ಬಡವರಿಗೆ ನ್ಯಾಯ ಖಾತರಿಪಡಿಸುವ ಸಿವಿಲ್‌ ಪ್ರಕ್ರಿಯಾ ಸಂಹಿತಾ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ: ಸಚಿವ ಪಾಟೀಲ್‌

ಕಳೆದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಅನುಮೋದನೆಗೊಂಡಿದ್ದ ವಿಧೇಯಕವನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ರಾಜ್ಯಪಾಲರು ಕಳುಹಿಸಿಕೊಟ್ಟಿದ್ದರು. ಇದಕ್ಕೆ ಫೆಬ್ರವರಿ 21ರಂದು ರಾಷ್ಟ್ರಪತಿಗಳು ಸಹಿ ಹಾಕಿದ್ದಾರೆ.
H K Patil, Law and Parliamentary Affairs Minister
H K Patil, Law and Parliamentary Affairs Minister
Published on

ವಿವಿಧ ನ್ಯಾಯಾಲಯಗಳಲ್ಲಿ ಬಹುಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಆರು ತಿಂಗಳಲ್ಲಿ ಇತ್ಯರ್ಥಪಡಿಸುವ ಸಿವಿಲ್‌ ಪ್ರಕ್ರಿಯಾ ಸಂಹಿತಾ (ತಿದ್ದುಪಡಿ) ವಿಧೇಯಕ 2023ಕ್ಕೆ ಫೆಬ್ರವರಿ 21ರಂದು ರಾಷ್ಟ್ರಪತಿಗಳು ಸಹಿ ಹಾಕಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ ಕೆ ಪಾಟೀಲ್‌ ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಸ್ವಯಂ ಹೇಳಿಕೆ ನೀಡಿದ್ದಾರೆ.

ಕಳೆದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಅನುಮೋದನೆಗೊಂಡಿದ್ದ ವಿಧೇಯಕವನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ರಾಜ್ಯಪಾಲರು ಕಳುಹಿಸಿಕೊಟ್ಟಿದ್ದರು. ಈಗ ಅದಕ್ಕೆ ಸಹಿ ಬಿದ್ದಿರುವುದರಿಂದ ಕಾನೂನು ಜಾರಿಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ನ್ಯಾಯಾಲಯಗಳಲ್ಲಿ ದೀರ್ಘಕಾಲದಿಂದ ಬಾಕಿ ಇರುವಂತಹ ಪ್ರಕರಣಗಳು ಹಾಗೂ ಮೊಕದ್ದಮೆಗಳನ್ನು ಮುನ್ನಡೆಸಲು ಸಾಮರ್ಥ್ಯವಿಲ್ಲದ ವ್ಯಕ್ತಿಗಳನ್ನು ಒಳಗೊಂಡಿರುವ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಉಪಬಂಧ ಕಲ್ಪಿಸುವುದು ಈ ವಿಧೇಯಕದ ಉದ್ದೇಶ. ಇದರೊಟ್ಟಿಗೆ, ಸಣ್ಣ ಮತ್ತು ದುರ್ಬಲ ರೈತರಾಗಿರುವ ಕಾರಣ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿರುವ ವ್ಯಕ್ತಿಗಳು (ವಾರ್ಷಿಕ ಆದಾಯ 50 ಸಾವಿರ ರೂಪಾಯಿ ಮೀರದವರು) ಇಂತಹ ವ್ಯಾಜ್ಯಗಳನ್ನು ನಡೆಸಲು ಸಮರ್ಥರಾಗಿರುವುದಿಲ್ಲ. ಅಂಥವರಿಗೆ ಭದ್ರತೆ ಒದಗಿಸಲು ಸಿವಿಲ್‌ ಪ್ರಕ್ರಿಯಾ ಸಂಹಿತೆ 1908 (1908ರ ಕೇಂದ್ರದ ಅಧಿನಿಯಮ 5) ಅನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಅಗತ್ಯವಾಗಿದೆ. ಇಂಥ ಪ್ರಕರಣಗಳನ್ನು ಆರು ತಿಂಗಳ ಒಳಗೆ ಸಾಧ್ಯವಾದಷ್ಟು ಬೇಗನೆ ವಿಲೇವಾರಿ ಮಾಡಲು ಉದ್ದೇಶಿಸಿ, ಮಸೂದೆ ರೂಪಿಸಲಾಗಿತ್ತು.

Kannada Bar & Bench
kannada.barandbench.com