದಗಿಸುವುದರ ಮಹತ್ವದ ಬಗ್ಗೆ ಒತ್ತಿ ಹೇಳಿದ ಸಿಜೆಐ, "ದುರ್ಬಲ ವರ್ಗಗಳು ತಮ್ಮ ಹಕ್ಕುಗಳನ್ನು ಅನುಭವಿಸಲು ಸಾಧ್ಯವಾಗದಿದ್ದರೆ ಸಮಾನ ನ್ಯಾಯದ ಭರವಸೆ ಅರ್ಥಹೀನವಾಗುತ್ತದೆ. ಸಮಾನತೆ ಮತ್ತು ನ್ಯಾಯ ಲಭ್ಯತೆ ಪರಸ್ಪರ ಪೂರಕವಾದವು. ಈ ದೇಶದ ಜನ ಕಾನೂನು ಮತ್ತು ನ್ಯಾಯಾಂಗ ಎಲ್ಲರಿಗೂ ಒಂದೇ ಎಂದು ಭಾವಿಸಬೇಕು. ಪ್ರಜಾಪ್ರಭುತ್ವ ದೇಶವೊಂದರಲ್ಲಿ ಜನರ ವಿಶ್ವಾಸ ಮತ್ತು ನಂಬಿಕೆ ಸಂಸ್ಥೆಯೊಂದನ್ನು ಬಲಪಡಿಸಲಿದ್ದು ನಾವು ಆ ವಿಶ್ವಾಸ ಗಳಿಸಬೇಕು. ಪ್ರಜಾಪ್ರಭುತ್ವದ ಗುಣಮಟ್ಟವು ನ್ಯಾಯದ ಗುಣಮಟ್ಟವನ್ನು ಆಧರಿಸಿದೆ” ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಈ ನಿಟ್ಟಿನಲ್ಲಿ ಎನ್‌ಎಎಲ್‌ಎಸ್‌ಎ ಆರಂಭಿಸಿರುವ ಕಾರ್ಯಕ್ರಮದ ಮಹತ್ವವನ್ನು ಸಿಜೆಐ ಎತ್ತಿ ತೋರಿಸಿದರು. “ಎನ್‌ಎಎಲ್‌ಎಸ್‌ಎ ಈ ದಿನ ಮಹತ್ವಾಕಾಂಕ್ಷೆಯ 6 ವಾರಗಳಕಾರ್ಯಕ್ರಮ ಆರಂಭಿಸುತ್ತಿದ್ದು ಪಂಡಿತ್‌ ಜವಾಹರ್‌ ಲಾಲ್‌ ನೆಹರೂ ಅವರ ಜನ್ಮದಿನದಂದು ಇದು ಸಂಪನ್ನಗೊಳ್ಳಲಿದೆ. ನ್ಯಾಯದ ಅಗತ್ಯವಿರುವವರು ನಮ್ಮನ್ನು ತಲುಪಲಾಗದಿದ್ದರೆ ನಾವು ಅವರನ್ನು ತಲುಪುತ್ತೇವೆ ಎಂಬುದು ಕಾರ್ಯಕ್ರಮದ ಗುರಿಯಾಗಿರಬೇಕು. ಇದನ್ನು ಸಾಧಿಸಲು ಸರ್ಕಾರದ ಎಲ್ಲಾ ಮೂರು ಅಂಗಗಳು ಒಟ್ಟಿಗೆ ಕೆಲಸ ಮಾಡಬೇಕು. ನ್ಯಾಯ ದೊರೆಯುವುದನ್ನು ಸುಲಭಗೊಳಿಸಲು ಮತ್ತು ಪ್ರಜಾಪ್ರಭುತ್ವ ಬಲಪಡಿಸಲು ನಾನು ಸರ್ಕಾರದ ಸಹಕಾರ ಮತ್ತು ಬೆಂಬಲ ಬಯಸುತ್ತೇನೆ” ಎಂದರು.

Related Stories

No stories found.
Kannada Bar & Bench
kannada.barandbench.com