ಲೈಂಗಿಕ ಅಪರಾಧಗಳ ಕಾನೂನು ಸೂಕ್ತ ರೀತಿಯಲ್ಲಿ ಮಹಿಳಾ ಕೇಂದ್ರಿತವೇ ಆಗಿದ್ದರೂ ಪುರುಷ ಸಂಗಾತಿ ಸದಾ ತಪ್ಪೆಸಗುತ್ತಾನೆ ಎಂದು ಅರ್ಥವಲ್ಲ ಎಂಬುದಾಗಿ ವಿವಾಹವಾಗುವ ಭರವಸೆಯಿತ್ತು ಅತ್ಯಾಚಾರ ಎಸಗಿದ ಪ್ರಕರಣದ ವಿಚಾರಣೆ ವೇಳೆ ಅಲಾಹಾಬಾದ್ ಹೈಕೋರ್ಟ್ ತಿಳಿಸಿದೆ.
ಅಂತಹ ಪ್ರಕರಣಗಳಲ್ಲಿ ಪುರಾವೆ ಒದಗಿಸುವ ಬಾಧ್ಯತೆ ದೂರುದಾರರು ಮತ್ತು ಆರೋಪಿ ಇಬ್ಬರ ಮೇಲೆಯೂ ಇರುತ್ತದೆ ಎಂದು ನ್ಯಾಯಮೂರ್ತಿಗಳಾದ ರಾಹುಲ್ ಚತುರ್ವೇದಿ ಮತ್ತು ನಂದಪ್ರಭಾ ಶುಕ್ಲಾ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯ ಖುಲಾಸೆಯನ್ನು ಎತ್ತಿಹಿಡಿದ ಪೀಠ ಲೈಂಗಿಕ ಅಪರಾಧಗಳ ಕಾನೂನು ಸೂಕ್ತ ರೀತಿಯಲ್ಲಿ ಮಹಿಳಾ ಕೇಂದ್ರಿತವೇ ಆದರೂ ಸದಾ ಪುರುಷ ಸಂಗಾತಿಯದ್ದೇ ತಪ್ಪಲ್ಲ. ಹೊಣೆಗಾರಿಕೆ ಇಬ್ಬರ ಮೇಲೂ ಇರುತ್ತದೆ ಎಂದಿದೆ.
ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ದೂರುದಾರರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆಯಡಿ ಅಡಿಯಲ್ಲಿ ಆರೋಪಪಟ್ಟಿ ಕೂಡ ಸಲ್ಲಿಸಲಾಗಿತ್ತು.
ಆದರೆ ತಮ್ಮ ಸಂಬಂಧ ಸಹಮತದಿಂದ ಕೂಡಿದ್ದು ಆಕೆಯದ್ದು ಯಾದವ್ ಜಾತಿಯಲ್ಲ ಎಂದು ತಿಳಿದ ಬಳಿಕ ಮದುವೆಯಾಗಲು ನಿರಾಕರಿಸಿದ್ದಾಗಿ ಆರೋಪಿ ತಿಳಿಸಿದ್ದ.
ಅಲ್ಲದೆ ದೂರುದಾರೆಗೆ ಈಗಾಗಲೇ ವಿವಾಹವಾಗಿದ್ದು ಅದನ್ನು ಆಕೆ ಮುಚ್ಚಿಟ್ಟಿದ್ದಾಳೆ ಹೀಗಿರುವಾಗ ವಿವಾಹವಾಗುವ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಲಾಗಿದೆ ಎಂಬುದು ಅಸಂಭವವಾಗುತ್ತದೆ. ಅಲ್ಲದೆ ಆಕೆಯ ಮೊದಲ ವಿವಾಹ ಇನ್ನೂ ಅಸ್ತಿತ್ವದಲ್ಲಿರುವಾಗ ಮದುವೆಯಾಗುವುದಾಗಿ ಇನ್ನೊಬ್ಬ ವ್ಯಕ್ತಿ ನೀಡುವ ಭರವಸೆ ತನ್ನಿಂತಾನೇ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದು ನ್ಯಾಯಾಲಯ ನುಡಿದಿದೆ.
ಅಲ್ಲದೆ ಎಸ್‌ಸಿ ಎಸ್‌ಟಿ ಕಾಯಿದೆಯಡಿ ಮಾಡಲಾದ ಆರೋಪಗಳನ್ನೂ ಬದಿಗೆ ಸರಿಸಿರುವ ನ್ಯಾಯಾಲಯ ದೂರುದಾರೆಗೆ ತನ್ನ ಜಾತಿ ಸ್ಪಷ್ಟಪಡಿಸಲು ಸಾಧ್ಯವಾಗಿಲ್ಲ ಎಂದಿದೆ.
"ಆದ್ದರಿಂದ, ಈಗಾಗಲೇ ಮದುವೆಯಾಗಿರುವ ಮತ್ತು ತನ್ನ ಹಿಂದಿನ ವಿವಾಹವನ್ನು ರದ್ದುಗೊಳಿಸದೆ ತನ್ನ ಜಾತಿಯನ್ನು ಮರೆಮಾಚಿರುವ ಮಹಿಳೆ ಯಾವುದೇ ಆಕ್ಷೇಪಣೆ ಮತ್ತು ಹಿಂಜರಿಕೆಯಿಲ್ಲದೆ 5 ವರ್ಷಗಳ ಕಾಲ ಉತ್ತಮ ದೈಹಿಕ ಸಂಬಂಧವ ಹೊಂದಿದ್ದಾಳೆ. (ದೂರುದಾರೆ ಹಾಗೂ ಆರೋಪಿ) ಇಬ್ಬರೂ ವಸತಿಗೃಹಗಳಲ್ಲಿ ತಂಗಿ ಪರಸ್ಪರ ಸಹವಾಸ ಅನುಭವಿಸಿದ್ದಾರೆ. ಯಾರು ಯಾರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ನಿರ್ಣಯಿಸುವುದು ಕಷ್ಟವೇ?'' ಎಂದು ಅದು ಹೇಳಿದೆ.
ಹೀಗಾಗಿ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿರುವುದು ಸೂಕ್ತವಾಗಿಯೆ ಇದೆ ಎಂದು ನ್ಯಾಯಾಲಯ ಹೇಳಿತು.