ದೇಶದ ವಿವಿಧೆಡೆ ಸುಪ್ರೀಂ ಕೋರ್ಟ್ ಪ್ರಾದೇಶಿಕ ಪೀಠ ಸ್ಥಾಪಿಸಲು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯ ಕುರಿತಾದ ಸಂಸದೀಯ ಸ್ಥಾಯಿ ಸಮಿತಿ ಕಳೆದ ವರ್ಷ ಮಾಡಿದ್ದ ಶಿಫಾರಸನ್ನು ಕೇಂದ್ರ ಕಾನೂನು ಸಚಿವಾಲಯ ಅಂಗೀಕರಿಸಿದೆ.
ʼನ್ಯಾಯಾಂಗ ಪ್ರಕ್ರಿಯೆ ಮತ್ತು ಅವುಗಳ ಸುಧಾರಣೆʼ ಹೆಸರಿನ ತನ್ನ 133ನೇ ವರದಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ಸಮಿತಿಯು ಫೆಬ್ರವರಿ 6 ರಂದು ವರದಿ ಸಲ್ಲಿಸಿತು.
133ನೇ ವರದಿಯನ್ನು ಆಗಸ್ಟ್ 7, 2023ರಂದು ರಾಜ್ಯಸಭೆಯ ಮುಂದಿರಿಸಿ ಅದೇ ದಿನ ಲೋಕಸಭೆಯಲ್ಲಿ ಇರಿಸಲಾಯಿತು. ಕಾನೂನು ಮತ್ತು ನ್ಯಾಯ ಸಚಿವಾಲಯ ಕೈಗೊಂಡ ಕ್ರಮಗಳ ಬಗ್ಗೆ ಸಮಿತಿಯು ಎಂಟು ತಿಂಗಳ ನಂತರ, ವರದಿ ಪ್ರಕಟಿಸಿದೆ.
ಸಮಿತಿಯು ತನ್ನ ವರದಿಯಲ್ಲಿ 22 ಶಿಫಾರಸುಗಳನ್ನು ಮಾಡಿತ್ತು. ಕೈಗೊಂಡ ಕ್ರಮದ ವರದಿಯಲ್ಲಿ, ಸರ್ಕಾರದ ಉತ್ತರಗಳನ್ನು ನಾಲ್ಕು ಅಧ್ಯಾಯಗಳ ಅಡಿಯಲ್ಲಿ ವರ್ಗೀಕರಿಸಿ ಪರಿಶೀಲಿಸಲಾಗಿದೆ.
ಸಮಿತಿ ಮಾಡಿದ ಶಿಫಾರಸುಗಳಲ್ಲಿ ಸುಪ್ರೀಂ ಕೋರ್ಟ್ ಪ್ರಾದೇಶಿಕ ಪೀಠಗಳ ಸ್ಥಾಪನೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸಿನ ಹೆಚ್ಚಳ, ನ್ಯಾಯಾಂಗ ನೇಮಕಾತಿಗಳಲ್ಲಿ ಹೆಚ್ಚಿನ ಸಾಮಾಜಿಕ ವೈವಿಧ್ಯತೆ ತರುವುದು ಹಾಗೂ ನಿವೃತ್ತಿಯ ನಂತರ ನ್ಯಾಯಮೂರ್ತಿಗಳು ವಿವಿಧ ಹುದ್ದೆಗಳಿಗೆ ನಿಯೋಜನೆಗೊಳ್ಳುವ ಬಗ್ಗೆ ಪರಿಶೀಲನೆ ನಡೆಸುವುದು ಸೇರಿದ್ದವು.
ಇಲಾಖೆ ಅಂಗೀಕರಿಸಿದ ಶಿಫಾರಸುಗಳು
i) ಸರ್ವೋಚ್ಚ ನ್ಯಾಯಾಲಯದ ಪ್ರಾದೇಶಿಕ ಪೀಠಗಳ ಕಾರ್ಯಸಾಧ್ಯತೆ
ಸಮಿತಿಯು ತನ್ನ 133 ನೇ ವರದಿಯಲ್ಲಿ ಉತ್ತಮ ರೀತಿಯಲ್ಲಿ ನ್ಯಾಯ ದೊರೆಯುವಂತೆ ಮಾಡಲು ಸುಪ್ರೀಂ ಕೋರ್ಟ್ ಪ್ರಾದೇಶಿಕ ಪೀಠಗಳನ್ನು ಸ್ಥಾಪಿಸಲು ಶಿಫಾರಸು ಮಾಡಿತ್ತು. ಕೈಗೊಂಡ ಕ್ರಮದ ವರದಿಯಲ್ಲಿ, ಸಮಿತಿಯು ಹೀಗೆ ಹೇಳಿದೆ "ಭಾರತದ ಸುಪ್ರೀಂ ಕೋರ್ಟ್ ಪ್ರಾದೇಶಿಕ ಪೀಠ ಸ್ಥಾಪನೆ ಬೇಡಿಕೆಯು ಸಂವಿಧಾನದ ಅಡಿಯಲ್ಲಿ ಮೂಲಭೂತ ಹಕ್ಕಾಗಿರುವ 'ನ್ಯಾಯ ಪಡೆಯುವುದಕ್ಕೆʼ ಸಂಬಂಧಿಸಿದೆ ಎಂದು ಸಮಿತಿ ಭಾವಿಸಿದೆ... ನ್ಯಾಯಾಂಗದಲ್ಲಿ ಹೆಚ್ಚುತ್ತಿರುವ ಪ್ರಕರಣಗಳಿಗೆ ಪರಿಹಾರವಾಗಿ ಮತ್ತು ಸಾಮಾನ್ಯ ಜನರಿಗೆ ದಾವೆ ವೆಚ್ಚ ಕಡಿಮೆ ಮಾಟುವ ನಿಟ್ಟಿನಲ್ಲಿ ಇದನ್ನು ಪರಿಗಣಿಸಬಹುದು" ಎಂದಿದೆ.
ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯ ಸ್ಥಾಪಿಸುವ ಅರ್ಜಿಯಲ್ಲಿ, ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿರುವುದನ್ನು ಅದು ಗಮನಿಸಿದ್ದು "ದೆಹಲಿಯ ಹೊರಗಿನ ಸ್ಥಳದಲ್ಲಿ ಸುಪ್ರೀಂ ಕೋರ್ಟ್ ಪೀಠಗಳನ್ನು ಸ್ಥಾಪಿಸುವ ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್ ನಿರಂತರವಾಗಿ ತಿರಸ್ಕರಿಸುತ್ತಿದೆ" ಎಂದು ಹೇಳಿದೆ.
ii) ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯಗಳಿಂದ ವಾರ್ಷಿಕ ವರದಿಗಳ ತಯಾರಿಕೆ ಮತ್ತು ಪ್ರಕಟಣೆ
133 ನೇ ವರದಿಯು ಕಳೆದ ವರ್ಷದಲ್ಲಿ ಸಂಸ್ಥೆಗಳು ಏನು ಮಾಡಿವೆ ಎಂಬುದರ ಕುರಿತು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವಾರ್ಷಿಕ ವರದಿಗಳನ್ನು ತಯಾರಿಸಲು ಶಿಫಾರಸು ಮಾಡಿತ್ತು.
ಒರಿಸ್ಸಾ ಹೈಕೋರ್ಟ್ ರೀತಿಯಲ್ಲಿ ಎಲ್ಲಾ ಹೈಕೋರ್ಟ್‌ಗಳು ವಾರ್ಷಿಕ ವರದಿ ಪ್ರಕಟಿಸಲು ಮತ್ತು ಅವುಗಳನ್ನು ತಮ್ಮ ಜಾಲತಾಣಗಳ ಮೂಲಕ ಪ್ರಸಾರ ಮಾಡಲು ಪರಿಗಣಿಸುವಂತೆ ಸಿಜೆಐ ಮತ್ತು ಎಲ್ಲಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಜೂನ್ 2023 ರಲ್ಲಿ ಕೋರಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಮತ್ತು ಉನ್ನತ ನ್ಯಾಯಾಂಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಇತ್ಯಾದಿ ಸಂಗತಿಗಳ ಬಗ್ಗೆ ತಾನು ಈ ಹಿಂದೆ ಮಾಡಿದ್ದ ಶಿಫಾರಸುಗಳನ್ನು ಮುಂದುವರಿಸಲು ಸಮಿತಿ ಬಯಸಲಿಲ್ಲ.
[ಕ್ರಮ ಕೈಗೊಂಡ ವರದಿಯ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]